ಜಾಮರ್ ಅಳವಡಿಸಿದ್ದರೂ, ಜೈಲಿನ ಕೈದಿಗಳು ಉಪಯೋಗಿಸುತ್ತಿದ್ದಾರೆ ಮೊಬೈಲ್ಫೋನ್ !

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಜೈಲಿನೊಳಗೆ ನಡೆಯುವ ಅಹಿತಕರ ಘಟನೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಜೈಲಿನಲ್ಲಿ ಮೊಬೈಲ್ ಜಾಮರ್ ಅಳವಡಿಸಿದ್ದರೂ ಇಲ್ಲಿ ಕೈದಿಗಳು ನಿರಂತರವಾಗಿ ಮೊಬೈಲ್ ಫೋನ್ ಬಳಕೆ ಮಾಡುತ್ತಲೇ ಇದ್ದಾರೆ. ಮೊಬೈಲ್ ಜಾಮರ್ ಅಳವಡಿಕೆಯಿಂದ ಹಿಂದೊಮ್ಮೆ ಭಾರೀ ಸುದ್ದಿಯಾಗಿ ಜೈಲಿನ ಆಸುಪಾಸಿನ ಜನ ನೆಟ್ವರ್ಕ್ ಇಲ್ಲದೇ ಇದ್ದರೂ, ಜೈಲಿನೊಳಗಡೆ ಇದ್ದ ಕೈದಿಗಳು ಮಾತ್ರ ನಿರಂತರವಾಗಿ ಮೊಬೈಲ್ ಬಳಕೆ ಮಾಡಿದ್ದರು. ಮೊಬೈಲ್ ಜಾಮರನ್ನು ಅಳವಡಿಸಿದ ಪ್ರಮುಖ ಉದ್ದೇಶವೇ ಈಡೇರಿಲ್ಲ. ಇದೀಗ ಪೊಲೀಸರು ಅತ್ತ ಜೈಲಿನೊಳಗೆ ಮೊಬೈಲ್ ಬಳಕೆ ಮಾಡಿದ ಕೈದಿಗಳಿಗೆ ಮೊಬೈಲ್ ಪೂರೈಕೆ ಮಾಡಿದವರ, ಮೊಬೈಲ್ ಸಿಮ್ ಹೊಂದಿದವರ ತನಿಖೆಯಲ್ಲಿ ತೊಡಗಿಸಿಕೊಂಡಿದ್ದಾರೆ !

ಜೈಲಿನ ಪರಿಸರದ ಎಂ ಜಿ ರಸ್ತೆಯಲ್ಲಿ ಈಗಲೂ ಮೊಬೈಲ್ ಬಳಕೆದಾರರು ನೆಟ್ವರ್ಕ್ ಸಿಗದೇ ಒದ್ದಾಡುತ್ತಿದ್ದಾರೆ. ಮಾತನಾಡುತ್ತಿದ್ದಂತೆ ಫೋನ್ ಕರೆ ಕಟ್ ಆಗುತ್ತಿದೆ. ವಾಯ್ಸ್ ಬ್ರೇಕ್ ಆಗುತ್ತಿದೆ. ಸಿಗ್ನಲ್ ಸಿಗುತ್ತಿಲ್ಲ… ಹೀಗೆ ಹಲವು ಸಮಸ್ಯೆಗಳು ಕಾಡುತ್ತಲೇ ಇದೆ ಎನ್ನುತ್ತಾರೆ ಉದ್ಯಮಿಯೊಬ್ಬರು.

ಪಿವಿಎಸ್, ಕರಂಗಲ್ಪಾಡಿ, ಬೆಸೆಂಟ್ ಸರ್ಕಲ್ ಬಳಿ ಇರುವ ಹಲವು ಅಂಗಡಿ ಮಾಲಕರು, ಉದ್ಯಮಿಗಳು, ಶಿಕ್ಷಣ ಸಂಸ್ಥೆಯ ಉಪನ್ಯಾಸಕರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಈ ಸಮಸ್ಯೆ ಒಂದೆಡೆಯಾದರೆ ಇನ್ನು ಜೈಲಿನೊಳಗೆ ಸಿಬ್ಬಂದಿಗಳ ಕೊರತೆಯೂ ಕಾಡುತ್ತಿದೆ. ಇಲ್ಲಿ ನಿಯುಕ್ತಿಗೊಂಡ ಸಿಬ್ಬಂದಿಗಳಲ್ಲಿ ಬಹುತೇಕ ಮಂದಿ ಡೆಪ್ಯೂಟೇಶನ್ ಆಧಾರದಲ್ಲಿ ಇರುವವರು. ಜೈಲಿನಲ್ಲಿ ಕೈದಿಗಳ ಸಂಖ್ಯೆ ಲೆಕ್ಕಕ್ಕಿಂತ ಹೆಚ್ಚಾಗುತ್ತಿದ್ದರೆ ಇವರನ್ನು ನಿಯಂತ್ರಿಸಬೇಕಾದ ಸಿಬ್ಬಂದಿಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಪೊಲೀಸ್ ಇಲಾಖೆಯಲ್ಲೂ ಸಿಬ್ಬಂದಿಗಳ ಕೊರತೆ ಇರುವುದು ಜೈಲಿನ ಕೈದಿಗಳನ್ನು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆದೊಯ್ಯಲು ಸಮಸ್ಯೆಯಾಗುತ್ತಿದೆ.

ಕೈದಿಗಳನ್ನು ಜೈಲಿನಿಂದ ನ್ಯಾಯಾಲಯಕ್ಕೆ ಕರೆದೊಯ್ಯಲು ಪೊಲೀಸರ ಕೊರತೆ ಇರುವುದರಿಂದ ಅಲ್ಲಿ ವಿಚಾರಣೆ ನಡೆಸಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿನಾಕಾರಣವಾಗಿ ವಿಚಾರಣೆ ವಿಳಂಬವಾಗುತ್ತಿದೆ. ಜೈಲಿನ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಜೈಲಿನ ಹಲವು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸೋದಕ್ಕೆ ಹೆಚ್ಚಿನ ಅನುದಾನದ ಅಗತ್ಯವೂ ಇದೆ.

ಜೈಲಿನೊಳಗಿನ ವಾತಾವರಣ ಸಂಪೂರ್ಣ ಹಾಳಾಗಿ ಹೋಗಿದೆ. ಇಲ್ಲಿ ಕೈದಿಗಳು ತಮ್ಮದೇ ಕಾನೂನು ಮಾಡಿಕೊಂಡು ಬದುಕುತ್ತಿದ್ದಾರೆ. ಗುಟ್ಕಾ, ಗಾಂಜಾ, ಮಾದಕ ವಸ್ತುಗಳು ಲಭ್ಯವಾಗುತ್ತಿದೆ. ಮೊಬೈಲ್ ಫೋನ್‍ಗಳನ್ನು ನಿರಂತರವಾಗಿ ಕೈದಿಗಳು ಬಳಸುತ್ತಿದ್ದಾರೆ ಎನ್ನುತ್ತಾರೆ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿ ಬಂದ ವಿಚಾರಣಾಧೀನ ಕೈದಿಯೊಬ್ಬರು.