ಕಳೆದ ವರ್ಷ ಕೋರ್ಟಿಗೆ ಹೋದ ಭಕ್ತ ಈ ಬಾರಿಯ ಜಾತ್ರೆಗೆ ಮೊದಲೇ ಸಾವು

ಪುತ್ತೂರು ದೇವಳದಲ್ಲಿ ಯಾರ ಆಟವೂ ನಡೆಯುವುದಿಲ್ಲವಂತೆ !

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ತನ್ನದೇ ಆದ ವಿಶೇಷತೆ ಇದೆ, ದೇವಳದಲ್ಲಿ ಯಾರ ಆಟವೂ ನಡೆಯುವುದಿಲ್ಲ, ದೇವಳ ವಿರುದ್ಧವಾಗಿ ಯಾರೇ, ಏನೇ ಅನ್ಯಾಯ ಅಥವಾ ಅಕ್ರಮ ಮಾಡಿದರೂ ಆತ ಮುಂದಿನ ಜಾತ್ರೆಯೊಳಗೆ ಇಹಲೋಕ ತ್ಯಜಿಸುತ್ತಾನೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿ ಈಗಲೂ ಇದೆ. ಈ ನಂಬಿಕೆಯ ಕಾರಣಕ್ಕೆ ಯಾವುದೇ ಊರಿನ ಜಾತ್ರೆಯಲ್ಲಿ ಗಲಾಟೆ ನಡೆದರೂ ಪುತ್ತೂರು ಜಾತ್ರೆಯಲ್ಲಿ ಯಾವುದೇ ಸಣ್ಣ ಗಲಾಟೆ ನಡೆದ ಚರಿತ್ರೆಯೇ ಇಲ್ಲ. ದೇವಳದ ಗದ್ದೆಗೆ ಇಳಿದರೆ ಸಾಕು ಭಕ್ತರು ಮಂಡಿಯೂರಿ ಬಿಡುತ್ತಾರೆ. ಇದು ಪುತ್ತೂರಿನ ಮಹಾಲಿಂಗೇಶ್ವರನ ಪವರ್ ಎಂದೇ ಭಕ್ತರ ನಂಬಿಕೆ.

ಕಳೆದ ವರ್ಷ ಜಾತ್ರೋತ್ಸವದ ವೇಳೆ ಸಣ್ಣ ವಿವಾದವೊಂದು ಉಂಟಾಗಿತ್ತು. ದೇವಳದ ಜಾತ್ರೆಯ ಆಮಂತ್ರಣ ಪತ್ರದಲ್ಲಿ ಅಂದಿನ ಡೀಸಿ ಇಬ್ರಾಹಿಂ ಹೆಸರು ಮುದ್ರಿಸಲಾಗಿತ್ತು. ದೇವಳದ ಜಾತ್ರೆಯ ಆಮಂತ್ರಣ ಪತ್ರದಲ್ಲಿ ಅನ್ಯ ಸಮುದಾಯದ ಅಧಿಕಾರಿಯ ಹೆಸರು ಹಾಕಿರುವುದು ವಿವಾದಕ್ಕೆ ಕಾರಣವಾಗಿ ಪ್ರತಿಭಟನೆಯವರೆಗೂ ಮುಂದುವರೆದಿತ್ತು. ಕೊನೆಗೆ ಡೀಸಿ ಇಬ್ರಾಹಿಂರ ಹೆಸರನ್ನು ಅಳಿಸಿ ಹೊಸ ಆಮಂತ್ರಣ ಪತ್ರವನ್ನು ಮುದ್ರಿಸಲಾಗಿತ್ತು.

ಡೀಸಿ ಹೆಸರು ಹಾಕಿರುವ ವಿಚಾರದಲ್ಲಿ ಗೊಂದಲ ಉಂಟಾದಾಗ ಅನೇಕ ಮಂದಿ ಭಕ್ತರು ಸುದ್ದಿಗೋಷ್ಟಿ ನಡೆಸಿ ಘಟನೆಯನ್ನು ಖಂಡಿಸಿ ದೇವಸ್ಥಾನದ ಜಾತ್ರೆಯ ಆಮಂತ್ರಣ ಪತ್ರವನ್ನು ಮರುಮುದ್ರಣ ಮಾಡಲೇಬೇಕು ಎಂದು ಹೇಳಿದ್ದರು. ಆದರೆ ಈ ವಿಚಾರವನ್ನು ನ್ಯಾಯಾಲಯಕ್ಕೂ

ಕೊಂಡೊಯ್ಯಲಾಗಿತ್ತು. ದೇವಳದ ವಠಾರದಲ್ಲೇ ಅಥವಾ ಮಹಾಲಿಂಗೇಶ್ವರ ಸಮ್ಮುಖದಲ್ಲೇ ಇತ್ಯರ್ಥವಾಗಬೇಕಿದ್ದ ವಿವಾದವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವ ಮೂಲಕ ವಿಚಾರ ಭಾರೀ ಪ್ರಚಾರ ಮತ್ತು ಗೊಂದಲವನ್ನು ಸೃಷ್ಟಿಸಿತ್ತು. ಇಲ್ಲಿ ವಿಪರ್ಯಾಸವೇನೆಂದರೆ ನ್ಯಾಯಾಲಯಕ್ಕೆ ದೂರು ನೀಡಿದ ವ್ಯಕ್ತಿಯೊಬ್ಬರು ಈ ಬಾರಿ ಜಾತ್ರೆಯ ದ್ವಜಾರೋಹಣ ಮಾಡುವ ಮೊದಲೇ ನಿಧನರಾಗಿದ್ದಾರೆ ಎಂದು ಭಕ್ತರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ದೇವಸ್ಥಾನದ ವಿಚಾರದಲ್ಲಿ ಯಾರೇ ಆಗಲಿ ವ್ಯರ್ಥ ಗೊಂದಲ ಸೃಷ್ಟಿಸಿದರೆ ಮುಂದಿನ ಜಾತ್ರೆಯೊಳಗೆ ಅವರು ಮೃತಪಡುತ್ತಾರೆ ಎಂಬ ಬಲವಾದ ನಂಬಿಕೆ ಈಗಲೂ ಚಾಲ್ತಿಯಲ್ಲಿದೆ. ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಜಾತ್ರಾ ಗದ್ದೆಯಲ್ಲಿ ಗಲಾಟೆ ಮಾಡಿದ ತಿಂಗಳಾಡಿ ಸಮೀಪದ ರೌಡಿಯೊಬ್ಬ 6 ತಿಂಗಳೊಳಗೆ ಕೊಲೆಯಾಗಿದ್ದರು, ಅವರ ಮೃತದೇಹವೂ ಸಿಕ್ಕಿಲ್ಲ. ಊಟ ಸಿಕ್ಕಿಲ್ಲ ಎಂದು ತಗಾದೆ ಎಬ್ಬಿಸಿ ದೇವಳದ ಅನ್ನಛತ್ರದಲ್ಲಿ ಗಲಾಟೆ ಮಾಡಿದ ವ್ಯಕ್ತಿ ಅದೇ ದಿನ ಸಂಜೆ ರೈಲಿನಡಿಗೆ ಬಿದ್ದು ಸಾವನ್ನಪ್ಪಿದ್ದರು. ಹೀಗೇ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ ಎನ್ನುತ್ತಾರೆ ಭಕ್ತರು. ಈ ವಿಚಾರದಲ್ಲಿ ಯಾರಿಗಾದರೂ ಸಂಶಯ ಇದ್ದರೆ ದೇವಸ್ಥಾನಕ್ಕೆ ಸಂಬಂಧಿಸಿದ ಹಿರಿಯ ಭಕ್ತಾದಿಗಳಲ್ಲಿ ವಿಚಾರಿಸಲಿ ಎಂದು ಚಾಲೆಂಜ್ ಹಾಕುತ್ತಿದ್ದಾರೆ.

ಈ ಬಾರಿಯೂ ವಿವಾದ ಉಂಟಾಗಿದೆ. ತಂತ್ರಿಗಳ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಇದು ಭಕ್ತರ ಮನಸ್ಸಿಗೆ ನೋವು ತಂದಿದೆ. ಆದರೆ ಮುಂದಿನ ಜಾತ್ರೆಯೊಳಗೆ ಏನಾಗುತ್ತೋ ಎಂಬುದು ಈಗ ಕುತೂಹಲಕ್ಕೂ ಕಾರಣವಾಗಿದೆ. ತಪ್ಪು ಮಾಡಿದವರು ದೇವರಲ್ಲಿ ಕ್ಷಮೆ ಕೇಳುವುದು ಒಳಿತು ಎನ್ನುತ್ತಾರೆ ಮಹಾಲಿಂಗೇಶ್ವರನ ಭಕ್ತರು.