`ಚರ್ಚ್ ಕೋರ್ಟ್ ಅಮಾನ್ಯಗೊಳಿಸಿ’ : ಸುಪ್ರೀಂಗೆ ಕ್ರಿಶ್ಚಿಯನ್ ಸಂಸ್ಥೆ ಮನವಿ

ನವದೆಹಲಿ : ಚರ್ಚ್ ಕೋರ್ಟುಗಳನ್ನು ಅಮಾನ್ಯಗೊಳಿಸಬೇಕೆಂದು ಕೋರಿ ಕೇರಳ ಮೂಲದ  ಜಾಯಿಂಟ್ ಕ್ರಿಶ್ಚಿಯನ್ ಕೌನ್ಸಿಲ್ ಎಂಬ ಸಂಸ್ಥೆ ಸುಪ್ರೀಂ ಕೋರ್ಟಿನ ಕದ ತಟ್ಟಿದ್ದು, ಒಂದು ನಿರ್ದಿಷ್ಟ ಧರ್ಮಕ್ಕೆ ಅದರದೇ ಆದ ನ್ಯಾಯಾಂಗ ವ್ಯವಸ್ಥೆಯಿರುವುದು ಜಾತ್ಯತೀತ ಭಾರತದಲ್ಲಿ “ಅನೈಕ್ಯತೆ” ಉಂಟು ಮಾಡುತ್ತದೆ ಎಂದು  ಅದು ಹೇಳಿಕೊಂಡಿದೆ. ಒಂದು ನಿರ್ದಿಷ್ಟ ಧರ್ಮದ ವೈಯಕ್ತಿಕ ಕಾನೂನುಗಳ ವಿಚಾರದಲ್ಲಿ ತೀರ್ಪು ನೀಡುವ ಇಂತಹ ಧಾರ್ಮಿಕ ನ್ಯಾಯಾಲಯಗಳು ಆದುನಿಕ ಪ್ರಜಾಪ್ರಭುತ್ವ ದೇಶಕ್ಕೆ ತಕ್ಕುದಲ್ಲ ಎಂದೂ ಅದು ಅಭಿಪ್ರಾಯಪಟ್ಟಿದೆ.

ಸಂಸ್ಥೆಯ ಪರವಾಗಿ ಸಂತೋಷ್ ಪೌಲ್ ಎಂಬ ವಕೀಲರು ಸಲ್ಲಿಸಿದ ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿ ಎಸ್ ಠಾಕುರ್ ಅವರ ನೇತೃತ್ವದ ಪೀಠವು ಮಂಗಳೂರಿನ ವಕೀಲ ಕ್ಲಾರೆನ್ಸ್ ಪಾಯಸ್ ಎಂಬವರು ಚರ್ಚ್ ಕೋರ್ಟುಗಳಿಗೆ ಮಾನ್ಯತೆಗೆ ಆಗ್ರಹಿಸಿ ಸಲ್ಲಿಸಿರುವ  ಅಪೀಲೊಂದರಲ್ಲಿ  ಮಧ್ಯ ಪ್ರವೇಶಿಸಲು ಅದಕ್ಕೆ ಅನುಮಿತಿಸಿದೆ. ಈ ಕೋರ್ಟುಗಳ ಮೂಲಕ ತಮ್ಮ ಮೊದಲು ವಿವಾಹವನ್ನು ರದ್ದುಗೊಳಿಸಿರುವ ಹಲವಾರು ಕ್ಯಾಥೋಲಿಕ್ ಪುರುಷರು ಮರುವಿವಾಹವಾಗಿದ್ದಾರೆಂದು  ತಮ್ಮ ಮನವಿಯಲ್ಲಿ ಹೇಳಿದ್ದ ಕ್ಲಾರೆನ್ಸ್ ಈ ಕೋರ್ಟುಗಳ ತೀರ್ಪನ್ನು ಬದಿಗಿರಿಸಿದ್ದೇ ಆದಲ್ಲಿ ಸಾವಿರಾರು ಕ್ಯಾಥೋಲಿಕ್ ಪುರುಷರನ್ನು ಐಪಿಸಿ ಅನ್ವಯ ಬಹುಪತ್ನಿತ್ವಕ್ಕಾಗಿ ಬಂಧಿಸಬೇಕಾಗಬಹುದು ಎಂದಿದ್ದರು.

ಸಮಾನ ನಾಗರಿಕ ಸಂಹಿತೆಯ ಬಗ್ಗೆ ಉಲ್ಲೇಖವಿರುವ ಸಂವಿಧಾನದ 44ನೇ ವಿಧಿಯನ್ನು ಜಾರಿಗೊಳಿಸಬೇಕೇ ಎಂದು ಸುಪ್ರೀಂ ಕೋರ್ಟ್ ಈಗಾಗಲೇ   ಕೇಂದ್ರವನ್ನು ಕೇಳಿರುವುದರಿಂದ ಹಾಗೂ ಇನ್ನೊಂದು ಪೀಠ ಶರೀಯ ಕಾನೂನುಗಳ  ಸಿಂಧುತ್ವದ ಬಗ್ಗೆ ವಿಚಾರಣೆ ನಡೆಸುತ್ತಿರುವುದರಿಂದ ಇತ್ತೀಚಿಗಿನ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.