ಮಳೆಗೆ ಹೆಸರಾಗಿದ್ದ ಜಿಲ್ಲೆಗಳಿಗೆ ಇಂದು ತೀವ್ರ ಬರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಅತೀ ಹೆಚ್ಚು ಮಳೆಗೆ ಹೆಸರುವಾಸಿಯಾಗಿದ್ದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಈ ವರ್ಷ ಈ ಹಿಂದೆಂದೂ ಕಾಣದ ಬರದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ರಾಜ್ಯ ಸರ್ಕಾರ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಎರಡು ತಾಲೂಕುಗಳನ್ನು, ಉತ್ತರ ಕನ್ನಡದ ಏಳು ತಾಲೂಕುಗಳನ್ನು ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಮೂರು ತಾಲೂಕುಗಳನ್ನು ಬರಪೀಡಿತ ಜಿಲ್ಲೆಗಳೆಂದು ಘೋಷಿಸಿದೆ.

ಕಳೆದ ವರ್ಷ ಕೂಡ ದ ಕ ಜಿಲ್ಲೆಯು ತೀವ್ರ ನೀರಿನ ಕೊರತೆ ಸಮಸ್ಯೆಯನ್ನು ಎದುರಿಸಿತ್ತು. ಇದಕ್ಕೆ ಪ್ರಮುಖ ಕಾರಣ ಆಗ್ನೇಯ ಮಾರುತದ ಕೊರತೆ. 2016ರಲ್ಲಿ ಅಕ್ಟೋಬರ್ ತಿಂಗಳಿಂದ ಡಿಸೆಂಬರ್ ತಿಂಗಳ ಅವಧಿಯಲ್ಲಿ ಸುರಿದ ಮಳೆ ಪ್ರಮಾಣ ಅತ್ಯಂತ ಕಡಿಮೆಯಾಗಿದ್ದರಿಂದ ಅಂತರ್ಜಲ ಮತ್ತು ಮಣ್ಣಿನ ತೇವಾಂಶ ಮಟ್ಟ ಇಳಿಕೆಯಾಗಿ ನೀರಿನ ಮೂಲಗಳೆಲ್ಲ ಬತ್ತಿಹೋದವು. ಇದು ಬರಪೀಡಿತ ತಾಲೂಕು ಎಂದು ಘೋಷಿಸಲು ರಾಜ್ಯ ಸರ್ಕಾರವನ್ನು ಪ್ರಚೋದಿಸಿತು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ವಾರ್ಷಿಕ ಸುಮಾರು 4,000 ಮಿ ಮೀ ಮಳೆ ಸ್ವೀಕರಿಸುತ್ತಿತ್ತು. ಸಾಮಾನ್ಯವಾಗಿ ಉತ್ತಮ ದಾಖಲೆಯೇ ಆಗಿತ್ತು. ಆದರೆ ಕಳೆದ ಬಾರಿ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿತ್ತು. ಕೆಲವು ತಾಲೂಕುಗಳು ತೀವ್ರ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವುದು ಕಂಡುಬಂದಿತ್ತು. ಹಾಗಾಗಿ ಬರಪೀಡಿತ ತಾಲೂಕು ಎಂದು ಘೋಷಿಸುವುದು ಅನಿವಾರ್ಯವಾಗಿತ್ತು. ಈ ಮೂಲಕ ಇದೇ ಮೊದಲ ಬಾರಿಗೆ ಬರಪೀಡಿತ ಜಿಲ್ಲೆಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಪ್ರತಿವರ್ಷ 213 ಮಿ ಮೀ ಮಳೆ ಸ್ವೀಕರಿಸುತ್ತಿದ್ದ ಬಂಟ್ವಾಳ ತಾಲೂಕು ಕಳೆದ ಬಾರಿ 70.8 ಮಿ ಮೀ ಮಳೆ ಸ್ವೀಕರಿಸಿದೆ. ಇದೇ ವೇಳೆ ಮಂಗಳೂರು ತಾಲೂಕು 303 ಮಳೆ ಸ್ವೀಕರಿಸುವಲ್ಲಿಗೆ ಕೇವಲ 95.5 ಮಿ ಮೀ ಮಳೆ ಸ್ವೀಕರಿಸಿದೆ.

ತಾಲೂಕುಗಳ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಉದಾಹರಣೆಗೆ ಮಂಗಳೂರು ತಾಲೂಕು ಒಂದರಲ್ಲಿಯೇ ಜನವರಿ ತಿಂಗಳಲ್ಲಿ 18 ಮೀಟರಿಗೆ ಇಳಿದಿದೆ, 2016ರಲ್ಲಿ ಇದೇ ಸಮಯದಲ್ಲಿ ಅಂತರ್ಜಲ ಮಟ್ಟ 12.97 ಮೀಟರ್ ಇತ್ತು.

ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ ತಾಲೂಕುಗಳ ಶಾಸಕರಿಗೆ ಬರ ಕೆಲಸಗಳಿಗಾಗಿ ರೂ 40 ಲಕ್ಷಕ್ಕೆ ಬದಲಾಗಿ ರೂ 60 ಲಕ್ಷ ದೊರೆಯಲಿದೆ ಎಂದು ಉಡುಪಿ ಶಾಸಕ ಮತ್ತು ರಾಜ್ಯ ಮೀನುಗಾರಿಕೆ, ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.