ತಮ್ಮ ಖಾಸಗಿ ಬದುಕಿನ ಬಗ್ಗೆ ವ್ಯಂಗ್ಯವಾಡಿದ ಶೋಭಾಗೆ ದಿನೇಶ್ ರಾವ್ ಛಾಟಿಯೇಟು

ಬೆಂಗಳೂರು : ತಮ್ಮ ಖಾಸಗಿ ಬದುಕಿನ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಆಡಿದ ಮಾತುಗಳಿಗೆ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಮತ್ತವರ ಪತ್ನಿ ತಬಸ್ಸುಂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿನ ಮತೀಯ ಹಿಂಸೆ ಪ್ರಕರಣಗಳನ್ನು ಹತ್ತಿಕ್ಕುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯೊಂದರಲ್ಲಿ ಶೋಭಾ ಮಾತನಾಡುತ್ತಾ, ದಿನೇಶ್ ಅವರೇಕೆ  ದಲಿತೆಯೊಬ್ಬಳನ್ನು ವಿವಾಹವಾಗಿಲ್ಲ ಎಂದು ಪ್ರಶ್ನಿಸಿದ್ದರಲ್ಲದೆ ದಿನೇಶ್ ಯಾರನ್ನು ವಿವಾಹವಾಗಿದ್ದು ಎಂಬುದು ಎಲ್ಲರಿಗೂ ತಿಳಿದಿದೆ ಎಂದಿದ್ದರು. ದಲಿತರ ಬಗ್ಗೆ ಬಿಜೆಪಿಗರಿಗೆ ನಿಜವಾಗಿಯೂ ಕಾಳಜಿಯಿದ್ದರೆ ತಮ್ಮ ಮಕ್ಕಳನ್ನು ದಲಿತರನ್ನಾಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದಕ್ಕೆ ಪ್ರತಿಯಾಗಿ ದಿನೇಶ್ ಅವರನ್ನು ಶೋಭಾ ಟಾರ್ಗೆಟ್ ಮಾಡಿದ್ದರು.

ಆದರೆ ದಿನೇಶ್ ಗುಂಡೂರಾವ್ ಅವರು ಶೋಭಾಗೆ ತಕ್ಕ ಪ್ರತ್ಯುತ್ತರವನ್ನೇ ನೀಡಿದ್ದಾರಲ್ಲದೆ ವಿವಾಹವಾಗುವಂತೆಯೂ ಆಕೆಗೆ ಸಲಹೆ ನೀಡಿದ್ದಾರೆ. “ನಾನು 1994ರಲ್ಲಿ ಮದುವೆಯಾದೆ. ನಾನು ಯಾರನ್ನು ವಿವಾಹವಾಗಿದ್ದೇನೆಂದು ಎಲ್ಲರಿಗೂ ಗೊತ್ತು.  ಪ್ರಾಯಶಃ ಶೋಭಾ ಇನ್ನೂ ಅವಿವಾಹಿತೆ. ಯಾರನ್ನಾದರೂ ವಿವಾಹವಾಗುವ ಚಾನ್ಸ್ ಅವರಿಗೆ (ಶೋಭಾಗೆ) ಇನ್ನೂ ಇದೆ ಎಂದು ನನಗನಿಸುತ್ತದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ದಿನೇಶ್ ಅವರ ಪತ್ನಿ ಕೂಡ ಶೋಭಾ ಹೇಳಿಕೆಗೆ  ತಮ್ಮ ಫೇಸ್ಬುಕ್ ಪುಟದಲ್ಲಿ ಪ್ರತಿಕ್ರಿಯಿಸಿದ್ದು “ನಾನು ಹುಟ್ಟಿನಿಂದ ಮುಸ್ಲಿಂ ಹಾಗೂ ನನ್ನ ಪತಿ ದಿನೇಶ್ ಗುಂಡೂರಾವ್ ಬ್ರಾಹ್ಮಣ ಸಮುದಾಯದವರು ಎಂಬುದೇನೂ ರಹಸ್ಯವಾಗಿಲ್ಲ. ನಮ್ಮ ವಿವಾಹವಾಗಿ ಎರಡು ದಶಕಗಳಿಗೂ ಮೇಲಾಗಿದೆ. ಇಬ್ಬರಲ್ಲಿ ಯಾರೂ ಮತಾಂತರಗೊಂಡಿಲ್ಲ. ನಾವು ಪಾಲಿಸುವ ಧರ್ಮವನ್ನು  ಗೌರವಿಸುತ್ತೇವೆ. ಭಾರತದ  ವಿವಿಧತೆಯಲ್ಲಿ ಏಕತೆಯನ್ನು ನಾವು ಪ್ರತಿನಿಧಿಸುತ್ತೇವೆ.  ರಾಜಕೀಯ ಲಾಭಗಳಿಗಾಗಿ ಶೋಭಾ ನಮ್ಮ ಖಾಸಗಿ ಬದುಕಿನ ಬಗ್ಗೆ ಮಾತನಾಡಿದ್ದಾರೆ. ಸಂಸದೆಯಾಗಿರುವ ಶೋಭಾ ಇಂತಹ ಕೀಳು ಮಟ್ಟಕ್ಕಿಳಿದಿರುವುದು ದುರದೃಷ್ಟಕರ” ಎಂದಿದ್ದಾರೆ.