ಆರ್ಥಿಕವಾಗಿ, ಸಾಮಾಜಿಕವಾಗಿಯೂ ಹಿಂದುಳಿದ ವರ್ಗದವರಿಗೂ ಮೀಸಲು

ದಿನೇಶ್ ಗುಂಡೂರಾವ್ ಸುಳಿವು

ಮಂಗಳೂರು : ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಎಲ್ಲಾ ಜಾತಿಗಳನ್ನೂ ಮೀಸಲಾತಿಯಡಿ ತೆಗೆದುಕೊಳ್ಳಬಹುದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಜಸ್ಟೀಸ್ ಎ ಜೆ ಸದಾಶಿವ ಆಯೋಗದ ವರದಿ ಮೇಲಿನ ತನ್ನ ನಿಲುವಿನ ಕುರಿತು ಉತ್ತರಿಸಿದ ಅವರು, “ಹಿಂದುಳಿದ ಜಾತಿಗಳಿಗೆ ಆಂತರಿಕ ಮೀಸಲಾತಿ ನೀಡಲಾಗಿದೆ. ರಾಜ್ಯ ಸರಕಾರವು ವರದಿಯನ್ನು ಇನ್ನೂ ಸ್ವೀಕರಿಸಿಲ್ಲ. ಸರಕಾರವು ಕೈಗೊಂಡಿರುವ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರ ಸಮೀಕ್ಷೆ ಸದಾಶಿವ ಆಯೋಗದ ವರದಿಗಿಂತಲೂ ಹೆಚ್ಚು ವೈಜ್ಞಾನಿಕವಾಗಿದೆ” ಎಂದವರು ಅಭಿಪ್ರಾಯಪಟ್ಟರು.

ಜಾತಿ ಸಮೀಕ್ಷೆಗಳು ರಾಜ್ಯದ ಪ್ರತೀ ಸಮುದಾಯದ ಸಾಮಾಜಿಕ -ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲುತ್ತವೆ ಎಂದವರು ಪತ್ರಕರ್ತರೊಂದಿಗೆ ಮಾತನಾಡುತ್ತ ಹೇಳಿದರು. ಮೇಲ್ಜಾತಿಯ ಬ್ರಾಹ್ಮಣರು ಮತ್ತು ವೇಶ್ಯಾಜಾತಿಯಲ್ಲೂ ಹಲವು ಮಂದಿ ಆರ್ಥಿಕವಾಗಿ ಸಬಲರಾಗಿಲ್ಲ ಎಂದರು.