ನಾನು ತಪ್ಪು ಮಾಡಿದೆನಾ ?

ಪ್ರ : ನಾವಿಬ್ಬರೂ ಕಾಲೇಜ್‍ಮೇಟ್ಸ್ ಆಗಿದ್ದೆವು.  ಅವನು ಚೆನ್ನಾಗಿ ಡ್ಯಾನ್ಸ್ ಮಾಡುತ್ತಿದ್ದ. ನೋಡಲು ಕಪ್ಪಿದ್ದರೂ ಮ್ಯಾನ್ಲಿಯಾಗಿದ್ದ. ನನಗೆ ಅವನ ಮೇಲೆ ಆಕರ್ಷಣೆ ಉಂಟಾಗಿ ಹಿಂದೆ ಬಿದ್ದು ಗೆಳೆತನ ಸಂಪಾದಿಸಿದೆ. ನನ್ನ ತಂದೆ ಬಿಸಿನೆಸ್‍ಮ್ಯಾನ್. ಕೇಳಿದಷ್ಟು ಹಣ ಸಿಗುತ್ತಿತ್ತು. ಆತನ ಜೊತೆ ಕಾಲೇಜಿಗೆ ಬಂಕ್ ಹೊಡೆದು ಸಿನಿಮಾ ನೋಡುತ್ತಿದ್ದೆ. ಆತನ ಹತ್ತಿರ ಹೆಚ್ಚು ಹಣವಿರದಿದ್ದರೂ ನಾನೇ ಖುಶಿಯಿಂದ ಖರ್ಚು ಮಾಡುತ್ತಿದ್ದೆ. ಅವನು ಇಲ್ಲಿ ಸ್ನೇಹಿತರ ಜೊತೆ ರೂಂ ಮಾಡಿಕೊಂಡಿದ್ದ. ಸ್ನೇಹಿತರಿಲ್ಲದಾಗ ಕೆಲವೊಮ್ಮೆ ಇಬ್ಬರೇ ಅವನ ರೂಮಿನಲ್ಲೂ ಇರುತ್ತಿದ್ದೆವು. ಅವನು ನನಗೋಸ್ಕರ ಆಮ್ಲೆಟ್, ಮ್ಯಾಗಿ ಎಲ್ಲ ಮಾಡಿಕೊಡುತ್ತಿದ್ದ. ಕೊನೆಗೆ ನಮ್ಮಿಬ್ಬರ ಒಡನಾಟ ಮನೆಯವರಿಗೆ ಗೊತ್ತಾಗಿ ಚೆನ್ನಾಗಿ ಬೈದರು. ಹೆಚ್ಚು ಹೊರಗೆ ಕಳಿಸುತ್ತಲೂ ಇರಲಿಲ್ಲ. ನನಗೆ ಅವನನ್ನು ಬಿಟ್ಟಿರಲು ಸಾಧ್ಯವಾಗದೇ ಡಿಗ್ರಿ ಮುಗಿಯುತ್ತಿದ್ದ ಹಾಗೇ ಮನೆಯಿಂದ ಹೊರಬಂದು ಸ್ನೇಹಿತರ ಸಹಾಯದಿಂದ ಮದುವೆಯನ್ನೂ ಮಾಡಿಕೊಂಡೆವು. ನಮ್ಮ ಮನೆಯವರಿಗೆ ಸಿಟ್ಟು ಬಂದು ನನ್ನ ಜೊತೆಗಿನ ಎಲ್ಲಾ ಸಂಪರ್ಕ ಕಟ್ ಮಾಡಿಕೊಂಡರು. ಅವನ ಮನೆ ಇರುವುದು ಹಳ್ಳಿಯಲ್ಲಿ. ಅವರಿಗೆ ಚಿಕ್ಕ ಜಮೀನಿದೆ. ಅವರು ನನ್ನನ್ನು ಸೊಸೆಯಾಗಿ ಸ್ವೀಕರಿಸಿದರೂ ಆ ಹಳ್ಳಿಯಲ್ಲಿ ನನಗೆ ಬದುಕಲು ಸಾಧ್ಯವೇ ಇಲ್ಲ. ಈಗ ನನ್ನ ಗಂಡ ಬಾರ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಸಿಗುವುದು ಹತ್ತು ಸಾವಿರ ಸಂಬಳ. ಅದರಲ್ಲಿಯೇ ಚಿಕ್ಕ ಮನೆ ಬಾಡಿಗೆಗೆ ಪಡೆದು ಹೇಗೋ ದಿನಕಳೆಯುತ್ತಿದ್ದೇವೆ. ಮೊದಲೇ ನನಗೆ ಯಾವ ಕೆಲಸ ಮಾಡಿಯೂ ಗೊತ್ತಿಲ್ಲ. ಮೇಲಾಗಿ ಯಾವ ಸವಲತ್ತೂ ಮಾಡಿಕೊಳ್ಳುವಷ್ಟು ಹಣವೂ ಇಲ್ಲ. ಗಂಡನ ಬಟ್ಟೆ ತೊಳೆಯುವುದರಿಂದ ಹಿಡಿದು ಎಲ್ಲವನ್ನೂ ನಾನೇ ಮಾಡಬೇಕು. ಮೊದಲೆಲ್ಲ ತಿಂಡಿ ಮಾಡುತ್ತಿದ್ದ ಅವನೀಗ ಎಲ್ಲವನ್ನೂ ನನ್ನಿಂದಲೇ ಮಾಡಿಸುತ್ತಿದ್ದಾನೆ.  ಮದುವೆಯಾಗಿ ಈಗ ಐದು ತಿಂಗಳಾಯಿತು. ಒಂದೂ ಸಿನಿಮಾ ನೋಡಿಲ್ಲ. ಟೀವಿಯೂ ಇಲ್ಲ ನಮ್ಮ ಹತ್ತಿರ. ಗಂಡನ ಹತ್ತಿರ ಏನಾದರೂ ಕೇಳಲು ಹೋದರೆ `ನೀನೇ ಮೇಲೆ ಬಿದ್ದು ಪ್ರೀತಿಸಿ ನನ್ನ ಜೀವನವನ್ನೂ ಹಾಳು ಮಾಡಿದೆ’ ಅಂತ ನನಗೇ ಜೋರು ಮಾಡುತ್ತಾನೆ. ಮೊದಲಿನ ಹಾಗೇ ನನ್ನನ್ನು ಪ್ರೀತಿಸುತ್ತಲೂ ಇಲ್ಲ. ಮಾತುಮಾತಿಗೆ ಸಿಟ್ಟಾಗುತ್ತಾನೆ. ನನಗೆ ಹೀಗೆ ಬದುಕಲು ಸಾಧ್ಯವೇ ಇಲ್ಲ. ನಾನು ದೊಡ್ಡ ತಪ್ಪು ಮಾಡಿಬಿಟ್ಟೆ ಅಲ್ವಾ? ಈಗ ವಾಪಾಸು ಮನೆಗೆ ಹೋದರೆ ಅವರು ನನ್ನನ್ನು ಸೇರಿಸಿಕೊಳ್ಳಬಹುದಾ?

: ತುಂಬಾ ದುಡುಕಿಬಿಟ್ಟಿರಿ ನೀವು. ಪ್ರೀತಿಯ ಅಮಲಿನಲ್ಲಿ ಹಿಂದೆ ಮುಂದೆ ಸ್ವಲ್ಪವೂ ಯೋಚಿಸದೇ ಹೀಗೆ ಮನೆಬಿಟ್ಟು ಹೊರಬಂದು ಮದುವೆಯಾಗಿದ್ದು ಖಂಡಿತ ತಪ್ಪು. ಕಷ್ಟದ ಅರಿವೇ ಇಲ್ಲದೇ ಐಷಾರಾಮದಲ್ಲಿ ತಂದೆತಾಯಿಯರ ಪ್ರೀತಿಯಲ್ಲಿ ಬೆಳೆದವರು ನೀವು. ಹಾಗಿರುವಾಗ ಡಿಗ್ರಿವರೆಗೆ ಓದಿದ ನೀವು ಸ್ವಲ್ಪವೂ ವಿವೇಕವನ್ನೂ ಬಳಸದೇ ಅವಸರದಲ್ಲಿ ಮದುವೆಯಾಗುವ ದರ್ದು ಏನಿತ್ತು? ಈಗ ನಿಧಾನವಾಗಿ ಪಶ್ಚಾತ್ತಾಪ ಪಟ್ಟರೂ ಏನು ಪ್ರಯೋಜನ? ಅವನನ್ನು ಪ್ರೀತಿಸಿದರೂ ಹೇಗಾದರೂ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದರೆ ಈ ಗತಿ ಇರುತ್ತಿರಲಿಲ್ಲ. ಮನೆಯವರ ಗೌರವವನ್ನು ಮಣ್ಣಪಾಲು ಮಾಡಿ ಹೀಗೆ ಅವರಿಗೆ ಗೊತ್ತಿಲ್ಲದೇ ಮದುವೆಯಾಗಿದ್ದಕ್ಕೆ ಅವರೀಗ ಕ್ಷಮಿಸುವುದು ಸ್ವಲ್ಪ ಕಷ್ಟವೇ. ನಿಮ್ಮ ಪತ್ರ ಓದಿದರೆ ನೀವು ಧೈರ್ಯವಂತೆಯಾಗಿಯೂ ಕಾಣುತ್ತಿಲ್ಲ. ಈಗ ಮದುವೆಯಾಗಿಯಾಯಿತು. ಏನೇ ಬಂದರೂ ಎದುರಿಸುವ ಛಲವೂ ನಿಮ್ಮಲ್ಲಿ ಇದ್ದ ಹಾಗೆ ಇಲ್ಲ. ಹೇಗೂ ಡಿಗ್ರಿಯವರೆಗೆ ಓದಿದ ನೀವು ಒಂದು ಕೆಲಸ ಹಿಡಿದು ಸಂಪಾದಿಸಬಹುದಲ್ಲ? ಇಬ್ಬರ ಸಂಪಾದನೆಯೂ ಸೇರಿದರೆ ಅಚ್ಚುಕಟ್ಟಾಗಿ ಸಂಸಾರ ನಡೆಸಿದರೆ ಕೆಲವು ಸವಲತ್ತುಗಳನ್ನೂ ಮಾಡಿಕೊಳ್ಳಬಹುದು. ಈಗ ಮದುವೆಯಾದ ನಂತರ ಹಿಂದಿರುಗಿ ನೋಡದೇ ಧೈರ್ಯದಿಂದ ಬದುಕಲು ಕಲಿಯಿರಿ. ಒಬ್ಬರನ್ನೊಬ್ಬರು ದೂರುತ್ತಾ ಕೂರದೇ ಆದಷ್ಟು ನಿಮ್ಮಿಬ್ಬರ ನಡುವೆ ಜಗಳಬರದಂತೆ ನೋಡಿಕೊಳ್ಳಿ. ಪ್ರೇಮವಿವಾಹದಲ್ಲಿ ಇಬ್ಬರ ನಡುವೆ ನೂರಕ್ಕೆ ನೂರು ಪ್ರೀತಿ ಇಲ್ಲದಿದ್ದರೆ, ಬಂದ ಕಷ್ಟವನ್ನೆಲ್ಲ ಜೊತೆಯಾಗಿ ಎದುರಿಸುವ ಛಲವಿಲ್ಲದಿದ್ದರೆ ಆ ಮದುವೆಗೆ ಆಯುಷ್ಯ ಕಡಿಮೆಯೇ. ನಿಮಗೆ ಹೀಗೆ ಛಲದಿಂದ ಬಾಳಲು ಸಾಧ್ಯವೇ ಆಗದಿದ್ದರೆ ನಿಮ್ಮ ತವರಿಗೆ ಮರಳಿ ಹೆತ್ತವರ ಕಾಲಿಗೆ ಬಿದ್ದು ಕ್ಷಮೆ ಕೇಳಿ. ಎಷ್ಟೆಂದರೂ ಮಗಳಲ್ಲವೇ, ಕ್ಷಮಿಸಿಯಾರು.

1 COMMENT

Comments are closed.