ಡೀಕೇಶಿ ಜ್ಯೋತಿಷಿ ದ್ವಾರಕಾನಾಥ ರೂ 800 ಕೋಟಿ ಆಸ್ತಿ ಒಡೆಯ !

ಐಟಿ ತನಿಖೆಯಿಂದ ಬಹಿರಂಗ

ಬೆಂಗಳೂರು : ಆದಾಯ ತೆರಿಗೆ ಇಲಾಖೆಯಿಂದ ದಾಳಿಗೊಳಗಾಗಿರುವ ಇಂಧನ ಸಚಿವ  ಡೀಕೆÉ ಶಿವಕುಮಾರ್ ಅವರಿಗೆ ಆತ್ಮೀಯರಾಗಿದ್ದಾರೆಂದು ಹೇಳಲಾದ ಹಾಗೂ ದ್ವಾರಕಾನಾಥ್ ಗುರೂಜಿ ಎಂದೇ ಜನಪ್ರಿಯರಾಗಿರುವ ಜ್ಯೋತಿಷಿ ವೆಲ್ಲೂರು ಶಂಕರನಾರಾಯಣ ದ್ವಾರಕಾನಾಥ ಅವರು ರೂ 800 ಕೋಟಿ ಮೌಲ್ಯದ ಸಂಪತ್ತಿನ ಒಡೆಯರಾಗಿದ್ದಾರೆ ಎಂದು ಐಟಿ ಅಧಿಕಾರಿಗಳು ಕಂಡುಕೊಂಡಿದ್ದಾರೆ.

ಶಿವಕುಮಾರ್ ಅವರು ಹೂಡಿಕೆ ಮಾಡಿರುವ ಹಣದಿಂದ ದ್ವಾರಕಾನಾಥ ಗುರೂಜಿ ಇತ್ತೀಚೆಗೆ ರೂ 800 ಕೋಟಿ ಮೌಲ್ಯದ ಆಸ್ಪತ್ರೆಯೊಂದನ್ನು  ಖರೀದಿಸಿರುವ ಬಗೆಗಿನ ಒಪ್ಪಂದದ ದಾಖಲೆಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.

ವೈದ್ಯರಾಗಿರುವ ತಮ್ಮ ಇಬ್ಬರು ಮಕ್ಕಳಿಗಾಗಿ ದ್ವಾರಕಾನಾಥ ಈ ಆಸ್ಪತ್ರೆ   ಖರೀದಿಸಿದ್ದರು. ತಮ್ಮಲ್ಲಿ ಆಸ್ಪತ್ರೆಗಾಗಿ ಭೂ ಸ್ವಾಧೀನ ಪಡಿಸಲು ಮತ್ತು ಅದನ್ನು ನಿರ್ಮಿಸಲು ಸಾಕಷ್ಟು ಹಣವಿಲ್ಲವೆಂದು ಗುರೂಜಿ ಸಚಿವರ ಬಳಿ ಹೇಳಿಕೊಂಡ ನಂತರ ಅವರು ಹಣ ಹೂಡಿಕೆ ಮಾಡಲು ಒಪ್ಪಿದ್ದರು ಎಂದು ಮೂಲಗಳು ತಿಳಿಸಿವೆ. ಗುರೂಜಿ ನಿವಾಸದಿಂದಲೂ ಹಲವಾರು ದಾಖಲೆಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈ ದ್ವಾರಕಾನಾಥ ಗುರೂಜಿ ಯಾರು ?

ಹಲವಾರು ರಾಜಕೀಯ ನಾಯಕರುಗಳಿಗೆ, ಉದ್ಯಮಿಗಳಿಗೆ, ಬಾಲಿವುಡ್ ನಟ, ನಟಿಯರಿಗೆ ಇವರು ಆಧ್ಯಾತ್ಮಿಕ ಗುರುವಾಗಿದ್ದಾರೆ. ಆರ್ಟಿ ನಗರ ನಿವಾಸಿಯಾಗಿರುವ ಅವರು ಸಾಕಷ್ಟು ಪ್ರಭಾವಶಾಲಿ ರಾಜಕೀಯ ನಂಟು ಹೊಂದಿದ್ದಾರೆ. ಶಿವಕುಮಾರ್ ಎಸ್ಜೆಆರ್ಸಿ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕನಾಗಿದ್ದಾಗಲೇ ಅವರಿಗೆ ದ್ವಾರಕಾನಾಥ್ ಪರಿಚಯವಿತ್ತು. ಅವರ ಪ್ರಯತ್ನದಿಂದಾಗಿಯೇ ಶಿವಕುಮಾರ್ ಅವರು ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಪ್ರಥಮ ಶಾಸಕತ್ವದ ಅವಧಿಯಲ್ಲಿ ಬಂದೀಖಾನೆ ಸಚಿವರಾಗಿದ್ದರು.

ಖ್ಯಾತ ಜ್ಯೋತಿಷಿ ಬೆಲ್ಲೂರು ಶಂಕರನಾರಾಯಣ ಅವರ ಪುತ್ರರಾಗಿರುವ ದ್ವಾರಕಾನಾಥ್ ಸ್ವತಹ ವೈದ್ಯರಾಗಿದ್ದು ಅವರ ಪುತ್ರ ಮತ್ತು ಪುತ್ರಿ ಕೂಡ ವೈದ್ಯರನ್ನೇ ವಿವಾಹವಾದವರು. ಚಿಕ್ಕಮಗಳೂರು ಕ್ಷೇತ್ರದಿಂದ ಇಂದಿರಾ ಗಾಂಧಿ ಗೆಲ್ಲುತ್ತಾರೆಂದು ನಿಖರ ಭವಿಷ್ಯ ನುಡಿದ ನಂತರ ದ್ವಾರಕಾನಾಥ್ ಪ್ರಸಿದ್ಧಿ ಪಡೆದಿದ್ದರು.

ವಿವಾದಗಳು

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಸಂದರ್ಭದಲ್ಲಿ  ತಮ್ಮ ಪುತ್ರಿಗೆ ಪಿಜಿ ಸೀಟ್ ದಕ್ಕಿಸಿಕೊಂಡ ಬಗ್ಗೆ ದ್ವಾರಕಾನಾಥ್ ಸಿಬಿಐ ತನಿಖೆ ಎದುರಿಸಿದ್ದರು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ತಮ್ಮ ಮನೆಯಲ್ಲಿ ನಿಧನರಾಗಿದ್ದಾಗ ದ್ವಾರಕಾನಾಥ್ ವಿವಾದಕ್ಕೊಳಗಾಗಿದ್ದರಲ್ಲದೆ  ಅರಸ್ ಅವರ ಸಾವು ಶಂಕಾಸ್ಪದವೆಂದು ಅವರ ಕುಟುಂಬ ತನಿಖೆಗೆ ಆಗ್ರಹಿಸಿತ್ತು.