ಸಂಚಲನ ಸೃಷ್ಟಿಸುವ ನಿರೀಕ್ಷೆಯಲ್ಲಿ ದೇವೇಗೌಡ ಆತ್ಮಕಥೆ `ಅಗ್ನಿ ದಿವ್ಯ’

ಫೆ 25ರ ಮೊದಲು ಬಿಡುಗಡೆ

ನಮ್ಮ ಪ್ರತಿನಿಧಿ ವರದಿ

ಬೆಂಗಳೂರು : ರಾಜಕೀಯ ವಲಯಗಳಲ್ಲಿ ಸಂಚಲನವನ್ನೇ ಸೃಷ್ಟಿಸಲಿದೆ ಎಂದು ನಿರೀಕ್ಷಿಸಲಾಗಿರುವ ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಬಹುನಿರೀಕ್ಷಿತ ಆತ್ಮಕಥನ `ಅಗ್ನಿ ದಿವ್ಯ’ ಫೆಬ್ರವರಿ 25ರ ಮೊದಲು ಬಿಡುಗಡೆಯಾಗುವ ಸಾಧ್ಯತೆಯಿದೆ. ತಮ್ಮ ಪುತ್ರ ಎಚ್ ಡಿ ಕುಮಾರಸ್ವಾಮಿ ಮೊದಲು ಕಾಂಗ್ರೆಸ್ ಹಾಗೂ ನಂತರ ಬಿಜೆಪಿ ಜತೆಗಿನ ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಲು

ಕೈಗೊಂಡ ನಿರ್ಧಾರಸಹಿತ ತಮ್ಮ  ಪಕ್ಷದ ಕೆಲವೊಂದು ವಿವಾದಾತ್ಮಕ ನಿರ್ಧಾರಗಳ ಬಗ್ಗೆ ತಮ್ಮ ವಿಸ್ತøತ ಪ್ರತಿಕ್ರಿಯೆ  ಈ ಆತ್ಮಕಥನದಲ್ಲಿ ಒಳಗೊಂಡಿದೆ ಎಂದು ಸ್ವತಹ ದೇವೇಗೌಡರೇ ಬಹಿರಂಗಪಡಿಸಿದ್ದಾರೆ. ಬಾಲ್ಯದಿಂದ ಹಿಡಿದು 2013ರ ವಿಧಾನಸಭಾ ಚುನಾವಣೆ ತನಕ, ತನ್ನ ಎಂಟು ದಶಕಗಳ ಜೀವನವನ್ನು ದೇವೇಗೌಡ ಓದುಗರ ಮುಂದೆ ತಮ್ಮ ಆತ್ಮಕಥನದಲ್ಲಿ ತೆರೆದಿಟ್ಟಿದ್ದಾರೆ.

ದೇವೇಗೌಡರ ಪುತ್ರಿ ಶೈಲಜಾ ಚಂದ್ರಶೇಖರ್ ಹಾಗೂ ಅವರ ಸಮೀಪವರ್ತಿ ಶಾಸಕ ವೈ ಎಸ್ ವಿ ದತ್ತಾ ಅವರು ದೇವೇಗೌಡರ ವೃತ್ತಾಂತವನ್ನು ಆತ್ಮಕಥೆಗಾಗಿ ದಾಖಲಿಸಿಕೊಂಡವರು. ಶೈಲಜಾ ಅವರು ಗೌಡರ ಬಾಲ್ಯದಿಂದ ಹಿಡಿದು ಸಾರ್ವಜನಿಕ ಜೀವನದ ಬಗ್ಗೆ ದಾಖಲಿಸಿಕೊಂಡಿದ್ದರೆ ಗೌಡರ ರಾಜಕೀಯ ಜೀವನವನ್ನು ದತ್ತಾ ಅವರು ದಾಖಲಿಸಿಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪ ಹಾಗೂ ರಾಮಕೃಷ್ಣ ಹೆಗಡೆ ಅವರೊಂದಿಗೆ ತಮಗಿದ್ದ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಅವರ ಆತ್ಮಕಥನದಲ್ಲಿ ಮೂಡಿದೆ. “ಅವರ ಜೀವನ ಹೋರಾಟಗಳ ಆಗರ. ಒಂದು ವಿಧದಲ್ಲಿ ಅದು ಅಗ್ನಿ ಪರೀಕ್ಷೆಯಿದ್ದಂತೆ. ಆತ್ಮಕಥನದಲ್ಲಿನ ಕೆಲವೊಂದು ಅಂಶಗಳು  ಸಂಚಲನ ಸೃಷ್ಟಿಸಬಹುದೆಂಬುದನ್ನು ನಾವು ಅರಿತಿರುವುದರಿಂದ ಅಗತ್ಯ ಟಿಪ್ಪಣಿ, ಪತ್ರಗಳು ಮುಂತಾದವುಗಳನ್ನೂ ಗೌಡರ ಹೇಳಿಕೆಗಳನ್ನು ಸಮರ್ಥಿಸಲು  ಉಪಯೋಗಿಸಲಾಗಿದೆ” ಎನ್ನುತ್ತಾರೆ ದತ್ತಾ. ಆತ್ಮಕಥನದ ಇಂಗ್ಲಿಷ್ ಅನುವಾದವನ್ನೂ ಹೊರತರುವ ನಿರೀಕ್ಷೆಯಿದೆ.

 

 

LEAVE A REPLY