`ಕರ್ನಾಟಕ ಚುನಾವಣೆ ಫಲಿತಾಂಶದ ಬಗ್ಗೆ ಭವಿಷ್ಯ ನುಡಿಯುವುದು ಅಷ್ಟು ಸುಲಭವಲ್ಲ’

ಎಸ್ ಎಂ ಕೃಷ್ಣ

“ನನ್ನ ವಯಸ್ಸು, ನನ್ನ ಅನುಭವ ಹಾಗೂ ನನ್ನ ವರ್ಚಸ್ಸಿಗೆ ತಕ್ಕ ಹುದ್ದೆ ನೀಡಲು ಯಾವುದೇ ಪಕ್ಷಕ್ಕೂ ಕಷ್ಟ. ಆದುದರಿಂದ ಯಾರನ್ನೂ ದೂರಿ ಪ್ರಯೋಜನವಿಲ್ಲ’ ಎನ್ನುತ್ತಾರೆ ಎಸ್ ಎಂ ಕೃಷ್ಣ

ಕಳೆದ ವರ್ಷ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ `ಕಾಂಗ್ರೆಸ್ ಪಕ್ಷಕ್ಕೆ ಮ್ಯಾನೇಜರುಗಳು ಬೇಕೇ ಹೊರತು ತಳಮಟ್ಟದಲ್ಲಿರುವ ಅನುಭವೀ ನಾಯಕರಲ್ಲ’ ಎಂದು ನೋವಿನಿಂದ ಹೇಳಿಕೊಂಡಿದ್ದರು. ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವರೂ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲರೂ ಆಗಿರುವ 85 ವರ್ಷದ ಈ ಹಿರಿಯ ರಾಜಕಾರಣಿ ಈ ಸಂದರ್ಶನದಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳು, ಇತ್ತೀಚಿಗಿನ ಚುನಾವಣಾ ಫಲಿತಾಂಶಗಳ ಬಗ್ಗೆ ಮಾತನಾಡಿದ್ದಾರೆ.

  • ರಾಜಸ್ಥಾನ ಉಪಚುನಾವಣೆಗಳಲ್ಲಿ ಬಿಜೆಪಿ ಸೋಲಿನ ಬಗ್ಗೆ ಏನಂತೀರಿ ?

ಇದು ಬಿಜೆಪಿಗೆ ಎಚ್ಚರಿಕೆಯ ಕರೆಗಂಟೆ. ಮತದಾರರನ್ನು ಕಾಡುತ್ತಿರುವ ಅಸಹನೆಯ ಆರಂಭಿಕ ಲಕ್ಷಣ ಇದಾಗಿದೆ. ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸುವ ಮೊದಲು ಅದು ತನ್ನ ಮನೆಯನ್ನು ಕ್ರಮಬದ್ಧಗೊಳಿಸಬೇಕು.

  • ಗುಜರಾತ್ ಚುನಾವಣಾ ಫಲಿತಾಂಶ ಗಳು ಬಿಜೆಪಿಗೆ ನೈತಿಕ ಸೋಲೆಂದು ನಿಮಗನಿಸುವುದಿಲ್ಲವೇ ?

ಗುಜರಾತ್ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿತ್ತು. ಇಂತಹ ಒಂದು ಅಲೆ ಸರಕಾರವನ್ನು ಬುಡಮೇಲುಗೊಳಿಸಬಹುದು. ಆದರೆ ಅಲ್ಲಿ 22 ವರ್ಷಗಳ ಕಾಲ ರಾಜ್ಯಭಾರ ನಡೆಸಿದ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನೂ ಮೀರಿ ಜಯ ಸಾಧಿಸಿ ಮತ್ತೆ ಸರಕಾರ ರಚಿಸಿದೆ. ಇದು ಒಂದು ದೊಡ್ಡ ವಿಜಯವೆಂದೇ ನನಗನಿಸುತ್ತದೆ.

  • ಮೋದಿ ಸರಕಾರವು ಆದಾಯ ತೆರಿಗೆ ಇಲಾಖೆ, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳನ್ನು ಬಳಸಿಕೊಂಡು ತನ್ನ ವಿರೋಧಿಗಳನ್ನು ಮಟ್ಟ ಹಾಕಲು ದುರ್ಬಳಕೆ ಮಾಡುತ್ತಿದೆ ಎಂಬ ಆರೋಪದ ಬಗ್ಗೆ ನಿಮ್ಮ ಅಭಿಪ್ರಾಯ ?

ಐಟಿ ದಾಳಿಗಳು ಹಲವು ಕಾರಣಗಳಿಗಾಗಿ ನಡೆಯುತ್ತವೆ. ನಾನು ಬಿಜೆಪಿ ಸೇರಿದಾಗ ನನ್ನ ಅಳಿಯನನ್ನು (ಕೆಫೆ ಕಾಫಿ ಡೇ ಮಾಲಕ ವಿ ಜಿ ಸಿದ್ಧಾರ್ಥ) ಬಚಾವ್ ಮಾಡಲು ಬಿಜೆಪಿ ಸೇರಿದೆ ಎಂಬ ಗುಸುಗುಸು ಕೇಳಿ ಬಂದಿತ್ತು. ಆದರೆ ನಾನು ಬಿಜೆಪಿ ಸೇರಿದ ನಂತರ ಏನಾಯಿತು ? ಆತ ಐಟಿ ದಾಳಿ ಪ್ರಕ್ರಿಯೆಯನ್ನು ಅನುಭವಿಸಬೇಕಾಯಿತು. ದಾಳಿಗಳು ರಾಜಕೀಯ ಪ್ರೇರಿತವಾಗಿದ್ದರೆ ನನ್ನ ಅಳಿಯನ ಕಚೇರಿ ಮೇಲೆ ದಾಳಿ ನಡೆಯುತ್ತಿರಲಿಲ್ಲ.

  • ಬಿಜೆಪಿಯಲ್ಲಿ ನಿಮ್ಮನ್ನು ಉಪೇಕ್ಷಿಸಲಾ ಗುತ್ತಿದೆಯೇ ?

ಇಲ್ಲ. ನನ್ನ ವಯಸ್ಸು, ನನ್ನ ಅನುಭವ ಹಾಗೂ ನನ್ನ ವರ್ಚಸ್ಸಿಗೆ ತಕ್ಕ ಹುದ್ದೆ ನೀಡಲು ಯಾವುದೇ ಪಕ್ಷಕ್ಕೂ ಕಷ್ಟ. ಆದುದರಿಂದ ಯಾರನ್ನೂ ದೂರಿ ಪ್ರಯೋಜನವಿಲ್ಲ. ನಾನು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಬೆಂಬಲಿಸಲು ಬಿಜೆಪಿ ಸೇರಿದೆ.

  • ಕೇಂದ್ರ ಬಜೆಟ್ ನಿರಾಸಾದಾಯಕವೆಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ನೀವೇನಂತೀರಿ ?

ವಿಪಕ್ಷಗಳು ಟೀಕಿಸುವುದು ಸಹಜ. ಆದರೆ ಆರೋಗ್ಯ ಸೇವಾ ಕ್ಷೇತ್ರದ ದೃಷ್ಟಿಯಿಂದ ಬಜೆಟ್ ನೋಡಿ. ಎಲ್ಲರೂ ಈ ಬಾರಿಯ ಬಜೆಟ್ ಚುನಾವಣೆ ಕೇಂದ್ರಿತವಾಗಬಹುದೆಂದು ನಿರೀಕ್ಷಿಸಿದ್ದರು. ಆದರೆ ಹಾಗೇನೂ ಕಾಣಿಸುತ್ತಿಲ್ಲ.

  • ನೀವು ಕಾಂಗ್ರೆಸ್ ಪಕ್ಷವನ್ನು ಮಾರ್ಚ್ 2017ರಲ್ಲಿ ತೊರೆದಿದ್ದೀರಿ. ಈಗ ಹೊರಗಿನವರಾಗಿ ಪಕ್ಷದ ಬಗ್ಗೆ ನಿಮ್ಮ ಅಭಿಪ್ರಾಯ ?

ದುರದೃಷ್ಟವಶಾತ್ ಶಿಕ್ಷಿತ ಹಾಗೂ ಅನುಭವೀ ನಾಯಕರನ್ನು ಕಾಂಗ್ರೆಸ್ ಪಕ್ಷದಲ್ಲಿ ಉಪೇಕ್ಷಿಸಲಾಗುತ್ತಿದೆ. ಅನುವಂಶಿಕವಾಗಿ ರಾಹುಲ್ ಗಾಂಧಿ ನಾಯಕರಾಗಿ ಈಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಸೋನಿಯಾ ಗಾಂಧಿಗೆ ರಾಜಕೀಯದಲ್ಲಿ ಆಸಕ್ತಿ ಕುಂದಿದ್ದು ತಮ್ಮ ಪುತ್ರನನ್ನು ಪಕ್ಷದ ನಾಯಕನನ್ನಾಗಿಸುವುದು ಅವರ ಏಕೈಕ ರಾಜಕೀಯ ಅಜೆಂಡಾ ಎನ್ನುವುದು ನನಗೆ ಗೊತ್ತಿತ್ತು. ಇದೇ ಕಾರಣಕ್ಕಾಗಿ ಪಕ್ಷದ ಜತೆ 4 ದಶಕಗಳ ಕಾಲ ನಂಟು ಹೊಂದಿದ್ದ ನನ್ನಂತಹವನು ಪಕ್ಷ ತೊರೆಯಬೇಕಾಯಿತು.

  • ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದೆಂಬ ಆತ್ಮವಿಶ್ವಾಸ ನಿಮಗಿದೆಯೇ ?

ಚುನಾವಣೆಗಳು, ಮುಖ್ಯವಾಗಿ ಕರ್ನಾಟಕದ ಚುನಾವಣೆಯ ಫಲಿತಾಂಶದ ಬಗ್ಗೆ ಅಷ್ಟೊಂದು ಸುಲಭವಾಗಿ ಭವಿಷ್ಯ ನುಡಿಯುವುದು ಅಸಾಧ್ಯ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಪಾರದರ್ಶಕ, ಹಗರಣ ಮುಕ್ತ ಉತ್ತಮ ಸರಕಾರದ ಆಡಳಿತವÀನ್ನು ಗಮನಿಸಿದಾಗ ಈ ಚುನಾವಣೆಯಲ್ಲಿ ನಮಗೆ ಒಂದು ಉತ್ತಮ ಅವಕಾಶವಿದೆಯೆಂದು ಹೇಳಬಲ್ಲೆ.

  • ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನದ ಕುರಿತಾದ ಹೋರಾಟದ ಬಗ್ಗೆ ನಿಮ್ಮ ಅಭಿಪ್ರಾಯ ?

ಲಿಂಗಾಯತರಲ್ಲಿ ಅಷ್ಟು ಸುಲಭವಾಗಿ ಒಡಕುಂಟಾಗದು. ಅವರು ಬುದ್ಧಿವಂತ, ಶಿಕ್ಷಿತ ಸಮುದಾಯಕ್ಕೆ ಸೇರಿದವರು. ಮೇಲಾಗಿ ಕಳೆದ ಕೆಲ ದಿನಗಳಿಂದೀಚೆಗೆ ಈ ವಿಚಾರ ಅಷ್ಟೊಂದು ಸುದ್ದಿಯಲ್ಲಿಲ್ಲ. ಈ ಬೇಡಿಕೆ ಪರಿಶೀಲಿಸಲು ರಚಿಸಲಾಗಿರುವ ಸಮಿತಿ ಆರು ತಿಂಗಳುಗಳ ಸಮಯಾವಕಾಶ ಕೇಳಿದೆ. ಅಷ್ಟರೊಳಗಾಗಿ ಚುನಾವಣೆಗಳು ಮುಗಿದಿರುತ್ತವೆ. (ಕೃಪೆ : ದಿ ಹಿಂದೂ)

 

LEAVE A REPLY