ನಿಷೇಧದ ಹೊರತಾಗಿಯೂ ಜಾತ್ರೆ ಮೆರವಣಿಗೆಯತ್ತ ಕುರಿ ಎಸೆದ ದೇವಳದ ಭಕ್ತರು

ಯಾದಗೀರ್ : ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೆಯ ಸಂದರ್ಭ ನಡೆಯುವ ಪ್ರಾಚೀನ ಕುರಿ ಎಸೆಯುವ ಪದ್ಧತಿಗೆ ಜಿಲ್ಲಾಡಳಿತ ನಿಷೇಧ ಹೇರಿ ಕಟ್ಟುನಿಟ್ಟಿನ ಸುರಕ್ಷಾ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ ಸಾವಿರಾರು ಭಕ್ತಾದಿಗಳು ದೇವರ ಪಲ್ಲಕ್ಕಿಯನ್ನು ಹಿಡಿದು ಸಾಗುತ್ತಿರುವಂತೆಯೇ ಗುಡ್ಡದ ಮೇಲಿನಿಂದ ಕನಿಷ್ಠ ನಾಲ್ಕು ಜೀವಂತ ಕುರಿಗಳನ್ನು ಸಂಪ್ರದಾಯದ ಹೆಸರಿನಲ್ಲಿ ಪಲ್ಲಕ್ಕಿಯತ್ತ ಎಸೆಯಲಾಗಿದೆ. ಈ ಸಂಬಂಧ ಮೂರು ಮಂದಿಯನ್ನು ಬಂಧಿಸಿದ್ದಾರೆ. ಸ್ಥಳದಲ್ಲಿ ಸುಮಾರು 400 ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಗುಡ್ಡ ಪ್ರದೇಶದಲ್ಲಿ ಡ್ರೋನ್ ಕ್ಯಾಮರಾ ಕೂಡ ಅಳವಡಿಸಿದ್ದರೂ ಸ್ಥಳೀಯಾಡಳಿತವು ಈ ಪದ್ಧತಿ ಆಚರಣೆ ತಡೆಯಲು ವಿಫಲವಾಗಿದೆ.ಈ ದೇವಳದ ಜಾತ್ರೆಗೆ ಕರ್ನಾಟಕದಿಂದ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಿಂದಲೂ ಭಕ್ತಾದಿಗಳು ಬರುತ್ತಾರೆ. ಈ ಪದ್ಧತಿಯನ್ನು ಕಳೆದ ನಾಲ್ಕು ವರ್ಷಗಳಿಂದ ನಿಷೇಧಿಸಲಾಗಿದೆ. ಈ ಬಾರಿ ಪಶು ಸಂಗೋಪನಾ ಇಲಾಖೆ ಜಾತ್ರೆ ಸಂದರ್ಭ ವಿವಿಧ ಚೆಕ್ ಪೋಸ್ಟುಗಳಲ್ಲಿ 850 ಕುರಿ ಹಾಗೂ ಆಡುಗಳನ್ನು ವಶಪಡಿಸಿಕೊಂಡಿದ್ದರೂ ಕೆಲವರು ಅಧಿಕಾರಿಗಳ ಕಣ್ತಪ್ಪಿಸಿ ಪ್ರಾಣಿಗಳನ್ನು ಗುಡ್ಡಕೊಯ್ದು ಅವುಗಳನ್ನು ಪಲ್ಲಕ್ಕಿಯತ್ತೆ ಎಸೆಯುವಲ್ಲಿ ಸಫಲರಾಗಿದ್ದಾರೆ.