ನಾನು ಮದುವೆಯಾಗಬಾರದಿತ್ತಾ ?

ಪ್ರ : ನನಗೀಗ 26 ವರ್ಷ. ಮದುವೆಯಾಗಿ ಒಂದು ವರ್ಷವಾಯಿತು. ಒಳ್ಳೆಯ ಗಂಡನ ಮನೆ ಸಿಕ್ಕಿದೆ. ಪ್ರೀತಿಸುವ ಗಂಡ, ಮಗಳಂತೆ ನೋಡಿಕೊಳ್ಳುವ ಅತ್ತೆ-ಮಾವ, ಸ್ನೇಹಿತೆಯಂತಿರುವ ಅತ್ತಿಗೆ, ಮನೆಯಲ್ಲಿ ಬೇಕಾದ ಸವಲತ್ತು ಎಲ್ಲವೂ ಇವೆ ನನಗೆ. ಆದರೆ ಇಂತಹ ಒಳ್ಳೆಯ ಕುಟುಂಬಕ್ಕೆ ನಾನು ಸರಿಯಾದವಳು ಅಲ್ಲ ಅನ್ನುವ ತಪ್ಪಿತಸ್ಥ ಭಾವನೆ ನನಗೆ ಯಾವಾಗಲೂ ಕಾಡುತ್ತಿರುತ್ತದೆ. ನನ್ನ ಜೀವನದಲ್ಲಿ ನಡೆದುಹೋದ ಕೆಲವು ಘಟನೆಗಳು ನನ್ನನ್ನು ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ. ಮುಕ್ತಮನಸ್ಸಿನಿಂದ ಪತಿಯನ್ನು ಪ್ರೀತಿಸಲೂ ಕಷ್ಟವಾಗುತ್ತಿದೆ. ಕಾಲೇಜಿನಲ್ಲಿರುವಾಗ ನಾನೊಂದು ಹುಡುಗನನ್ನು ಪ್ರೀತಿಸಿದ್ದೆ. ನಾವಿಬ್ಬರೂ ಜೋಡಿಹಕ್ಕಿಗಳಂತೆ ಎಲ್ಲೆಂದರಲ್ಲಿ ಕೈಕೈಹಿಡಿದು ವಿಹರಿಸುತ್ತಿದ್ದೆವು. ನಮ್ಮ ಮಧ್ಯೆ ಹಗ್ಗಿಂಗ್, ಕಿಸ್ಸಿಂಗ್ ಎಲ್ಲವೂ ಮಾಮೂಲಿಯಾಗಿತ್ತು. `ಅದನ್ನು’ ಮಾತ್ರ ಮದುವೆ ನಂತರ ಅಂತ ತೀರ್ಮಾನಿಸಿದ್ದೆವು.  ಪ್ರೀತಿಯಲ್ಲಿ ಮೈಮರೆತ ನಾನು ಫೈನಲ್ ಇಯರ್ ಪರೀಕ್ಷೆಯಲ್ಲಿ ಫೈಲಾಗಿಬಿಟ್ಟೆ. ಅವನು ಡಿಸ್ಟಿಂಕ್ಷನ್ನಿನಲ್ಲಿ ಪಾಸಾಗಿ ಮುಂದಿನ ಓದಿಗೆ ಊರೇ ಬಿಟ್ಟ. ಕೆಲವು ಸಮಯ ನನ್ನ ಜೊತೆ ಸಂಪರ್ಕದಲ್ಲಿ ಇದ್ದರೂ ಕೊನೆಕೊನೆಗೆ ಮಾತಾಡುವುದನ್ನೇ ನಿಲ್ಲಿಸಿದ. ನಂತರ ನನಗೊಂದು ಮಾತೂ ತಿಳಿಸದೇ ವಿದೇಶಕ್ಕೆ ಹೋಗಿಬಿಟ್ಟ. ನಾಲ್ಕೈದು ವರ್ಷ ಅವನ ನೆನಪಲ್ಲೇ ನನ್ನ ಕರೀಯರ್ ಬಗ್ಗೆಯೂ ಯೋಚಿಸದೇ ಹೇಗೋ ಕಾಲಕಳೆದೆ. ಅಮ್ಮ, ಅಪ್ಪ ಒತ್ತಾಯಿಸುತ್ತಿದ್ದರೂ ಮದುವೆಗೂ ಮನಸ್ಸು ಮಾಡಿರಲಿಲ್ಲ. ಆದರೆ ಅಪ್ಪನಿಗಾದ ಹಾರ್ಟ್‍ಅಟ್ಯಾಕ್, ಅಪ್ಪ, ಅಮ್ಮನಿಗೆ ನನ್ನ ಬಗ್ಗೆ ಇರುವ ಚಿಂತೆಯನ್ನು ನೋಡಿ ಅವರಿಗೋಸ್ಕರ ಮದುವೆಗೆ ಒಪ್ಪಿಕೊಂಡೆ. ಒಳ್ಳೆಯ ಮನೆಯೂ ಸಿಕ್ಕಿತು. ಆದರೆ ಈಗ ಗಂಡನ ಜೊತೆಗೆ ಆತ್ಮೀಯವಾಗಿರುವ ಸಂದರ್ಭದಲ್ಲೆಲ್ಲ ನನ್ನ ಮೊದಲಿನ ಹುಡುಗ ನೆನಪಾಗುತ್ತಾನೆ. ದೇಹ ಗಂಡನಿಗೊಪ್ಪಿಸಿದರೂ ಮನಸ್ಸು ಅವನನ್ನು ನೆನೆಯುತ್ತದೆ. ಇಷ್ಟು ಒಳ್ಳೆಯ ಗಂಡನಿಗೆ ಮೋಸಮಾಡುತ್ತಿದ್ದೇನೇನೋ ಅನ್ನುವ ಭಾವನೆ ಮನಸ್ಸನ್ನು ಕಾಡುತ್ತದೆ. ನಾನು ಮದುವೆಯಾಗಿ ತಪ್ಪು ಮಾಡಿದೆನಾ? ಎಲ್ಲ ವಿಷಯ ಗಂಡನಿಗೆ ಹೇಳಿಬಿಡಲಾ? ಅವರು ನನ್ನನ್ನು ಕ್ಷಮಿಸಬಹುದಾ?

ಉ : ಮೊದಲ ಪ್ರೀತಿಯನ್ನು ಅಷ್ಟು ಸುಲಭವಾಗಿ ಮರೆಯುವುದು ಕಷ್ಟವಾದರೂ ಹಿಂದಿನದ್ದೇ ನೆನೆಯುತ್ತಾ ಕುಳಿತರೆ ಆಗುತ್ತಾ ಹೇಳು? ಅವನೀಗ ನಿಮಗೆ ಮುಗಿದ ಅಧ್ಯಾಯ. ಆತನಿಗೆ ನಿಮ್ಮ ಮೇಲೆ ನಿಜವಾದ ಪ್ರೀತಿಯೇ ಇರಲಿಲ್ಲ. ಇದ್ದಿದ್ದರೆ ಎಲ್ಲೇ ಇದ್ದರೂ ನಿಮ್ಮ ಜೊತೆ ಕಾಂಟೇಕ್ಟ್ ಇಟ್ಟುಕೊಳ್ಳುತ್ತಿದ್ದ. ಕಾಲೇಜಿನ ಸಮಯದಲ್ಲಿ ಬೆಳೆದ ಆಕರ್ಷಣೆಯನ್ನು ಒಬ್ಬರು ಟೈಮ್‍ಪಾಸಿಗಾಗಿ ಅಂದುಕೊಂಡು ಇನ್ನೊಬ್ಬರು ಸೀರಿಯಸ್ ಆಗಿ ತೆಗೆದುಕೊಂಡರೆ ಅಂಥವರು ನಿಮ್ಮ ರೀತಿಯ ನೋವನ್ನೇ ಅನುಭವಿಸುವಂತಾಗುತ್ತದೆ. ಈಗ ನೀವು ಹಿಂದಿನದ್ದೆಲ್ಲ ಮರೆತು ಹೊಸಜೀವನ ಪ್ರಾರಂಭಿಸಲೇಬೇಕು. ಮೊದಲ ಹುಡುಗನ ಜೊತೆಗಿದ್ದ ಆತ್ಮೀಯ ಕ್ಷಣಗಳನ್ನು ನೆನಪಿಸಿಕೊಳ್ಳುವುದಕ್ಕಿಂತ ಅವನಿಂದ ನೀವು ಐದು ವರ್ಷ ಪಟ್ಟ ಬವಣೆಯನ್ನು ಮನಸ್ಸಿಗೆ ತಂದುಕೊಂಡರೆ ಆ ಹುಡುಗನ ಮೇಲಿದ್ದ ಪ್ರೀತಿಯೆಲ್ಲವೂ ಖಂಡಿತಾ ಮಾಯವಾಗಿಬಿಡುತ್ತದೆ. ಯಾರೂ ಮಾಡದ ತಪ್ಪನ್ನು ನೀವು ಮಾಡಿಲ್ಲ. ನೀವೀಗ ಯಾವ ಅಪರಾಧೀ ಭಾವನೆಯನ್ನೂ ಇಟ್ಟುಕೊಳ್ಳಬೇಕಿಲ್ಲ. ನಿಮಗೀಗ ಒಳ್ಳೆಯ ಪತಿ ಸಿಕ್ಕಿದ್ದಾರೆ. ಗತಿಸಿ ಹೋದ ಜೀವನದ ಬಗ್ಗೆ ಹೇಳಿ ಈಗಿರುವ ಸುಂದರ ಜೀವನವನ್ನು ಕಳೆದುಕೊಳ್ಳುವ ತಪ್ಪು ಮಾಡಬೇಡಿ.  ಗಂಡನಿಗೆ ನಿಮ್ಮ ಮೊದಲಿನ ಹುಡುಗನ ವಿಷಯ ಹೇಳಿ ಮನಸ್ಸು ಹಗುರ ಮಾಡಿಕೊಳ್ಳಲೇಬೇಕು ಅನಿಸಿದರೆ ಸಮಯ ಸಂದರ್ಭ ನೋಡಿಕೊಂಡು ಹೇಳಿ. ಗಂಡ ಅದನ್ನು ಯಾವ ರೀತಿ ತೆಗೆದುಕೊಳ್ಳಬಹುದು ಅಂತ ಇಂಡೈರೆಕ್ಟಾಗಿ ಹೇಳಿ ಅವರ ಮನ:ಸ್ಥಿತಿಯನ್ನು ಮೊದಲು ಅರ್ಥ ಮಾಡಿಕೊಳ್ಳಿ. ಅವರನ್ನು ಹೆಚ್ಚುಹೆಚ್ಚು ಪ್ರೀತಿಸುತ್ತಾ ಅವರಿಂದ ಪ್ರೀತಿಪಡೆಯುತ್ತಾ ಎಲ್ಲವನ್ನೂ ಮರೆತುಬಿಡಿ.