ಟಿಬೆಟಿಯನ್ನರ ದೊರ್ಜೆ ಶುಂಗ್ಡೆನ್ ದೇವಳಕ್ಕೆ ಪೊಲೀಸ್ ಭದ್ರತೆ ವಿಚಾರದಲ್ಲಿ ಭಿನ್ನಾಭಿಪ್ರಾಯ

ವಿಶೇಷ ವರದಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಟಿಬೆಟಿಯನ್ನರ ಎರಡು ಗುಂಪುಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿರುವ ಹಿನ್ನೆಲೆಯಲ್ಲಿ ಅಲ್ಲಿನ ಟಿಬೆಟಿಯನ್ ಕಾಲೊನಿಯಲ್ಲಿರುವ ದೊರ್ಜೆ ಶುಗ್ಡೆನ್ ದೇವಾಲಯಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಇದು ದೊರ್ಜೆ ಶುಗ್ಡೆನ್ ಆರಾಧಕರಿಗೆ ಆಕ್ರೋಶವನ್ನುಂಟು ಮಾಡಿದೆಯಲ್ಲದೆ ಪೊಲೀಸರು ಅನಗತ್ಯವಾಗಿ ಈ ನೆಪದಲ್ಲಿ ತಮ್ಮ ಮೇಲೆ ಕಣ್ಣಿಟ್ಟಿದ್ದಾರೆಂದು ದೂರುತ್ತಿದ್ದಾರೆ. ಪ್ರಸ್ತುತ ದಲಾಯಿ ಲಾಮಾ ಡಿಸೆಂಬರ್ 16ರಿಂದ  ಮುಂಡಗೋಡಿನಲ್ಲಿದ್ದು ಅಲ್ಲಿ ಶನಿವಾರದತನಕ ಉಳಿಯಲಿದ್ದಾರೆ.

ದೊರ್ಜೆ ಶುಗ್ಡೆನ್ ದಕ್ಷಿಣ ಟಿಬೆಟ್ಟಿನ ಪ್ರತೀಕಾರ ಸ್ವಭಾವದ ದೈವವಾಗಿದ್ದು, ಇದರ ಆರಾಧನೆಯನ್ನು ಟಿಬೆಟಿಯನ್ ಬೌದ್ಧ ಧರ್ಮದವರ ಒಂದು ಪಂಗಡ ಕೈಬಿಟ್ಟಿತ್ತು. ದೊರ್ಜೆ ಶುಗೆನ್ಡ್ ಆರಾಧನೆಯನ್ನು ಕೈಬಿಡುವಂತೆಯೂ ದಲಾಯಿ ಲಾಮ ಹಲವು ವರ್ಷಗಳ ಹಿಂದೆ ಆದೇಶ ನೀಡಿದ್ದು, ಆತನನ್ನು ಆರಾಧಿಸಿದರೆ ದಲಾಯಿ ಲಾಮಾರ ಆಯುಷ್ಯ ಕಡಿಮೆಯಾಗುವುದೆಂಬ ಭಾವನೆಯಿತ್ತು. ಇದರಿಂದಾಗಿಯೇ ಮುಂಡಗೋಡದಲ್ಲಿರುವ ಟಿಬೆಟಿಯನ್ನರು ಎರಡು ಪಂಗಡಗಳಾಗಿ ವಿಭಾಗಗೊಂಡಿದ್ದಾರೆ.

ಪ್ರತಿ ಬಾರಿ ದಲಾಯಿ ಲಾಮಾ ಭೇಟಿ ಸಂದರ್ಭ ಅನಗತ್ಯ ಹೆಚ್ಚಿನ ಪೊಲೀಸ್ ಸುರಕ್ಷತೆಯನ್ನು ಒದಗಿಸಲಾಗುತ್ತಿರುವುದಕ್ಕೆ ದೊರ್ಜೆ ಶುಗ್ಡೆನ್ ಆರಾಧಕರು ಸಿಟ್ಟಾಗಿದ್ದ್ದಾರೆ.

ದಲಾಯಿ ಲಾಮಾರಿಗೆ ಝೆಡ್ ಪ್ಲಸ್ ಸುರಕ್ಷೆ ಒದಗಿಸಲಾಗುತ್ತಿರುವುದರಿಂದ ಅವರು ಮುಂಡಗೊಡಿಗೆ ಭೇಟಿ ನೀಡಿದಾಗಲೆಲ್ಲಾ ಪೊಲೀಸ್ ಕಣ್ಗಾವಲು ಹೆಚ್ಚಿಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.