ವಸತಿ ಗೃಹ ಬಿಡುವಂತೆ ಉಡುಪಿ ಸರಕಾರಿ ಆಸ್ಪತ್ರೆ ಸಿಬ್ಬಂದಿಗೆ ಸರ್ಜನ್ ತುರ್ತು ಆದೇಶ

ಸರಕಾರಿ ಆಸ್ಪತ್ರೆ ಬಿ ಆರ್ ಶೆಟ್ಟಿಗೆ ವಹಿಸಿದ ಹಿನ್ನೆಲೆ 

ನಮ್ಮ ಪ್ರತಿನಿಧಿ ವರದಿ

ಉಡುಪಿ : ಜಿಲ್ಲಾ ಸರಕಾರಿ ಹಾಜಿ ಅಬ್ದುಲ್ಲಾ ಸಾಹೇಬ್ ಸ್ಮಾರಕ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು  ಮುಖ್ಯಮಂತ್ರಿ ಸಿದ್ದರಾಮಯ್ಯ ಅಬುಧಾಬಿ ಉದ್ಯಮಿ ಬಿ ಆರ್ ಶೆಟ್ಟಿಗೆ ಲೀಸ್ ನೀಡಿದ ನಂತರ ಅಲ್ಲಿನ ವೈದ್ಯರು, ಸಿಬ್ಬಂದಿಗಳಿಗೆ ಕೂಡಲೇ ಸರಕಾರಿ ವಸತಿಗೃಹಗಳನ್ನು ಬಿಟ್ಟುಬಿಡುವಂತೆ ಜಿಲ್ಲಾ ಅಜ್ಜರಕಾಡು ಸರಕಾರಿ ಆಸ್ಪತ್ರೆಯ ಸರ್ಜನ್ ಮಧುಸೂದನ್ ನಾಯಕ್ ಬೆದರಿಕೆಯೊಡ್ಡಿದ್ದಾರೆನ್ನಲಾಗಿದೆ.

ನಗರದ ಅಲಂಕಾರ್ ಟಾಕೀಸ್ ಎದುರು ಕಾರ್ಯಾಚರಿಸುತ್ತಿರುವ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಮಹಿಳಾ ವೈದ್ಯರಾದ ದಮಯಂತಿ, ಶಕುಂತಳ, ನಾಲ್ವರು ಮಹಿಳಾ ನರ್ಸುಗಳು ಮತ್ತು ಏಳು ಡಿ ಗ್ರೂಪ್ ನೌಕರರು ಇದೀಗ ಯಾವುದೇ ಪರ್ಯಾಯ ವ್ಯವಸ್ಥೆಯಿಲ್ಲದೇ ದಿಢೀರನೆ ಮೂರು ದಿನಗಳ ಒಳಗಾಗಿ ತೆರವು ಮಾಡಬೇಕೆಂದು ಆಸ್ಪತ್ರೆಯ ಸರ್ಜನ್ ಮೌಖಿಕ ಆದೇಶ ನೀಡಿರುವುದು ಗೊತ್ತಾಗಿದೆ.

ತಕ್ಷಣವೇ ಮನೆ ಖಾಲಿ ಮಾಡದಿದ್ದಲ್ಲಿ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಕಡಿತಗೋಳಿಸಗಾವುದೆಂದು ಬೆದರಿಕೆಯನ್ನು ನೀಡಿರುವುದು ಉಡುಪಿಯ ಜನತೆ ತಲೆ ತಗ್ಗಿಸುವಂತಾಗಿದೆ ಎಂದು ಉಡುಪಿಯ ಕಾಂಗ್ರೆಸ್ಸಿನ  ಮಾಜಿ ಶಾಸಕ ಯು ಆರ್ ಸಭಾಪತಿ ಹೇಳಿದ್ದಾರೆ.

ಸರಕಾರದ ಆದೇಶದಂತೆ ಜಿಲ್ಲಾಡಳಿತ ಯಾವುದೇ ಎಂಒಯು (ಕರಾರು ಪತ್ರ) ನೊಂದಾವಣೆಯಾಗದೆ ಉಡುಪಿ ಮೂಲದ ಅಬುಧಾಬಿ ಉದ್ಯಮಿ ಬಿ ಆರ್ ಶೆಟ್ಟಿಗೆ 60 ವರ್ಷಗಳವರೆಗೆ ಗುತ್ತಿಗೆ ನೀಡುವುದನ್ನು ಉಡುಪಿಯ ಜನತೆ ಸಾರ್ವತ್ರಿಕವಾಗಿ ವಿರೋಧಿಸುತ್ತಿದ್ದರೂ ಸರಕಾರ ಬಲಪ್ರಯೋಗ ಮಾಡುತ್ತಿರುವ ವಿರುದ್ಧ ಸಭಾಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.