ನನಗೂ ಮದುವೆಯಾಗಬೇಕೆನಿಸುವುದಿಲ್ಲವೇ?

ಪ್ರ : ನನಗೀಗ 34 ವರ್ಷ. ನಮ್ಮದು ಮೇಲ್ಜಾತಿಯ ಕೃಷಿಕ ಕುಟುಂಬ. ಪಿಯುಸಿವರೆಗೆ ಓದಿದ್ದೇನೆ. ಇಬ್ಬರು ಸಹೋದರಿಯರಿಗೆ ಮದುವೆಯಾಗಿದೆ. ನಾನೊಬ್ಬನೇ ಗಂಡು ಮಗನಾದ್ದರಿಂದ ಮನೆಯಲ್ಲಿಯೇ ಇರುವ ಅನಿವಾರ್ಯತೆ. ಐದು ಎಕರೆ ಅಡಿಕೆತೋಟವಿರುವ ನಾವು ಅನುಕೂಲಸ್ಥರೇ. ಮಾರುತಿ ಓಮ್ನಿ, ಬೈಕ್ ಓಡಿಸಿಕೊಂಡು ದಿಲ್‍ದಾರನಾಗಿಯೇ ಇದ್ದೇನೆ. ಆದರೆ ಮದುವೆಯಾಗುವ ಯೋಗ ಮಾತ್ರ ನನಗಿನ್ನೂ ಬಂದಿಲ್ಲ. ಹಳ್ಳಿಯಲ್ಲಿರುವ ನನ್ನನ್ನು ಬಡಹುಡುಗಿಯೂ ಒಪ್ಪುತ್ತಿಲ್ಲ. ಅಮ್ಮನಿಗಂತೂ ಹುಡುಗಿ ಹುಡುಕಿ ಸಾಕಾಗಿದೆ. ಆರು ತಿಂಗಳ ಹಿಂದೆ ಉತ್ತರಕರ್ನಾಟಕದಿಂದ ಕೆಲವು ಕುಟುಂಬಗಳು ಕೆಲಸನಿಮಿತ್ತ ನಮ್ಮ ಊರಿಗೆ ಬಂದು ನೆಲೆಸಿದ್ದಾರೆ. ನಮ್ಮ ತೋಟದ ಕೆಲಸವನ್ನೆಲ್ಲ ಅಚ್ಚುಕಟ್ಟಾಗಿ ಮಾಡುತ್ತಾರೆ. ಆ ಗುಂಪಿನಲ್ಲಿ ಒಂದು ಹುಡುಗಿ ನನಗೆ ಹತ್ತಿರವಾಗಿದ್ದಾಳೆ. ಅವಳ ಬಣ್ಣ ನಸುಗಪ್ಪಾದರೂ ಕೋರೈಸುವ ಆ ಕಣ್ಣುಗಳ ಕಾಂತಿಗೆ ಮರುಳಾಗಿದ್ದೇನೆ. ಅವಳ ಕಟೆದ ದೇಹ ಸೌಂದರ್ಯ ಜಿಮ್ಮಿಗೆ ಹೋಗಿ ಕಸರತ್ತು ಮಾಡಿದಂತಿದೆ. ಹೆಚ್ಚು ಕಲಿಯದಿದ್ದರೂ ಎಲ್ಲದರಲ್ಲೂ ಚುರುಕಿರುವ ಆ ಹುಡುಗಿಯ ಮೇಲೆ ನನಗೆ ಸೆಳೆತ.  ಅವಳಿಗೂ ನನ್ನ ನೋಡಿದರೆ ಪ್ರೀತಿ. ನಾವಿಬ್ಬರೂ ಅನೇಕ ಬಾರಿ ತೋಟದ ಮರೆಯಲ್ಲಿ ಒಂದಾಗಿದ್ದೇವೆ. ಅವಳನ್ನೇ ಮದುವೆಯಾಗಲೂ ನಾನು ರೆಡಿ ಇದ್ದೇನೆ. ಮನೆಯವರಿಗೆ ವಿಷಯ ಗೊತ್ತಾಗಿ ರಾದ್ಧಾಂತ ಮಾಡುತ್ತಿದ್ದಾರೆ. ಅವರಿಗಂತೂ ನನಗೆ ಹುಡುಗಿ ಹುಡುಕಲು ಸಾಧ್ಯವಾಗಿಲ್ಲ. ನಾನು ಬಯಸುವ ಹುಡುಗಿಯನ್ನು ಮದುವೆಮಾಡಿಸಿದರೆ ಅವರಿಗೇನು ಕಷ್ಟ? ನನಗೂ ಒಂಟಿ ಜೀವನ ಸಾಕಾಗಿದೆ. ನನ್ನ ಮೈಮನಸ್ಸಿಗೆ ಜೊತೆ ಬೇಕೆನಿಸುವುದಿಲ್ಲವೇ?

: ಈ ಸಮಸ್ಯೆ ಈಗ ಹೆಚ್ಚಿನ ಕೃಷಿಕ ಕುಟುಂಬದಲ್ಲಿದೆ. ಸಿಟಿಯ ಮೋಹ ಹುಡುಗಿಯರಲ್ಲಿ ಜಾಸ್ತಿಯಾಗಿದೆ. ತಾವು ಹೆಚ್ಚು ಓದಿಲ್ಲದಿದ್ದರೂ ಪ್ಯಾಟೆಯ ಹುಡುಗನೇ ಬೇಕು. ಸಿಟಿಯಲ್ಲಿ ಗೂಡಿನಂತಿರುವ ಬಾಡಿಗೆ ಮನೆಯಾದರೂ ಸರಿ, ಹಳ್ಳಿಯ ಬೇಸಾಯದ ಜಂಜಾಟ, ನೆಂಟರಿಷ್ಟರನ್ನು ಉಪಚರಿಸುವುದು ಯಾರಿಗೂ ಬೇಡವಾಗಿದೆ. ತಾವು ಹಳ್ಳಿಯಲ್ಲಿ ಜನಿಸಿದ್ದರೂ ಅಲ್ಲಿ ಎಲ್ಲಾ ಸೌಲತ್ತು ಇದ್ದರೂ ಯಾರಿಗೂ ಹಳ್ಳಿಯಲ್ಲಿ ವಾಸಿಸುವುದು ಇಷ್ಟವಿಲ್ಲ. ಅದಕ್ಕಾಗಿಯೇ ನಿಮ್ಮ ಮನೆಯಲ್ಲೂ ಎಲ್ಲ ಅನುಕೂಲಗಳಿದ್ದರೂ ನಿಮಗೆ ನಿಮ್ಮ ಜಾತಿಯ ಹುಡುಗಿ ಸಿಗುವುದು ಕಷ್ಟವಾಗಿದೆ. ನಿಮ್ಮ ಕಷ್ಟವನ್ನೀಗ ನಿಮ್ಮ ಮನೆಯವರು ಅರ್ಥಮಾಡಿಕೊಳ್ಳಲೇಬೇಕು. ವಾಸ್ತವಕ್ಕೆ ಬೆನ್ನುತಿರುಗಿಸಿ ಹೋಗಲು ಸಾಧ್ಯವಿಲ್ಲ. ಅದೂ ಅಲ್ಲದೇ ನಿಮಗೂ ಮದುವೆಯ ವಯಸ್ಸು ಮೀರುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ನೀವು ಈಗಾಗಲೇ ಅವಳನ್ನು ಅನುಭವಿಸಿಯಾಗಿದೆ. ನೀವು ಬಾಳು ಕೊಡಬಹುದು ಅಂತ ಆ ಮುಗ್ಧ ಹುಡುಗಿ ನಿಮ್ಮ ಕಾಮದಾಹವನ್ನು ತಣಿಸಿದ್ದಾಳೆ. ಮನೆಯವರು ಒಪ್ಪುವುದಿಲ್ಲ ಅಂತ ಈಗ ಆಕೆಯನ್ನು ತ್ಯಜಿಸಿದರೆ ನೀವು ಅವಳಿಗೆ ನಂಬಿಸಿ ಮೋಸಮಾಡಿದಂತಾಗುತ್ತದೆ. ಮನೆಯವರು ಒಪ್ಪಲಿ ಯಾ ಬಿಡಲಿ ನೀವೀಗ ಅವಳ ಕೈಹಿಡಿಯುವುದೇ ನ್ಯಾಯ. ನಿಧಾನವಾಗಿ ಅವಳೂ ನಿಮ್ಮ ಮನೆಯ ಸಂಪ್ರದಾಯಕ್ಕೆ ಹೊಂದಿಕೊಳ್ಳುತ್ತಾಳೆ. ಮನೆಯವರ ಮನಸ್ಸೂ ಗೆಲ್ಲುತ್ತಾಳೆ. ನೀವೀಗ ಅವಳನ್ನು ಮದುವೆಯಾದರೆ ನಿಮ್ಮಂತಹ ಅನೇಕ ಯುವ ಕೃಷಿಕರಿಗೆ ನೀವು ಮಾದರಿಯಾಗುತ್ತೀರಿ.

LEAVE A REPLY