ಕಾರ್ತಿಕ್ ಕೊಲೆಗಾರರನ್ನು ಬಂಧಿಸದಿದ್ದರೆ ಜಿಲ್ಲೆಗೇ ಬೆಂಕಿ

ಪ್ರತಿಭಟನೆಯಲ್ಲಿ ಮಾತಾಡಿದ ಸಂಸದ ನಳಿನ್

ನಮ್ಮ ಪ್ರತಿನಿಧಿ ವರದಿ
ಮಂಗಳೂರು : ಮುಂದಿನ ಹತ್ತು ದಿನಗಳಲ್ಲಿ ಕಾರ್ತಿಕ್ ರಾಜ್ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ  ಜಿಲ್ಲೆಗೆ ಬೆಂಕಿ ಹಾಕಲು ಸಿದ್ಧ  ಎಂದು ಸಂಸದ ನಳಿನಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಇಡೀ ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ
ಎರಡು ತಿಂಗಳ ಹಿಂದೆ ನಡೆದ ಮಂಗಳೂರು ತಾ ಪಂ ಮಾಜಿ ಉಪಾಧ್ಯಕ್ಷ ಉಮೇಶ್ ಗಾಣಿಗರ ಪುತ್ರ ಕಾರ್ತಿಕ್ ರಾಜ್ ಕೊಲೆ ಆರೋಪಿಗಳ ಪತ್ತೆಗೆ ಆಗ್ರಹಿಸಿ ಭಾನುವಾರ ಬೆಳಿಗ್ಗೆ ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ಪಜೀರು ಸುದರ್ಶನ ನಗರದಿಂದ ಕೊಣಾಜೆ ಠಾಣೆಯವರೆಗೆ ನಡೆದ ಮೌನ ಜಾಥಾ ಹಾಗೂ ಠಾಣೆಯೆದರು ನಡೆದ ಪ್ರತಿಭಟನಾ ಸಭೆಯಲ್ಲಿ ನಳಿನ್ ಮಾತನಾಡಿದರು
ಉಳ್ಳಾಲದಲ್ಲಿ ಹಿಂದೂಗಳ ಮೇಲಿನ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ  ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ. ಇಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆಯಾದರೂ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿಲ್ಲ ಎಂದರು.
ಗಡಿನಾಡು ಕಾಸರಗೋಡು  ಕೇರಳದಿಂದ ಉಳ್ಳಾಲಕ್ಕೆ ಬರುವ ಭಯೋತ್ಪಾದಕರಿಂದ ಇಂತಹ ಹೀನ ಕೃತ್ಯ ನಡೆಯುತ್ತಿದೆ  ಗಡಿ ಪ್ರದೇಶವಾಗಿರುವುದರಿಂದ ಸುಲಭವಾಗಿ ನುಸುಳಿ ಬರುತ್ತಿದ್ದಾರೆ. ಈ ಎಲ್ಲಾ ಕ್ರಿಮಿನಲ್ ಚಟುವಟಿಕೆಗಳಿಗೆ ಈ ಭಾಗದ ಶಾಸಕರೇ ನೇರ ಹೊಣೆಯಾಗಿದ್ದಾರೆ. ಅನ್ಯಧರ್ಮದ ಮೇಲೆ ಹಿಂದೂ ಅಪರಾಧ ಎಸಗಿದನೆಂದರೆ ಆತನ ಕುಟುಂಬಿಕರ ಸಹಿತ ಮನೆಮಂದಿಯನ್ನೇ ಪೊಲೀಸರು ತಂದು ಠಾಣೆಯಲ್ಲಿ ಕೂರಿಸುತ್ತಾರೆ. ಜಾತ್ರಾ ಸಮಯದಲ್ಲಿ ಕೋಳಿ ಅಂಕಕ್ಕೆ ದಾಳಿ ನಡೆಸಿ ಬಂಧಿಸುವ ಪೊಲೀಸರು  ಕೊಲೆ ಆರೋಪಿಗಳನ್ನು ಬಂಧಿಸದೇ ಇರುವುದು ವಿಪರ್ಯಾಸ  ಎಂದು ವ್ಯಂಗ್ಯವಾಡಿದರು
ಕಳೆದ ಒಂದು ವರ್ಷದಿಂದ ಉಳ್ಳಾಲ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ವ್ಯಾಪಕ ದುಷ್ಕರ್ಮಿಗಳ ಕೃತ್ಯ ನಡೆಯುತ್ತಿದೆ  ಆದರೂ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ  ಇದು ಅವರ ಕಾರ್ಯವೈಫಲ್ಯವನ್ನು ತೋರಿಸುತ್ತದೆ. ಶೃಂಗೇರಿಯಲ್ಲಿ ಜಾನುವಾರು ಕಳವುಗೈಯ್ಯುವ ಸಂದರ್ಭ ಪೊಲೀಸರ ಗುಂಡಿಗೆ ಬಲಿಯಾದ ಗೋಗಳ್ಳನಿಗೆ 20 ಲಕ್ಷ ರೂ ಪರಿಹಾರ ನೀಡುವ ರಾಜ್ಯ ಸರಕಾರ  ಕಾರ್ತಿಕ್ ರಾಜ್ ಬಗ್ಗೆ ಕನಿಷ್ಠ ಮಾಹಿತಿಯನ್ನೂ ಕಲೆ ಹಾಕಲು  ಆರೋಪಿಗಳನ್ನು ಬಂಧಿಸಲು ಮುಂದಾಗಿಲ್ಲ. 10 ದಿನಗಳಲ್ಲಿ ಆರೋಪಿಗಳ ಪತ್ತೆಯಾಗದೇ ಇದ್ದಲ್ಲಿ  ಠಾಣೆಯೆದರು ಧರಣಿ ನಡೆಸುವುದು ಶತಃಸಿದ್ಧ  ಎಂದು ಎಚ್ಚರಿಸಿದರು

ವಿವಾದಾತ್ಮಕ ಹೇಳಿಕೆ
ಬಳಿಕ ಸಮಜಾಯಿಷಿಕೆ

ಕಾರ್ತಿಕ್ ರಾಜ್ ಕೊಲೆ ಪ್ರಕರಣದ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸದೇ ಇದ್ದಲ್ಲಿ ಜಿಲ್ಲೆಗೆ ಬೆಂಕಿ ಹಾಕಲು ಸಿದ್ಧ” ಎಂದು ಹೇಳಿರುವ ಸಂಸದ ನಳಿನ್ ತನ್ನ ತಪ್ಪಿನ ಅರಿವಾಗಿ ಇದೀಗ ಸಮಜಾಯಿಷಿಕೆ ನೀಡಿದ್ದಾರೆ.
ಅವರ ಹೇಳಿಕೆ ಸಂಜೆ ವೇಳೆಗಾಗಲೇ ವಾಟ್ಸಪ್ಪಿನಲ್ಲಿ ವಿಡಿಯೋ ಸಹಿತ ವೈರಲ್ ಆಗಿದ್ದು, ತನ್ನ ಭಾಷಣ ಉದ್ರೇಕಕಾರಿಯಾಗಿದೆ ಎಂದರಿತ ನಳಿನ್ ಬಳಿಕ ತೇಪೆ ಹಚ್ಚಲು ಯತ್ನಿಸಿದ್ದಾರೆ. ಭಾಷಣ ಸಂದರ್ಭ ಪದ ಬಳಕೆ ತಪ್ಪಾಗಿದೆ. ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಜಿಲ್ಲೆಯ ಜನರೇ ಬೆಂಕಿ ಹಾಕುವರು” ಎಂದು ಹೇಳಿರುವುದಾಗಿ ಸಂಸದ ನಳಿನ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.