ಡಿಐಜಿ ರೂಪಾ ಪರ, ವಿರೋಧಿ ಘೋಷಣೆ ಕೂಗಿದ ಕೈದಿಗಳು

ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿವೆಯೆನ್ನಲಾದ ಅಕ್ರಮ ಚಟುವಟಿಕೆಗಳು  ಡಿಐಜಿ ರೂಪಾ ವರದಿಯಿಂದಾಗಿ ಬಹಿರಂಗಗೊಳ್ಳುತ್ತಿದ್ದಂತೆಯೇ ಜೈಲಿನೊಳಗೆ  ಗೊಂದಲಮಯ ವಾತಾವರಣ ಮೂಡಿದ್ದು  ಅಲ್ಲಿನ ಭದ್ರತೆ ಹೆಚ್ಚಿಸಲಾಗಿದೆ. ಶನಿವಾರ ಸಂಜೆ ಕೈದಿಗಳು  ಬಂದೀಖಾನೆ ಇಲಾಖೆಯ

ಡಿಜಿಪಿ ಸತ್ಯನಾರಾಯಣ್ ಪರ ಘೋಷಣೆ ಕೂಗಿದರೆ ಇನ್ನೊಂದು ಗುಂಪು ಡಿಐಜಿ ರೂಪಾ ಪರ ಘೋಷಣೆ ಕೂಗಿದೆಯೆನ್ನಲಾಗಿದೆ. ತಮ್ಮ ವಿರುದ್ಧ ಘೋಷಣೆಗಳು ಕೇಳಲಾರಂಭಿಸುತ್ತಿದ್ದಂತೆಯೇ ರೂಪಾ ಎಲೆಕ್ಟ್ರಾನಿಕ್ ಸಿಟಿ ಠಾಣೆಗೆ ದೂರು ನೀಡಿ ಪೊಲೀಸ್ ರಕ್ಷಣೆ ಪಡೆದರು. ಅವರ ದೂರಿನಾಧಾರದಲ್ಲಿ  ಇನಸ್ಪೆಕ್ಟರ್ ಮಹೇಶ್ ಹಾಗೂ ನಾಲ್ಕು ಮಂದಿ ಪೇದೆಗಳು ಜೈಲಿನೊಳಗೆ ಪರಿಶೀಲನೆ ನಡೆಸುತ್ತಿದ್ದಾಗ ಸುಪರಿಂಟೆಂಡೆಂಟ್ ಕೃಷ್ಣಕುಮಾರ್ ಹಾಗೂ ರೂಪಾ ನಡುವೆ ವಾಗ್ವಾದವೂ ನಡೆಯಿತೆನ್ನಲಾಗಿದೆ.