ಅಂಚೆ ಕಚೇರಿಯಲ್ಲಿಟ್ಟಿದ್ದ ಹಣ ವಾಪಸಾತಿಗೆ ಒತ್ತಾಯಿಸಿ ಧರಣಿ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಇಲ್ಲಿನ ಬೈತಖೋಲ್ ಅಂಚೆ ಕಚೇರಿಯಲ್ಲಿಟ್ಟಿದ್ದ ಹಣವನ್ನು ವಾಪಸ್ ಮಾಡುವಂತೆ ಒತ್ತಾಯಿಸಿ ಸ್ಥಳೀಯರು ಸೋಮವಾರ ಅಂಚೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಬೈತಖೋಲ್ ಅಂಚೆ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಲಕ್ಷ್ಮಣ ನಾಯ್ಕ ಎಂಬಾತ ಕಳೆದ 4 ತಿಂಗಳ ಹಿಂದೆ ಸುಮಾರು 85 ಲಕ್ಷ ರೂಪಾಯಿಗೂ ಹೆಚ್ಚು ಹಣ ವಂಚಿಸಿ ಪರಾರಿಯಾಗಿದ್ದ. ಕಳೆದ 20 ವರ್ಷಗಳಿಂದ ಬೈತಖೋಲದಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದ ಲಕ್ಷ್ಮಣ ನಾಯ್ಕ, ಜನರು ಅಂಚೆ ಇಲಾಖೆಯಲ್ಲಿ ಠೇವಣಿ ಇಟ್ಟ ಹಣವನ್ನು ತಾನೇ ಸ್ವಂತಕ್ಕಾಗಿ ಖರ್ಚು ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿತ್ತು. ಬಳಿಕ ಸಾರ್ವಜನಿಕರು ಹಣ ಮರಳಿಸಲು ಒತ್ತಾಯಿಸಿದಾಗ ಆರೋಪಿಯು ತಲೆಮರೆಸಿಕೊಂಡಿದ್ದನ್ನು ಸ್ಮರಿಸಬಹುದು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಂಚೆ ಇಲಾಖೆಯು ಆರೋಪಿ ವಿರುದ್ಧ ದೂರು ದಾಖಲಿಸಿತ್ತು. ನಂತರ ಜನರ ಒತ್ತಾಯದ ಮೇರೆಗೆ ಆತನನ್ನು ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದರು. ಆದರೆ ಕೇವಲ ಎರಡೇ ವಾರದಲ್ಲಿ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ಸೋಮವಾರ ಅಂಚೆ ಕಚೇರಿಗೆ ಹಿರಿಯ ಅಧಿಕಾರಿಗಳು ಆಗಮಿಸಿರುವ ವಿಷಯ ತಿಳಿದ ಸ್ಥಳೀಯರು ಕಚೇರಿಗೆ ಧಾವಿಸಿ, ಪ್ರತಿಭಟನೆ ಮುಂದಾದರು. ಹಣ ಮರಳಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಅಲ್ಲದೇ ನಮ್ಮ ಹಣ ಪಡೆದು ವಂಚಿಸಿದವನನ್ನು ನಮ್ಮ ವಶಕ್ಕೆ ಒಪ್ಪಿಸುವಂತೆ ಒತ್ತಾಯಿಸಿದರು. ಅಂಚೆ ಇಲಾಖೆಗೆ ಪಾವತಿಸಿದ ಹಣಕ್ಕೆ ಜನರ ಬಳಿ ರಸೀದಿಯಿಲ್ಲದ ಕಾರಣ ಎಲ್ಲ ಹಣವನ್ನು ನೀಡಲು ಅಸಾದ್ಯ ಎಂದು ಅಂಚೆ ಅಧಿಕಾರಿಗಳು ವಿವರಿಸಿದರು. ಇದರಿಂದ ಇನ್ನಷ್ಟು ಸಿಟ್ಟಿಗೆದ್ದ ಜನರು ಕಚೇರಿಯ ಖುರ್ಚಿಗಳನ್ನು ನೆಲಕ್ಕಪ್ಪಳಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ತಮ್ಮ ಹಣ ತಮಗೆ ನೀಡುವವರೆಗೂ ಅಧಿಕಾರಿಗಳನ್ನು ಹೊರಗೆ ಬಿಡುವುದಿಲ್ಲ ಎಂದು ಬಾಗಿಲಿಗೆ ಹೊರಗಿನಿಂದ ಬೀಗ ಜಡಿದು ಪ್ರತಿಭಟಿಸಿದರು.