ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ಭಿನ್ನಮತ

ಡೀವಿಗೆ ದೊರೆಯದ ಬೂತ್ ಪ್ರಚಾರ ಸಮಿತಿ ಅಧ್ಯಕ್ಷ ಹುದ್ದೆ

ಬೆಂಗಳೂರು : ಬಿಜೆಪಿಯ ಪ್ರಚಾರ ಸಮಿತಿಯ ಮುಖ್ಯಸ್ಥನ ಹುದ್ದೆಯನ್ನು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡರಿಗೆ ನೀಡದೇ ಇರುವುದು ಬಿಜೆಪಿ ನಾಯಕರ ಒಂದು ಗುಂಪಿಗೆ ಅಪಥ್ಯವಾಗಿದ್ದು ಮತ್ತೆ ಪಕ್ಷದಲ್ಲಿ ಭಿನ್ನಮತ ತಲೆದೋರುವ ಲಕ್ಷಣಗಳಿವೆ.

ಪಕ್ಷದ ಬೂತ್ ಪ್ರಚಾರ ಸಮಿತಿಯ ಅಧ್ಯಕ್ಷತೆಗಾಗಿ ಸದಾನಂದ ಗೌಡ ಹೆಸರು ಆರಂಭದಲ್ಲಿ ಕೇಳಿಬರುತ್ತಿದ್ದರೂ ಹಾಗೂ  ಆರಂಭಿಕ ಕರಡು ಪ್ರತಿಯಲ್ಲಿ ಅವರ ಹೆಸರಿದ್ದರೂ ಅಂತಿಮ ಪಟ್ಟಿಯಲ್ಲಿ ಅವರ ಹೆಸರು ನಾಪತ್ತೆಯಾಗಿರುವುದು ಹಾಗೂ ಯಡ್ಯೂರಪ್ಪ ಅವರನ್ನೇ ಈ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿರುವುದು ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ಈಗಾಗಲೇ ತನ್ನ ಹೆಸರು ಕೈಬಿಟ್ಟಿರುವ ಬಗ್ಗೆ ಗೌಡ  ಆಕ್ಷೇಪ ವ್ಯಕ್ತಪಡಿಸಿದ್ದಾರಲ್ಲದೆ ಇದಕ್ಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯನ್ನು ದೂರಿದ್ದಾರೆ.  ಕೇಂದ್ರ ಸಚಿವರಾಗಿರುವ ಗೌಡ ಬೂತ್ ಪ್ರಚಾರ ಸಮಿತಿ ಅಧ್ಯಕ್ಷರಾದರೆ ಆ ಹುದ್ದೆಗೆ ಹೆಚ್ಚಿನ ಗಮನ

ನೀಡಲು ಅಸಾಧ್ಯವಾಗಬಹುದೆಂದು ಶೋಭಾ ಅಭಿಪ್ರಾಯ ಪಟ್ಟಿದ್ದಾರೆನ್ನಲಾಗಿದೆ. ಆದರೆ ಶೋಭಾ ಟ್ವೀಟ್ ಒಂದನ್ನೂ ಮಾಡಿ ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.

ಈತನ್ಮಧ್ಯೆ ಪಕ್ಷದ ಮಹತ್ವಾಕಾಂಕ್ಷೆಯ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಸಂಚಾಲಕಿಯನ್ನಾಗಿ ಶೋಭಾರನ್ನು ನೇಮಿಸಿರುವ ಬಗ್ಗೆ ಹಿರಿಯ ನಾಯಕ ಆರ್ ಅಶೋಕ್ ಅಸಮಾಧಾನ ತೋಡಿಕೊಂಡಿದ್ದಾರೆನ್ನಲಾಗಿದೆ. ಹಿರಿಯ ನಾಯಕರೊಬ್ಬರನ್ನು ಈ ಹುದ್ದೆಗೆ ನೇಮಿಸಬೇಕಿತ್ತು ಎಂದಿರುವ ಅಶೋಕ್ ಅವರನ್ನು ಸಮಾಧಾನಪಡಿಸಲೆಂದೇ ಅವರಿಗೆ ಯಾತ್ರೆಯ ಬೆಂಗಳೂರು ವಿಭಾಗದ ಸಂಚಾಲಕ ಹುದ್ದೆಯನ್ನು ನೀಡಲಾಗಿದೆ.

ಇಂದು ರಾಜಧಾನಿಯಲ್ಲಿ ಸಭೆ ಸೇರಲಿರುವ ಪಕ್ಷದ ಕೋರ್ ಸಮಿತಿಯು ಇತ್ತೀಚಿಗಿನ ಬೆಳವಣಿಗೆಗಳನ್ನು ಚರ್ಚಿಸುವ ಸಾಧ್ಯತೆಯಿದೆ.