ಗ್ರಾ ಪಂ ತಾತ್ಕಾಲಿಕ ಸಿಬ್ಬಂದಿ ವೇತನದಲ್ಲಿ ತಾರತಮ್ಯ

 

ಗ್ರಾಮ ಪಂಚಾಯತಗಳಲ್ಲಿ ಗೌರವಧನ ಪಡೆಯುವ ಮೂಲಕ ಸೇವೆ ಸಲ್ಲಿಸುವ ತಾತ್ಕಾಲಿಕ ಸಿಬ್ಬಂದಿಗೆ ವೇತನ ವಿತರಣೆಯಲ್ಲಿ ಗ್ರಾ ಪಂ ಅನುಸರಿಸುತ್ತಿರುವ ಏಕರೂಪದ ನೀತಿಯಿಂದಾಗಿ ಅದೆಷ್ಟೋ ವರ್ಷಗಳಿಂದ ಗ್ರಾ ಪಂ.ಗಳಲ್ಲಿ ಪ್ರಾಮಾಣಿಕವಾಗಿ ಸಲ್ಲಿಸುತ್ತಿಸುತ್ತಿರುವ ನೌಕರರಿಗೆ ಬೆಲೆಯೇ ಇಲ್ಲದಂತಾಗಿದೆ.
ಉಡುಪಿ ಜಿಲ್ಲೆಯ ಬೇರೆ ಬೇರೆ ಗ್ರಾಮ ಪಂಚಾಯತುಗಳಲ್ಲಿ ಮಂಡಲ ಪಂಚಾಯತ್ ಅಸ್ತಿತ್ವಕ್ಕೆಬಂದಾಗಿನಿಂದ ಸೇವೆಯಲ್ಲಿರುವ ಕ್ಲರ್ಕ್/ಬಿಲ್ ಕಲೆಕ್ಟರ್ ನೌಕರರು ಈಗಲೂ ಕಾರ್ಯನಿರ್ವಹಿಸುತ್ತಿದ್ದು, ಅವರ ಪೈಕಿ ಹೆಚ್ಚಿನವರು ನಿವೃತ್ತಿಯ ಅಂಚನ್ನು ತಲುಪಿದ್ದಾರೆ. ಅವರಿಗೆ ಈ ಏಕರೂಪದ ನೀತಿಯಿಂದಾಗಿ ಅನ್ಯಾಯವಾಗುತ್ತಿದೆ. ಸೇವೆಯ ಹಿರಿತನವನ್ನು ಗೌರವಿಸಿ ನ್ಯಾಯಯುತವಾಗಿ ವೇತನ ವಿತರಿಸಲು ಗ್ರಾ ಪಂ.ಗೆ ಅವಕಾಶವಿದೆ. ಸರಕಾರವು ಗ್ರಾ ಪಂ ಸಿಬ್ಬಂದಿಗೆ ಕನಿಷ್ಟ ವೇತನವನ್ನು ನಿಗದಿಪಡಿಸಿದೆಯೇ ಹೊರತು ಗರಿಷ್ಟ ವೇತನವನ್ನಲ್ಲ. ಆದ್ದರಿಂದ ಹಲವು ವರ್ಷಗಳಿಂದ ದುಡಿಯುತ್ತಿರುವ ಕ್ಲರ್ಕ್/ಬಿಲ್ ಕಲೆಕ್ಟರ್ ವೃಂದದ ನೌಕರರಿಗೆ ಹೆಚ್ಚಿನ ವೇತನವನ್ನು ಪಾವತಿಸಲು ಗ್ರಾ ಪಂ ಅಧಿನಿಯಮದಲ್ಲಿ ಅವಕಾಶ ಇದೆ. ಆದರೂ ಈ ಬಗ್ಗೆ ಯಾರೂ ಪ್ರಯತ್ನ ಮಾಡುತ್ತಿಲ್ಲ.
ಈ ಬಗ್ಗೆ ಗ್ರಾ.ಪಂ ಸಿಬ್ಬಂದಿ ಸಮಿತಿಗೆ ಮನವಿ ಮಾಡಿದ್ದರೂ ಗ್ರಾ ಪಂ ಸಮಿತಿಯಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬುದು ನೊಂದ ಸಿಬ್ಬಂದಿಗಳ ಅಳಲು.

  • ಕೃಷ್ಣ ಮಹಾಜನ, ಕಾರ್ಕಳ