`ದೇಶಪಾಂಡೆಯಿಂದ ಸುಳ್ಳು ಭರವಸೆ’

ನಮ್ಮ ಪ್ರತಿನಿಧಿ ವರದಿ

ಹಳಿಯಾಳ : “ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಚಿವ ದೇಶಪಾಂಡೆ ಅವರು ಕಾಳಿ ಏತ ನೀರಾವರಿ ಯೋಜನೆಗೆ ಟೆಂಡರ್ ಕರೆಯುವ ನಾಟಕವಾಡುತ್ತಿದ್ದಾರೆ. ಕೈಗಾರಿಕಾ ಸಚಿವರ ಕ್ಷೇತ್ರದಲ್ಲಿ ಕೈಗಾರಿಕೆಗಳು ಸೊರಗುವುದರ ಜೊತೆಗೆ ಕೆಲವು ಕೈಗಾರಿಕೆಗಳು ಸತ್ತು ಹೋಗಿವೆ. ಶಂಕುಸ್ಥಾಪನೆ, ಅಡಿಗಲ್ಲು. ಬೃಹತ್ ಯೋಜನೆಗಳ ಘೋಷಣೆ, ಸುಳ್ಳು ಭರವಸೆ ನೀಡುವುದರ ಮೂಲಕ ಮತದಾರರನ್ನು ದಾರಿ ತಪ್ಪಿಸುತ್ತಾರೆ. ಆದ್ದರಿಂದ ಮತದಾರರು ಎಚ್ಚರದಿಂದ ಇರಬೇಕು” ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮತ್ತು ಸೊರಬ ಕ್ಷೇತ್ರದ ಶಾಸಕ ಆದ ಮಧು ಬಂಗಾರಪ್ಪ ಹೇಳಿದರು.

ರವಿವಾರ ಪಟ್ಟಣದ ಬಾಬು ಜಗಜೀವನರಾಂ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಬೂತ್ ಸಮಿತಿಯ ಕಾರ್ಯಕರ್ತರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, “ಫೆಬ್ರವರಿ 17ರಂದು ಬೆಂಗಳೂರಿನಲ್ಲಿ ರಾಜ್ಯದ 120 ವಿಧಾನಸಭಾ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗುವುದು. ಅದರಲ್ಲಿ ಜಿಲ್ಲೆಯ 6 ಕ್ಷೇತ್ರಗಳು ಸೇರಿದಂತೆ ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆಯಾಗಲಿದೆ.

ಮುಂಬರುವ ದಿನಗಳಲ್ಲಿ ಜಿಲ್ಲೆಯ 6 ಕ್ಷೇತ್ರಗಳ ಪೈಕಿ ಹಳಿಯಾಳ ಕ್ಷೇತ್ರವನ್ನು ಒಳಗೊಂಡು ಒಟ್ಟೂ 3 ಕ್ಷೇತ್ರಗಳಲ್ಲಿ ವಿಜಯ ಸಾಧಿಸುತ್ತೇವೆ. ಈ ಭಾಗದಲ್ಲಿ ಬಂಗಾರಪ್ಪ ಮತ್ತು ಕುಮಾರಸ್ವಾಮಿಯವರ ಅಭಿಮಾನಿಗಳಿದ್ದು, ಪಕ್ಷಕ್ಕೆ ಇನ್ನಷ್ಟು ಬಲವನ್ನು ನೀಡಲಿದ್ದಾರೆ” ಎಂದರು.

 

LEAVE A REPLY