ಪುತ್ತೂರಿನ ಗಾಂಧಿಕಟ್ಟೆಯ ಅಶ್ವತ್ಥ ಮರ ಉರುಳಿಸಲು ಸಮ್ಮತಿಗೆ ದೇವರಿಗೆ ಮೊರೆ

ನಮ್ಮ ಪ್ರತಿನಿಧಿ ವರದಿ

 ಪುತ್ತೂರು : ಪುತ್ತೂರಿನ ಗಾಂಧಿ ಕಟ್ಟೆ ಹಾಗೂ ಅಲ್ಲಿರುವ ಬೃಹತ್ ಅಶ್ವತ್ಥ ಮರ ಐತಿಹಾಸಿಕ. ರಾಷ್ಟ್ರಪಿತ ಮಹಾತ್ಮ ಗಾಂಧಿ  1934ರಲ್ಲಿ ಪುತ್ತೂರಿಗೆ ಭೇಟಿ  ನೀಡಿದಾಗ  ಇದೇ ಸ್ಥಳದಲ್ಲಿ ಭಾಷಣ ಮಾಡಿದ್ದರು. ಅದೇ ವರ್ಷ ಗಾಂಧಿ ಭೇಟಿಯ ಸ್ಮರಣೆಗಾಗಿ ಇಲ್ಲಿ ಅಶ್ವತ್ಥ ಗಿಡವೊಂದನ್ನು ನೆಡಲಾಗಿತ್ತು, ಮುಂದಿನ ಕೆಲ ವರ್ಷಗಳಲ್ಲಿ ಅದು ಉರುಳಿದಾಗ ಈಗ ಹೆಮ್ಮರವಾಗಿರುವ ಅಶ್ವಥ ಮರದ ಗಿಡವನ್ನು  50 ವರ್ಷಗಳ ಹಿಂದೆ ನೆಡಲಾಗಿತ್ತು. ಇದೇ ಕಾರಣಕ್ಕೆÀ  ಈ ಗಾಂಧಿ ಕಟ್ಟೆ ನಗರದ ಸ್ಮಾರಕಗಳಲ್ಲಿ ಒಂದು ಹಾಗೂ ಜನರೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ.

ಆದರೆ ಈಗ ಈ ಗಾಂಧಿ ಕಟ್ಟೆ ಹಾಗೂ ಅಶ್ವತ್ಥ ಮರಕ್ಕೆ ದೊಡ್ಡ ಕಂಟಕವೊಂದು ಎದುರಾಗಿದೆ. ಈ ಬೃಹತ್ ಅಶ್ವಥ ಮರವನ್ನು ಕಡಿದುರುಳಿಸಲು ಅನುಮತಿಗಾಗಿ ದೇವರಿಗೆ ಮೊರೆ ಹೋಗಲಾಗಿದೆ.

ಪುತ್ತೂರಿನ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಭಾಗವಾಗಿ ಅದರ ಎದುರು ವಾಣಿಜ್ಯ ಸಂಕೀರ್ಣವೊಂದನ್ನು ಅಲ್ಲಿನ ಗಾಂಧಿ ಕಟ್ಟೆಯ ಮಹತ್ವವನ್ನು ಕಡೆಗಣಿಸಿ ಅದರಿಂದ ಕೇವಲ 10 ಅಡಿ ದೂರದಲ್ಲಿ ನಿರ್ಮಿಸಲಾಗಿದೆ. ನಗರದ ಕೆಲ ಹಿರಿಯರ ಪ್ರಕಾರ ಗುತ್ತಿಗೆದಾರರು ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣಕ್ಕೆಂದು ಮೀಸಲಾದ ಭೂಮಿಯಿಂದಾಚೆಯ ಭಾಗವನ್ನು ಅತಿಕ್ರಮಿಸಿ ಈ ಕಟ್ಟಡ ನಿರ್ಮಿಸಿದ್ದಾರೆ. ಇದೀಗ ಈ ಅಶ್ವತ್ಥ ಮರ ಹಾಗೂ ಗಾಂಧಿ ಕಟ್ಟೆ ಕಟ್ಟಡಕ್ಕೆ ಅಡ್ಡವಾಗಿ ಬಿಟ್ಟಿದೆ ಎಂದು ಅದಕ್ಕೆ ಕೊಡಲಿಯೇಟು ನೀಡುವ ಬಗ್ಗೆ ಯೋಚಿಸಲಾಗುತ್ತಿದೆ.

ಬುಧವಾರ ಪುತ್ತೂರು ಮಹಾಲಿಂಗೇಶ್ವರ ಜಾತ್ರೆಯ ಪ್ರಯುಕ್ತ ಉತ್ಸವ ಮೂರ್ತಿಯ ಮೆರವಣಿಗೆ ಅತ್ತ ಸಾಗುತ್ತಿರುವಾಗ ದೇವರ ಮೊರೆ ಹೋಗಲಾಯಿತು. ಅಲ್ಲಿದ್ದವರಿಗೆ ಆಘಾತ ತರುವ ರೀತಿಯಲ್ಲಿ ಅರ್ಚಕರು ಇದಕ್ಕೆ ಸಮ್ಮತಿಸಿ ಮರ ಕಡಿಯಲು ದೇವರ ಅನುಮತಿಯಿದೆ ಎಂದುಬಿಟ್ಟರು.

ಈ ಮರವನ್ನು ಉಳಿಸುವ ಸಲುವಾಗಿ ತಾವು ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಸ್ಥಳೀಯ ಗಾಂಧಿವಾದಿ ಪುರಂದರ ಭಟ್ ಹೇಳಿದ್ದಾರೆ.