ಡಿಜಿಟಲ್ ವಹಿವಾಟು ಉತ್ತೇಜನಕ್ಕಾಗಿ ಡಿಜಿ ಧನ್ ಮೇಳ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದೊಡ್ಡನೋಟು 500 ಮತ್ತು 1000 ರೂ ನಿಷೇಧ ನಂತರ ಡಿಜಿಟಲ್ ವಹಿವಾಟಿಗೆ ಹೆಚ್ಚು ಉತ್ತೇಜನ ನೀಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಬೃಹತ್ ಡಿಜಿ ಧನ್ ಮೇಳ (ಇಂದು) ಜ 25ರಂದು ಮಂಗಳೂರಿನಲ್ಲಿ ನಡೆಯಲಿದೆ.

ಭಾರತ ಸರಕಾರವು ದೇಶದ ಪ್ರಮುಖ 100 ನಗರಗಳಲ್ಲಿ ಈ ಡಿಜಿ ಧನ್ ಮೇಳವನ್ನು ಆಯೋಜಿಸುತ್ತಿದ್ದು, ರಾಜ್ಯದಲ್ಲಿ ಬೆಂಗಳೂರು ನಂತರ ಎರಡನೇ ಮೇಳ ಮಂಗಳೂರಿನಲ್ಲಿ ನಡೆಯುತ್ತಿದೆ. ಜ 25ರಂದು ನಗರದ ಪುರಭವನದಲ್ಲಿ ಇಡೀ ದಿನ ಕಾರ್ಯಕ್ರಮ ನಡೆಯಲಿದೆ. ಪುರಭವನದ ಆವರಣದಲ್ಲಿ ಡಿಜಿಟಲ್ ಪಾವತಿಯ ವಿವಿಧ ಆಯಾಮಗಳ ವಸ್ತುಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಈ ವಸ್ತುಪ್ರದರ್ಶನದಲ್ಲಿ ಈಗಾಗಲೇ ಡಿಜಿಟಲ್ ವ್ಯವಹಾರವನ್ನು ಅಳವಡಿಸಿರುವ ಸಂಸ್ಥೆಗಳು ಭಾಗವಹಿಸಲಿವೆ.

ಜಿಲ್ಲೆಯ ಎಲ್ಲಾ ಪ್ರಮುಖ ಬ್ಯಾಂಕುಗಳು, ತೈಲ ಕಂಪೆನಿಗಳು, ಸಾರ್ವಜನಿಕ ಉದ್ದಿಮೆಗಳು, ಬಿ ಎಸ್ ಎನ್ ಎಲ್, ಅಂಚೆ ಇಲಾಖೆ, ಮೊಬೈಲ್ ಸಂಸ್ಥೆಗಳು, ಆಧಾರ್, ಇ ವ್ಯಾಲೆಟ್ ಸಂಸ್ಥೆಗಳು, ಕೆ ಎಂ ಎಫ್ ಮತ್ತಿತರ ಸಂಸ್ಥೆಗಳು ಭಾಗವಹಿಸಲಿವೆ.

ಈ ಸಂಸ್ಥೆಗಳು ತಮ್ಮ ವಿವಿಧ ಡಿಜಿಟಲ್ ಪಾವತಿಗಳ ವಿವರಗಳನ್ನು ನೇರ ಪ್ರಾತ್ಯಕ್ಷಿಕೆ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಿವೆ. ಡಿಜಿಟಲ್ ವಹಿವಾಟಿನಲ್ಲಿ ಸಾರ್ವಜನಿಕರಿಗೆ ಎಲ್ಲಾ ವಿವರ ನೀಡುವುದರೊಂದಿಗೆ ಅವರಲ್ಲಿರುವ ಸಂಶಯಗಳನ್ನೂ ಪರಿಹರಿಸಲು ಡಿಜಿ ಧನ್ ಮೇಳದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಲ್ಲದೇ, ಡಿಜಿಟಲ್ ವ್ಯವಹಾರ ಉತ್ತೇಜಿಸಲು ಕೇಂದ್ರ ಸರಕಾರವು ಎರಡು ಲಕ್ಕೀ ಯೋಜನೆಗಳನ್ನು ಗ್ರಾಹಕರಿಗೆ ಹಾಗೂ ವ್ಯಾಪಾರಿಗಳಿಗಾಗಿ ಜಾರಿಗೆ ತಂದಿದ್ದು, ಜ 25ರಂದು ಅಪರಾಹ್ನ 2.30 ಗಂಟೆಗೆ ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿಯೇ ಕೇಂದ್ರ ಸಚಿವರು ಲಕ್ಕೀ ಡ್ರಾ ನೆರವೇರಿಸಲಿದ್ದಾರೆ.