ಧರ್ಮಸ್ಥಳ ಸಂಘದ ಕಾರ್ಯಕರ್ತೆ ನೇಣಿಗೆ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಧರ್ಮಸ್ಥಳ ಸ್ವಸಹಾಯ ಸಂಘದ ಸೇವಾ ಪ್ರತಿನಿಧಿ ಕೇಪು ಗ್ರಾಮದ ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಡುಕ ಪತಿಯ ಕಿರುಕುಳವೇ ಆತ್ಮಹತ್ಯೆಗೆ ಕಾರಣವೆಂದು ಮೃತಳ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.

ಕೇಪು ಗ್ರಾಮದ ನೀರ್ಕಜೆ ದೇವುಮೂಲೆ ನಿವಾಸಿ ಶೀನಪ್ಪ ಗೌಡರ ಪತ್ನಿ ಜಯಶ್ರೀ (40) ನೇಣಿಗೆ ಶರಣಾದ ಸೇವಾ ಪ್ರತಿನಿಧಿ. ಸಂಘದ

ಸೇವಾ ಪ್ರತಿನಿಧಿ ಜವಾಬ್ದಾರಿಯ ಜೊತೆಗೆ ಎಲೈಸಿ ಏಜೆಂಟ್ ಆಗಿದ್ದ ಜಯಶ್ರೀ ಒಂದು ಮಗುವಿನ ತಾಯಿಯಾಗಿದ್ದಾಳೆ. ಮದ್ಯದ ದಾಸನಾಗಿದ್ದ ಗಂಡ ಕತ್ತಲಾಗುತ್ತಿದ್ದಂತೆ ಮನೆಗೆ ಬಂದು ಪತ್ನಿಯ ಜೊತೆ ಜಗಳವಾಡುತ್ತಾ ಹಿಂಸೆ ನೀಡುತ್ತಿದ್ದನೆನ್ನಲಾಗಿದೆ. ಇತ್ತೀಚೆಗೆ ಸಂಶಯದ ಪಿಶಾಚಿಯಾಗಿ ಬದಲಾಗಿದ್ದ ಆತ ಕುಡಿದ ಮತ್ತಿನಲ್ಲಿ ಸಂಘದ ದಾಖಲೆಗಳನ್ನು ಹರಿದು ರಂಪಾಟ ನಡೆಸಿದ್ದನೆಂದು ಜಯಶ್ರೀ ಕಡೆಯವರು ಆರೋಪಿಸಿದ್ದಾರೆ.

ಪತಿಯ ನಿತ್ಯ ಕಿರುಕುಳ ಮತ್ತು ಹಿಂಸೆಯಿಂದಾಗಿ ಮನನೊಂದಿದ್ದ ಆಕೆ ಹಲವು ಬಾರಿ ತನ್ನ ಸ್ನೇಹಿತೆಯರಲ್ಲಿ ಕಣ್ಣೀರು ಹಾಕಿದ್ದಳೆಂದು ಸ್ಥಳೀಯರು ಹೇಳುತ್ತಿದ್ದಾರೆ. ಮಂಗಳವಾರ ಮುಸ್ಸಂಜೆ ಮನೆ ಸಮೀಪದ ಗುಡ್ಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಜಯಶ್ರೀ ಶವ ಪತ್ತೆಯಾಗಿದ್ದು, ಪತಿಯ ಕಿರುಕುಳದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಆಕೆಯ ಸಹೋದರ ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ.