`ಡೈರಿ’ ಸೋರಿಕೆ ಪ್ರಕರಣ : ಎಸ್ ಬಿ ಇನಿಶಿಯಲ್ ಟಾಪ್ ಅಧಿಕಾರಿಯದ್ದು ?

 ಬೆಂಗಳೂರು :  ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಹಾಗೂ ಮುಖ್ಯಮಂತ್ರಿಯ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿಯೂ ಆಗಿರುವ ಕೆ ಗೋವಿಂದರಾಜು ಅವರ ನಿವಾಸದಿಂದ ಮಾರ್ಚ್ 2016ರಲ್ಲಿ ನಡೆದ ಆದಾಯ ತೆರಿಗೆ ದಾಳಿ ಸಂದರ್ಭ ವಶಪಡಿಸಿಕೊಳ್ಳಲಾಗಿದ್ದ ಹಾಗೂ ಇದೀಗ  ಸೋರಿಕೆಯಾಗಿರುವ ಡೈರಿಯೊಂದರಲ್ಲಿರುವ `ಎಸ್ ಬಿ’ ಎಂಬ ಇನಿಶಿಯಲ್ ರಾಜಧಾನಿಯಲ್ಲಿನ ಪ್ರಸ್ತಾವಿತ ಸ್ಟೀಲ್ ಬ್ರಿಡ್ಜ್  ಉಲ್ಲೇಖವಾಗಿರುವ ಬದಲು ಪ್ರಭಾವಶಾಲಿ ಹಾಗೂ ರಾಜಕೀಯವಾಗಿ ಬಹಳಷ್ಟು ಸಂಪರ್ಕಗಳನ್ನು ಹೊಂದಿದ ಅಧಿಕಾರಿಯದ್ದಾಗಿರಬಹುದು ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಕೆಲ ಕಾಂಗ್ರೆಸ್ ಸಚಿವರು ಸಂಗ್ರಹಿಸಿ ಹೈಕಮಾಂಡಿಗೆ 2014ರ ಲೋಕಸಭಾ ಚುನಾವಣೆಗಾಗಿ  ಕಳುಹಿಸಿದ್ದಾರೆನ್ನಲಾದ ಹಣದ ವಿವರಗಳನ್ನು ಈ ಡೈರಿ ನೀಡಿದೆಯೆಂದು ಈಗಾಗಲೇ ಸಾಕಷ್ಟು ಮಾತುಗಳು ಹರಿದಾಡುತ್ತಿವೆಯಾದರೂ ಡೈರಿಯಲ್ಲಿರುವುದು  ಈ ನಿರ್ದಿಷ್ಟ ಅಧಿಕಾರಿ ಸಂಗ್ರಹಿಸಿ ಕೆಲ ಸಚಿವರುಗಳಿಗೆ ನೀಡಿದ ಹಣದ ಮಾಹಿತಿಯಿರಬಹುದೆಂದು ಇದೀಗ ಹೇಳಲಾಗುತ್ತಿದೆ. ಆದರೂ ಆದಾಯ ತೆರಿಗೆ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸಿದ ಬಳಿಕವಷ್ಟೇ ಯಾವುದಾದರೂ  ಸ್ಪಷ್ಟ ಮಾಹಿತಿ ಹೊರಬರಬಹುದು.

ಡೈರಿಯಲ್ಲಿ ಎಸ್ ಬಿ ಎಂಬ ಇನಿಶಿಯಲ್ ಇರುವಲ್ಲಿ ರೂ 65 ಕೋಟಿ  ಮೊತ್ತ ನಮೂದಿಸಲಾಗಿದೆಯೆನ್ನಲಾಗಿದ್ದು – ಈ ಹಣವನ್ನು  ಪ್ರಸ್ತಾವಿತ ರೂ 1,791 ಕೋಟಿ ಮೊತ್ತದ ಸ್ಟೀಲ್ ಫ್ಲೈ ಓವರ್ ಯೋಜನೆಗಾಗಿ ಮುಖ್ಯಮಂತ್ರಿಗೆ ನೀಡಲಾಗಿದ್ದ ಕಿಕ್ ಬ್ಯಾಕ್ ಎಂದು ಈ ಹಿಂದೆ ತಿಳಿಯಲಾಗಿದ್ದರೂ, “ಇದು ಸಂಪೂರ್ಣವಾಗಿ ನಿಜವಾಗಿರಲು ಸಾಧ್ಯವಿಲ್ಲ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.