ಶಾಲಾ ಕ್ರೀಡಾಕೂಟದಲ್ಲಿ ಅವಕಾಶ ನೀಡಲು ಭಿನ್ನಚೇತನ ಮಕ್ಕಳ ಆಗ್ರಹ

ಉಡುಪಿ : ಸರಕಾರವು ಆಯೋಜಿಸುವ ಪ್ರತಿಭಾ ಕಾರಂಜಿ ಸೇರಿದಂತೆ ಮತ್ತಿತರ ಜಿಲ್ಲಾ ಮಟ್ಟದ ಕ್ರೀಡಾಕೂಟ ಸ್ಪರ್ಧೆಗಳಲ್ಲಿ ತಮಗೂ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಖಾಸಗಿ ವಿಶೇಷ ಶಾಲೆಯ ಭಿನ್ನಸಾಮಥ್ರ್ಯದ ಮಕ್ಕಳು ಒತ್ತಾಯಿಸಿದ್ದಾರೆ.  ಸರಕಾರಿ ಶಾಲೆಯಲ್ಲಿ ಕಲಿಯುವ ಭಿನ್ನ ಸಾಮಥ್ರ್ಯದ ಮಕ್ಕಳಿಗೆ ಏರ್ಪಡಿಸುವ ಸ್ಪರ್ಧೆಯಂತೆ ತಮಗೂ ಅವಕಾಶ ಕಲ್ಪಿಸಬೇಕು ಎನ್ನುವುದು ಅವರ ಆಗ್ರಹ.

ಜಿಲ್ಲೆಯಲ್ಲಿ 15 ಖಾಸಗಿ ಸ್ಪೆಶಲ್ ಸ್ಕೂಲುಗಳು ಮತ್ತು 600 ಮಂದಿ ವಿದ್ಯಾರ್ಥಿಗಳು ಇದ್ದಾರೆ. “ಈ ಎಲ್ಲ ಸ್ಪೆಶಲ್ ಸ್ಕೂಲುಗಳಿಗೂ ಸರಕಾರವು ತಾರತಮ್ಯ ನೀತಿ ಅನುಸರಿಸದೇ ಸಮಾನ ಭಾವನೆಯಿಂದ ನೋಡಿಕೊಳ್ಳಬೇಕು. ಅವರಿಗೆ ಕೂಡಾ ವಿಶೇಷ ಒಲಿಂಪಿಕ್ಸ್‍ನಲ್ಲಿ ಭಾಗವಹಿಸುವುದಕ್ಕೆ ಅವಕಾಶ ಸಿಗಬೇಕು. ಅಲ್ಲದೆ ಶಾಲೆಯಲ್ಲಿ ದೈಹಿಕ ತರಬೇತುದಾರ ಮತ್ತು ಯೋಗ ಗುರುಗಳನ್ನು ನೇಮಕ ಮಾಡಿ ಅವರಿಗೆ ತರಬೇತಿ ನೀಡಬೇಕು. ಈ ಮೂಲಕ ಅವರಿಗೂ ಅತ್ಯುತ್ತಮ ತರಬೇತಿ ನೀಡಿ ಕ್ರೀಡಾಕೂಟಗಳಿಗೆ ನೇಮಿಸಲು ಸಾಧ್ಯ” ಎಂದು ಶಿಕ್ಷಕಿ ಶಶಿಕಲಾ ಹೇಳಿದ್ದಾರೆ.

“ಇಂತಹ ವಿದ್ಯಾರ್ಥಿಗಳಿಗೆ ಸಮಾಜದಲ್ಲಿರುವ ಖಾಸಗಿ ಸಂಘ ಸಂಸ್ಥೆಗಳು ಅವಕಾಶ ನೀಡಬೇಕು. ಆದರೆ ಇಂತಹ ಕ್ರೀಡಾಕೂಟವನ್ನು ಯಾರೂ ಆಯೋಜಿಸುತ್ತಿಲ್ಲ. ವಿಜೇತರಿಗೆ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶ ಸಿಗುತ್ತಿಲ್ಲ” ಎಂದು ವಾಗ್ಜೋತಿ ಶಾಲೆಯ ಮುಖ್ಯೋಪಾಧ್ಯಾಯರಾದ ರವೀಂದ್ರ ಹೇಳುತ್ತಾರೆ.