ಯಕ್ಷಗಾನ ಕಲೆ ಅಭಿವೃದ್ಧಿ

ಮಂಗಳೂರಿನ ಹೆಮ್ಮೆಯ ಕಲೆ ಯಕ್ಷಗಾನ. ಇದಕ್ಕೆ ಬಹಳ ಪ್ರಸಿದ್ಧಿಯೂ ಇದೆ. ಪರವೂರುಗಳಲ್ಲಿ, ವಿದೇಶಗಳಲ್ಲೂ ಯಕ್ಷಗಾನ ಪ್ರದರ್ಶನ ನಡೆಯುತ್ತಿದೆ. ಮಂಗಳೂರಿನಲ್ಲಿ ಎಲ್ಲಿ ನೋಡಿದರೂ ಯಕ್ಷಗಾನವೇ. ಈ ಕಲೆ ಇಷ್ಟು ಜನಪ್ರಿಯವಾಗಲು ಕಾರಣವೇನು ?
ಯಕ್ಷಗಾನದಲ್ಲೀಗ ವೈಭವಗಳ ಕಾಲ. ಗಾನವೈಭವ, ನಾಟ್ಯವೈಭವ…ಹೀಗೆ `ದೇವಿ ಮಹಾತ್ಮೆ’ ಪ್ರಸಂಗದಲ್ಲಿರುವ ಒಂದು ಪಾತ್ರ ಮಾಲಿನಿ. ಮಹಿಷಾಸುರನೆಂಬ ರಕ್ಕಸನ ತಾಯಿಯಾಗಲಿರುವ ಈಕೆ ದೈತ್ಯಕುಲದ ಹೆಣ್ಣು. ಮಾಲಿನಿ ತಪಸ್ಸು ಮಾಡಲು ಹೋಗುವ ಆ ವೈಭವವನ್ನು ನೋಡಬೇಕು. ಭಾಗವತರ ಗಾನವೈಭವ, ಚೆಂಡೆಯವರ ಚೆಂಡೆ ವೈಭವ. ಮದ್ದಲೆಯವರ ಮದ್ದಲೆವೈಭವ ಎಲ್ಲವನ್ನೂ ಅಲ್ಲಿ ಒಟ್ಟಿಗೆ ನೋಡಬಹುದು.
ಚಂಡಮುಂಡರೆಂಬ ಇಬ್ಬರು ರಕ್ಕಸರು ರಂಗಸ್ಥಳದಲ್ಲಿರುವಾಗಲೂ ಭಾಗವತರಿಗೆ ಮತ್ತು ಹಿಮ್ಮೇಳದವರಿಗೆ ಸ್ಪಿರಿಟ್ ಬರುತ್ತದೆ. ಆಗ ಮತ್ತೊಮ್ಮೆ ನಾಟ್ಯ ವೈಭವ, ಗಾನವೈಭವ ನೋಡಲು ಸಿಗುತ್ತದೆ. ಮಾಲಿನಿ ಮತ್ತು ಚಂಡಮುಂಡರು ಕುಣಿಯುವ ಯಕ್ಷಗಾನದ ವೆರೈಟಿ ಕುಣಿತಗಳನ್ನು ನೋಡಬೇಕು. ಬಹುಷಃ ಅದು ರಕ್ಕಸ ಕುಲದವರ ಕುಣಿತವೇ ಇರಬೇಕು. ಗಾನವೈಭವ ನಾಟ್ಯ ವೈಭವಗಳಿಗೆ ಮಾದರಿಯಾದ ದೃಶ್ಯಗಳಿವು.
ಇತ್ತೀಚೆಗೆ ಈ ನಾಟ್ಯ ವೈಭವ ಗಾನವೈಭವಕ್ಕೆಂದೇ ಪ್ರತ್ಯೇಕ ಪ್ರಸಂಗವನ್ನು ಬರೆಯಲಾಗಿದೆ. ಇದರಲ್ಲಿ ಶೃಂಗಾರ ರಸವೇ ಪ್ರಧಾನ. ಇದರ ಪ್ರದರ್ಶನ ನೋಡುವಾಗಲಂತೂ ಪ್ರೇಕ್ಷಕರು ರೋಮಾಂಚಿತರಾಗುತ್ತಾರೆ. ಗಾಯನ, ನಾಟ್ಯಗಳೊಂದಿಗೆ ಶೃಂಗಾರವೂ ಸೇರಿದರೆ ಮತ್ತೇನು ಬೇಕು ಹೇಳಿ  ಯಕ್ಷಗಾನ ಕಲೆಯ ವೈಭವವನ್ನು ಹೇಳಲು ಮಾತುಗಳಿಲ್ಲ
ಯಕ್ಷಗಾನ ಕಲೆಗೆ ವೈಭವಗಳನ್ನು ಈ ರೀತಿಯಲ್ಲಿ ಅಳವಡಿಸಿ ಕಲೆಯನ್ನು ಬಹಳ ಎತ್ತರಕ್ಕೆ ಅತೀ ವೇಗದಲ್ಲಿ ಕೊಂಡೊಯ್ಯುತ್ತಿರುವ ಇಂತಹ ಕಲಾವಿದರನ್ನು ಕಲಾಪೋಷಕರನ್ನು ಕಲಾನಿರ್ದೇಶಕರನ್ನು ಕೊಂಡಾಡಲೇಬೇಕು. ಮಹಿಳಾ ಕಲಾವಿದರು ಇದಕ್ಕೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವುದು ಕೂಡಾ ಶ್ಲಾಘನೀಯ. ಶೀಘ್ರದಲ್ಲಿ ಯಕ್ಷಗಾನದ ವೈಭವಗಳಿಗೆ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಏರುವ ಲಕ್ಷಣಗಳು ಕಾಣುತ್ತಿವೆ. ಕಲಾವಿದರಿಗೂ ಕಲಾವಿದೆಯರಿಗೂ ಎಂದೂ ನಿರೀಕ್ಷಿಸಿರದ ಸಂಭಾವನೆಗಳು ಸಿಗಲಿವೆ. ಹಣ, ಕೀರ್ತಿ ಸಂಪಾದಿಸುವುದರ ಜೊತೆಗೆ ಕಲೆಯ ಉದ್ಧಾರ ಮಾಡಿದ ಧನ್ಯತಾಭಾವವೂ ಸಿಗುತ್ತದೆ. ನಮ್ಮ ನಾಡಿನ ಕಲೆ ಸಂಸ್ಕøತಿಗಳು ಈ ರೀತಿಯಲ್ಲಾದರೂ ಅಭಿವೃದ್ಧಿಯ ದಾರಿ ಹಿಡಿದಿದೆಯಲ್ಲ, ಸಂತೋಷಪಡೋಣ

  • ಪಿ ಎನ್ ಆಳ್ವ
    ಮಂಗಳೂರು