ಗೃಹ ಸಚಿವ ಹುದ್ದೆ ತನಗೇ ಕೊಡಿ ಎನ್ನುತ್ತಿದ್ದಾರಂತೆ ದೇಶಪಾಂಡೆ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿದಿರುವ ಜಿ ಪರಮೇಶ್ವರ್ ಅವರಿಂದ ತೆರವಾಗಿರುವ ಗೃಹ ಸಚಿವ ಸ್ಥಾನ ಪಡೆಯಲು ಕಾಂಗ್ರೆಸ್ ಪಕ್ಷದಲ್ಲಿ ಹಲವರು ಪೈಪೋಟಿ ನಡೆಸುತ್ತಿದ್ದು ಅವರಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಮುಂಚೂಣಿಯಲ್ಲಿದ್ದಾರೆ.

ಗೃಹ ಸಚಿವ ಹುದ್ದೆಗೆ ತೀವ್ರ ಲಾಬಿ ನಡೆಸುತ್ತಿರುವ ದೇಶಪಾಂಡೆ ಈಗಾಗಲೇ ತಮ್ಮ ಮನದಿಂಗಿತವನ್ನು  ತಮ್ಮ ಆಪ್ತರ ಮುಖಾಂತರ ಮುಖ್ಯಮಂತ್ರಿಗೆ ತಿಳಿಯಪಡಿಸಿದ್ದಾರೆ.

ಬ್ರಾಹ್ಮಣ ಸಮುದಾಯದ ತಮಗೆ ಪ್ರಮುಖ ಗೃಹ ಖಾತೆಯನ್ನು ವಹಿಸಿದರೆ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆತಂತೆಯೂ ಆಗುವುದು ಎಂಬುದು ದೇಶಪಾಂಡೆ ವಾದವೆನ್ನಲಾಗಿದೆ. ಮೇಲಾಗಿ ಗುಂಡೂರಾವ್ ಮುಖ್ಯಮಂತ್ರಿಯಾದ ನಂತರ ಬ್ರಾಹ್ಮಣ ಸಮುದಾಯದ ನಾಯಕರಿಗೆ ಪ್ರಮುಖ ಹುದ್ದೆ ದೊರೆಯದ ಕಾರಣ ಸಮುದಾಯದ ಹಿರಿಯ ನಾಯಕನಾದ ತನಗೆ ಗೃಹ ಸಚಿವ ಹುದ್ದೆ ನೀಡಿದ್ದೇ ಆದಲ್ಲಿ ಪಕ್ಷಕ್ಕೆ ಬ್ರಾಹ್ಮಣ ಸಮುದಾಯದ ಬೆಂಬಲವೂ ದೊರೆಯುವುದು ಮತ್ತು ಇದರಿಂದ ಬ್ರಾಹ್ಮಣರನ್ನು ಬಿಜೆಪಿಯಿಂದ ದೂರ ಮಾಡಲು ಸುಲಭ ಎಂದು ದೇಶಪಾಂಡೆ ಪಕ್ಷ ನಾಯಕತ್ವಕ್ಕೆ ಮನದಟ್ಟು ಮಾಡಲು ಯತ್ನಿಸುತ್ತಿದ್ದಾರೆಂದು ಹೇಳಲಾಗಿದೆ.

ಗೃಹ ಸಚಿವ ಹುದ್ದೆ ಆಕಾಂಕ್ಷಿಗಳಲ್ಲಿ  ರಾಮಲಿಂಗಾರೆಡ್ಡಿ ಹಾಗೂ ಕೆ ಜೆ ಜಾರ್ಜ್ ಹೆಸರುಗಳೂ ಕೇಳಿ ಬರುತ್ತಿವೆಯಾದರೂ ಈಗಾಗಲೇ ಹಲವು ಆರೋಪಗಳನ್ನು ಎದುರಿಸುತ್ತಿರುವ ಬೆಂಗಳೂರು ಅಭಿವೃದ್ಧಿ ಸಚಿವ ಹಾಗೂ ಮಾಜಿ ಗೃಹ ಸಚಿವ ಕೆ ಜೆ ಜಾರ್ಜ್ ಹಿಂದೆ ಸರಿದಿದ್ದಾರೆಂದು ತಿಳಿದುಬಂದಿದೆ.