ಧನ್ಯಶ್ರೀ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಮುಖ ಈಗ ಪೊಲೀಸರ ಅತಿಥಿ

ನಮ್ಮ ಪ್ರತಿನಿಧಿ ವರದಿ

ಚಿಕ್ಕಮಗಳೂರು : ಕಾಲೇಜು ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಿ ಆಕೆಯೊಂದಿಗೆ ಮಾತುಕತೆ ಮಾಡಿದ ವಿಡಿಯೋ ಸ್ಕ್ರೀನ್ ಶಾಟ್ ವಾಟ್ಸಪ್ಪಿಗೆ ಹಾಕಿ ಮಾನಹಾನಿ ಮಾಡಿದ್ದಲ್ಲದೇ, ವಿದ್ಯಾರ್ಥಿನಿ ಸಾವಿಗೆ ಕಾರಣನಾಗಿದ್ದ ಪ್ರಮುಖ ಆರೋಪಿಯನ್ನು ಮೂಡಿಗೆರೆ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಗ ಕಜೇಕಾರ್ ಗ್ರಾಮದ ನಿವಾಸಿ ಸಂತೋಷ್ (20) ಬಂಧಿತ ಆರೋಪಿ. ವೃತ್ತಿಯಲ್ಲಿ ಲಿಫ್ಟ್ ಮೆಕ್ಯಾನಿಕ್ ಆಗಿದ್ದ ಈತ ಆಕೆ ಸಾವಿನ ಬಳಿಕ ಬೆಂಗಳೂರಿಗೆ ಎಸ್ಕೇಪ್ ಆಗಿದ್ದ. ಮೂಡಿಗೆರೆ ಡಿಎಸ್ ಬಿಳಿಗೌಡ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆಗೆ ಈತನೇ ಪ್ರಚೋದನೆ ಮಾಡಿದ ಆರೋಪಿ.  ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಎರಡು ಪ್ರತ್ಯೇಕ ತಂಡದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣಾಧಿಕಾರಿ ಎಂ ರಫೀಕ್, ಎಎಸ್‍ಐ ವೆಂಕಟೇಶ್ ಮತ್ತು ಸಿಬ್ಬಂದಿಗಳಾದ ಗಿರೀಶ್, ಜಾಫರ್ ಎಂಬವರ ಪ್ರತ್ಯೇಕ ತಂಡ ಕಾರ್ಯ ನಿರ್ವಹಣೆ ಮಾಡಿತ್ತು.

ಧನ್ಯಶ್ರೀ ಜೊತೆಗೆ ವಾಟ್ಸಪ್ಪಿನಲ್ಲಿ ಮಾತುಕತೆ ಮಾಡಿದ್ದ ಸಂತೋಷ್, ಬಳಿಕ ಅದರ ಸ್ಕೀನ್ ಶಾಟ್ ತೆಗೆದು ಕೆಲವು ವ್ಯಕ್ತಿಗಳು, ಸಂಘ ಪರಿವಾರದ ಮುಖಂಡರಿಗೆ ಫಾರ್ವಡ್ ಮಾಡಿದ್ದ. ಧನ್ಯಶ್ರೀಯ ತಂದೆ, ತಾಯಿಗೂ ಬೆದರಿಕೆ ಹಾಕಿದ್ದ. ಧನ್ಯಶ್ರೀ ಆತ್ಮಹತ್ಯೆಗೂ ಪ್ರಚೋದನೆ ನೀಡಿದ ಹಾಗೂ ಆರೋಪಿ ಸಂತೋಷ್‍ನ ರಕ್ಷಣೆಗೆ ಪ್ರಯತ್ನಿಸಿದ ಸಂಘಟನೆಗಳ ಮುಖಂಡರ ವಿರುದ್ಧವೂ ಪೊಲೀಸರು ಇದೀಗ ಎಫ್‍ಐಆರ್ ದಾಖಲಿಸಿದ್ದಾರೆ.

 

LEAVE A REPLY