ವೈಫಲ್ಯಗಳನ್ನು ವೈಭವೀಕರಿಸಬೇಡಿ

ಬದುಕು ಬಂಗಾರ-144

ವೈಫಲ್ಯಗಳೆಂದರೆ ಹಲವರಿಗೆ ಭಯ. ತಾವು ಕೈಗೆತ್ತಿಕೊಂಡ ಕೆಲಸದಲ್ಲಿ ವಿಫಲರಾಗುತ್ತೇವೆಂಬ ಒಂದು ಸಣ್ಣ ಸುಳಿವು ಸಿಕ್ಕರೂ ಸಾಕು ಅವರು ತಮ್ಮ ಜಾಗ ಬಿಟ್ಟು ಅದಾಗಲೇ ಕದಲಿರುತ್ತಾರೆ. ಆದರೆ ವೈಫಲ್ಯದಿಂದ ಯಾರು ಕೂಡ ನಾಚಿಕೆ ಪಟ್ಟುಕೊಳ್ಳುವ ಅಗತ್ಯವಿಲ್ಲ. ನಮ್ಮ ನಡುವೆ ವೈಫಲ್ಯ ಕಂಡವರು ಹಲವರಿದ್ದಾರೆ. ಇನ್ನು ಕೆಲವರು ತಮ್ಮ ವೈಫಲ್ಯಗಳನ್ನು ವೈಭವೀಕರಿಸಿ ಎಲ್ಲರೊಡನೆ ಅದರ ಬಗ್ಗೆ ಹೇಳುತ್ತಿರುತ್ತಾರೆ. ಹೀಗೆ ಹೇಳಿಕೊಳ್ಳುವುದರಿಂದ ಅವರ ಮನಸ್ಸಿಗೆ ಯಾವುದೋ ಒಂದು ವಿಧದಲ್ಲಿ ಸಮಾಧಾನ ದೊರೆಯುತ್ತದೆ. ಆದರೆ ವಾಸ್ತವದಲ್ಲಿ ವೈಫಲ್ಯಗಳನ್ನು ವೈಭವೀಕರಿಸಬಾರದೆನ್ನುತ್ತಾರೆ ತಜ್ಞರು. ಅದಕ್ಕೆ ಅವರು ಕೆಲ ಕಾರಣಗಳನ್ನೂ ನೀಡುತ್ತಾರೆ.

ವೈಫಲ್ಯಗಳಿಗೆ ಕೆಲವೊಂದು ತಪ್ಪುಗಳು ಕಾರಣ. ಇತರರ ಸಲಹೆಯನ್ನು ಪಡೆದು ಮುಂದಡಿಯಿಟ್ಟಿದ್ದರೆ ಈ ತಪ್ಪುಗಳು ನಡೆಯದೆ ವಿಫಲತೆ ಅವರನ್ನು ಕಾಡುತ್ತಲೇ ಇರಲಿಲ್ಲ. ಆದುದರಿಂದ ತಮ್ಮ ತಪ್ಪಿನಿಂದ ಪಾಠ ಕಲಿತು ಮುಂದಡಿಯಿಟ್ಟರೆ ಮುಂದೆ ಯಶಸ್ಸು ಅವರಿಗೊಲಿಯಬಹುದು. ಹೀಗೆ ಮಾಡುವ ಬದಲು ನೀವು ನಿಮ್ಮ ವಿಫಲತೆಯ ಬಗ್ಗೆಯೇ ಹೇಳಿಕೊಂಡು ತಿರುಗುತ್ತೀರೆಂದಾದರೆ ಅದನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಿದ್ದೀರೆಂದೇ ಅರ್ಥ.

ಎಲ್ಲರೂ ವೈಫಲ್ಯವನ್ನು ವೈಭವೀಕರಿಸುತ್ತಾ ಹೋದರೆ ಮತ್ತೆ ಅವರು ತಮ್ಮ ಗುರಿ ಸಾಧಿಸಲು ಯಾವುದೇ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗುವ ಸಾಮಥ್ರ್ಯವನ್ನು ಕಳೆದುಕೊಂಡಂತೆಯೇ. ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುವ ಎದೆಗಾರಿಕೆಯಿರುವವರು ಮಾತ್ರ ಮುಂದೆ ಬರಲು ಸಾಧ್ಯವೆಂಬುದನ್ನು ಮರೆಯಬೇಡಿ. ವೈಫಲ್ಯಕ್ಕೆ ಕಾರಣಗಳನ್ನು ಹುಡುಕಿ, ಅವುಗಳನ್ನು ನಿವಾರಿಸುವ ವಿಧಾನ ಅರಿತು ನೀವು ಮುಂದಡಿಯಿಡದೇ ಇದ್ದರೆ ನೀವು ನಿಮ್ಮ ಸೃಜನಶೀಲತೆಯನ್ನೇ ಕಳೆದುಕೊಂಡಂತೆ. ನೀವು ಹಿಂದಿನಷ್ಟು ಸಕ್ರಿಯರಾಗದೆ ಆಲಸಿಗಳೂ ಆಗಬಹುದು. ವೈಫಲ್ಯ ಕಾಡಿದಾಗ ಅದನ್ನು ಬದಿಗೊತ್ತಿ ಮುಂದುವರಿಯಿರಿ.

ಅದರ ಬಗ್ಗೆಯೇ ಚಿಂತಿಸುತ್ತಾ ಚರ್ಚಿಸುತ್ತಾ ಕೂತರೆ ಫಲವಿಲ್ಲ. ವಿಫಲತೆಯ ಬಗ್ಗೆ ಭಯ ಸಾಮಾನ್ಯ. ಆದರೆ  ವಿಫಲತೆಯ ಬಗ್ಗೆ ಅನಗತ್ಯ ಭಯ ಬೇಡ. ಅದು ನಿಮ್ಮ ಉತ್ಸಾಹ ಕುಂದಿಸಬಹುದು ಆದರೆ ನಿಮ್ಮ ಮನಸ್ಸನ್ನು ಕುಗ್ಗಿಸಲು ಆಸ್ಪದ ನೀಡಬೇಡಿ. ಹೋರಾಡುವ ಛಲ ನಿಮಗಿರಲಿ, ಇಂದು ವಿಫಲತೆ ಕಾಡಿದರೇನಂತೆ, ನಾಳೆ ಯಶಸ್ಸು ನಿಮ್ಮ ಪಾಲಾಗಬಹುದು.