ಉ ಕ ಬಿಜೆಪಿಯಲ್ಲಿನ ಬೇಗುದಿ ಹಠಾತ್ ಸ್ಫೋಟ

ಅಂಡರವಲ್ರ್ಡ ಲಿಂಕ್ ಹೊಂದಿರುವ ಜಿಲ್ಲಾ ಉಸ್ತುವಾರಿ ವಿಕ್ರಮಾರ್ಜುನ ಹೆಗ್ಡೆ ತಿಂಗಳೆ ವಿರುದ್ಧ ತಿರುಗಿ ಬಿದ್ದ ಕಾರ್ಯಕರ್ತರು

ನಮ್ಮ ಪ್ರತಿನಿಧಿ ವರದಿ

ಕಾರವಾರ : ಉತ್ತರ ಕನ್ನಡ ಬಿಜೆಪಿಯಲ್ಲಿ ಒಳಗೊಳಗೆ ನಡೆಯುತ್ತಿದ್ದ ಬೇಗುದಿ ಹಠಾತ್ ಸ್ಫೋಟವಾಗಿದ್ದು, ಪಕ್ಷದ ಹಿರಿಯ ಕಾರ್ಯಕರ್ತರು ರಾಜ್ಯ ಬಿಜೆಪಿ ಕಾರ್ಯದರ್ಶಿ ಹಾಗೂ ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಉಸ್ತುವಾರಿ ವಿಕ್ರಮಾರ್ಜುನ ತಿಂಗಳೆಯವರ ವಿರುದ್ಧ ತಿರುಗಿಬಿದ್ದಿದ್ದಾರೆ.

ವಿಕ್ರಮಾರ್ಜುನ ತಿಂಗಳೆಯವರು ಪಕ್ಷದ ಸಭೆಯಲ್ಲಿ ತನ್ನನ್ನು ವಿರೋಧಿಸಿದ ಕಾರ್ಯಕರ್ತರಿಗೆ ಭೂಗತ ಜಗತ್ತಿನ ಸಹಾಯದಿಂದ ಉಡಾಯಿಸುವ ಬೆದರಿಕೆ ಹಾಕಿದ್ದಾರೆಂದು ಬಿಜೆಪಿ ನಾಯಕರು ಆರೋಪಿಸಿದ್ದು, ಈಗ ಬಿಜೆಪಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಬುಧವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ರಾಜ್ಯ ಬಿಜೆಪಿ ಮೀನುಗಾರ ಮೊರ್ಚಾದ ಅಧ್ಯಕ್ಷ ಪ್ರಸಾದ ಕಾರವಾರಕರ ಅವರು ತಿಂಗಳೆ ವಿರುದ್ಧ ಭಾರಿ ವಾಗ್ದಾಳಿ ನಡೆಸಿದರು. “ಇತ್ತೀಚೆಗೆ ಬೇರೆ ಪಕ್ಷದಿಂದ ಬಂದು ಕಾರವಾರ-ವಿಧಾನಸಭಾ ಬಿಜೆಪಿ ಟಿಕೆಟಿಗಾಗಿ ಪ್ರಯತ್ನಿಸುತ್ತಿರುವ ಉದ್ಯಮಿಯೊಬ್ಬರಿಗೆ ಸಹಾಯ ಮಾಡಲು ಹೊರಟಿರುವ ತಿಂಗಳೆಯವರು ಮೂರ್ನಾಲ್ಕು ದಿನಗಳ ಹಿಂದೆ ಪಕ್ಷದ ಕಾರ್ಯಕಾರಿ ಸಭೆಯನ್ನು ಕಾರವಾರದಲ್ಲಿ ಕರೆದಿದ್ದರು. ಆದರೆ ಉದ್ಯಮಿಗೆ ಸಭೆಗೆ ಬರಲು ಸಾಧ್ಯವಿಲ್ಲ ಎಂಬ ಒಂದೇ ಕಾರಣಕ್ಕೆ ಸಭೆಯನ್ನು ಹಠಾತ್ತಾಗಿ ಮುಂದೂಡಿದ್ದರು. ಮರುದಿನ ತಾಲೂಕಿನ ಮಾಜಾಳಿಯಲ್ಲಿ ಪಕ್ಷದ ರಕ್ತದಾನ ಶಿಬಿರವಿದ್ದ ಹಿನ್ನೆಲೆಯಲ್ಲಿ ಸಭೆಗೆ ಬರಲು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ರಾಜು ಕೊಳಂಕರ್ ಅವರಿಗೆ ತಡವಾದ ಹಿನ್ನೆಲೆಯಲ್ಲಿ ಮೊದಲೇ ಉದ್ಯಮಿಯೊಂದಿಗೆ ರೂಪಿಸಿದ್ದ ಪ್ಲಾನಿನಂತೆ ರಾಜು ಅವರನ್ನು ಬದಲಿಸಿ ಅವರ ಜಾಗಕ್ಕೆ ಇನ್ನೂ ಪಕ್ಷಕ್ಕೆ ಸೇರ್ಪಡೆಯಾಗದ ಓರ್ವ ವ್ಯಕ್ತಿಯನ್ನು ತಂದು ಕೂರಿಸಲು ಯತ್ನಿಸಿದರು” ಎಂದು ಆರೋಪಿಸಿದರು.

“ಇದನ್ನು ಪಕ್ಷದ ಮಾಜಿ ವಕ್ತಾರ ನಾಗರಾಜ ಜೋಶಿ ಸಭೆಯಲ್ಲಿ ವಿರೋಧಿಸಿದಾಗ ರೊಚ್ಚಿಗೆದ್ದ ವಿಕ್ರಮಾರ್ಜುನ ಅವರು, `ನಾನು ಭೂಗತ ಲೋಕದ ಡಾನ್ ಆಗಿದ್ದ ಶರದ್ ಶೆಟ್ಟಿಯವರ ಸಂಬಂಧಿ. ಯಾರಿಗೆ ಹೇಗೆ ಬುದ್ಧಿ ಕಲಿಸಬೇಕು ಎನ್ನುವುದು ನನಗೆ ತಿಳಿದಿದೆ. ಸುಮ್ಮನೆ ನಾನು ಹೇಳಿದ್ದನ್ನು ಒಪ್ಪಿಕೊಳ್ಳಿ. ಇಲ್ಲದಿದ್ದರೆ ನಿಮ್ಮನ್ನು ಉಡಾಯಿಸುತ್ತೇನೆ’ ಎಂದು ಬಹಿರಂಗವಾಗಿ ಬೆದರಿಕೆ ಹಾಕಿದರು. ಇದನ್ನು ಕಾರ್ಯಕರ್ತರು ವಿರೋಧಿಸಿದಾಗ ಸಿಟ್ಟಿಗೆದ್ದ ವಿಕ್ರಮಾರ್ಜುನ ಅವರು, `ನಾನು ಐದೈದು ಗನ್ ಹಿಡಿದು ತಿರುಗುತ್ತೇನೆ’ ಎಂದು ಪುನಃ ಬೆದರಿಕೆ ಹಾಕಿದರು. ಅಲ್ಲಿ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಎಂ ಜಿ ನಾಯ್ಕ ಹಾಗೂ ಹಾಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯಕ ಹಾಜರಿದ್ದರು. ಈ ವಿಷಯವನ್ನು ಪಕ್ಷದ ಹಿರಿಯರ ಗಮನಕ್ಕೆ ತಂದರೂ ಯಾರೂ ಅದನ್ನು ಗಂಭೀರಾಗಿ ಪರಿಗಣಿಸದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪತ್ರಕರ್ತರೊಂದಿಗೆ ಮಾತನಾಡಬೇಕಾಯಿತು” ಎಂದು ತಿಳಿಸಿದರು.

ಮಾಜಿ ಜಿಲ್ಲಾ ವಕ್ತಾರ ನಾಗರಾಜ ಜೋಶಿ ಮಾತನಾಡಿ, “ನಾವೆಲ್ಲ ಕಳೆದ 15-20 ವರ್ಷಗಳಿಂದ ಪಕ್ಷಕ್ಕಾಗಿ ದುಡ್ಡಿದಿದ್ದೇವೆ. ಆದರೆ ಇತ್ತೀಚೆಗೆ ಕಾಂಗ್ರೆಸ್ಸಿನಿಂದ ಬಂದ ಜನರೇ ಪಕ್ಷದಲ್ಲಿ ಹಣದ ಬಲದಿಂದ ದರ್ಬಾರ ನಡೆಸುತ್ತಿದ್ದಾರೆ. ವಿಕ್ರಮಾರ್ಜುನ ಅವರು ಈ ಪಕ್ಷಾಂತರಿಗಳನ್ನು ಸೇರಿಸಿ ಪಕ್ಷದ ಮೇಲ್ವಿಚಾರಣಾ ಕಮಿಟಿ ರಚಿಸಿದ್ದಾರೆ. ಪಕ್ಷಕ್ಕಾಗಿ ದುಡಿದ ಒಬ್ಬನೇ ಒಬ್ಬ ಕಾರ್ಯಕರ್ತನೂ ಈ ಕಮಿಟಿಯಲ್ಲಿ ಇಲ್ಲ. ಯಾರ ಬಳಿ ಹಣವಿದೆಯೋ ಅವರನ್ನೆಲ್ಲ ತಲೆಯ ಮೇಲೆ ಕೂಡಿಸಿಕೊಳ್ಳುವ ಕೆಟ್ಟ ಪರಂಪರೆಗೆ ವಿಕ್ರಮಾರ್ಜುನ ಅವರು ಕಾರಣರಾಗಿದ್ದಾರೆ. ಅಲ್ಲದೇ ಈ ಪಕ್ಷಾಂತರಿಗಳನ್ನು ಸೇರಿಸಿಕೊಂಡು ಪಕ್ಷದ ಹಳೆಯ ಕಾರ್ಯಕರ್ತರನ್ನು ಹೊರಗೆ ಹಾಕಿ ಕಾಸಿದ್ದರೆ ಕೈಲಾಸ ಎಂಬುದನ್ನು ಸಿದ್ಧ ಮಾಡಲು ಹೊರಟಿದ್ದಾರೆ. ಈಗ ಅಂಡರವಲ್ರ್ಡ್ ಬೆದರಿಕೆ ಹಾಕುತ್ತಿದ್ದಾರೆ. ಶರದ್ ಶೆಟ್ಟಿ ಈತ ದಾವೂದ್ ಇಬ್ರಾಹಿಂನ ಬಲಗೈ ಬಂಟನಾಗಿದ್ದು ಅವರ ಸಂಪರ್ಕ ವಿಕ್ರಮಾರ್ಜುನ ಅವರಿಗೆ ಇರುವುದು ಖೇದಕರ. ಇಂಥ ಜನರನ್ನು ಪಕ್ಷ ಹಾಗೂ ಹುದ್ದೆಯಿಂದ ಹೊರಗೆ ಹಾಕಬೇಕು” ಎಂದು ಒತ್ತಾಯಿಸಿದರು.

ವಿಕ್ರಮಾರ್ಜುನ ವಿರುದ್ಧ ಆರೋಪಗಳ ಸುರಿಮಳೆಗೈದ ಬಿಜೆಪಿ ನಾಯಕರು, “ವಿಕ್ರಮಾರ್ಜುನ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆದೇಶದಂತೆ ಗ್ರಾಮ ವಾಸ್ತವ್ಯಕ್ಕೆ ಬಂದಾಗ ಅವರಿಗೆ ವೈದ್ಯ ಎಂಬ ಕಾರ್ಯಕರ್ತರ ಮನೆಯಲ್ಲಿ ರಾತ್ರಿ ವಸತಿಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅವರ ಮನೆಯಲ್ಲಿ ಎಸಿ ಇಲ್ಲ ಹಾಗೂ ವೆಸ್ಟರ್ನ್ ಟಾಯಲೆಟ್ ಇಲ್ಲ ಎಂಬ ನೆಪ ಹೇಳಿ ಡಿಲಕ್ಸ್ ಹೋಟೆಲ್ ಒಂದರಲ್ಲಿ ಅವರು ಉಳಿದುಕೊಂಡಿದ್ದರು. ಇಂತಹ ಜನ ಯಾವ ರೀತಿ ಪಕ್ಷ ಕಟ್ಟುತ್ತಾರೆ ? ವಿಕ್ರಮಾರ್ಜುನ ಅವರು ಪದೇಪದೇ ರಾಜ್ಯಾಧ್ಯಕ್ಷ ಯಡ್ಯೂರಪ್ಪ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪಕ್ಷ ಇದಕ್ಕೆ ಕಡಿವಾಣ ಹಾಕಬೇಕು” ಎಂದು ಒತ್ತಾಯಿಸಿದರು.

ತಾಲೂಕು ಪಂಚಾಯತ ಉಪಾಧ್ಯಕ್ಷ ರವೀಂದ್ರ ಪವಾರ, ಯುವ ಮೋರ್ಚಾದ ಅಧ್ಯಕ್ಷ ನವೀನ ಅಂಕೋಲೆಕರ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ರಾಜು ಕೊಳಂಕರ, ಮೀನುಗಾರ ಧುರೀಣ ಉಮಾಕಾಂತ ಹರಿಕಂತ್ರ, ಪೂರ್ಣಿಮಾ ಮಹೇಕರ ಮತ್ತಿತರರಿದ್ದರು.

 

LEAVE A REPLY