ಸಮುದ್ರ ತೀರದ ಅಪಾಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಜಿಲ್ಲಾಧಿಕಾರಿ ಜಗದೀಶ್ ಸೂಚನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ನದಿ ತೀರದಲ್ಲಿ ಆಟವಾಡಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಇಂತಹ ಅಪಾಯಗಳ ಬಗ್ಗೆ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ ಜಿ ಜಗದೀಶ್ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ 2017ನೇ ಸಾಲಿನಲ್ಲಿ ಈವರೆಗೆ ಇಂತಹ ಒಟ್ಟು 9 ಪ್ರಕರಣಗಳು ಸಂಭವಿಸಿದೆ. ವಿದ್ಯಾರ್ಥಿಗಳು ನದಿ/ಸಮುದ್ರದ ಅಳದ ಅರಿವಿಲ್ಲದೆ ನೀರಿನಲ್ಲಿ ಆಟವಾಡಲು ಮುಂದಾಗುತ್ತಿರುವುದರಿಂದ ಇಂತಹ ಪ್ರಕರಣಗಳು ನಡೆಯುತ್ತಿರುವುದನ್ನು ಗಮನಿಸಲಾಗಿದೆ. ಆದ್ದರಿಂದ ಶಾಲಾ ಮಕ್ಕಳು ನದಿ ಅಥವಾ ಸಮುದ್ರದ ನೀರಿನಲ್ಲಿ ಆಡುವುದನ್ನು ತಡೆಗಟ್ಟುವುದು ನಿರ್ಬಂಧಿಸಬೇಕಾಗಿದೆ.

ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ನದಿ ಹಾಗೂ ಸಮುದ್ರ ತೀರಕ್ಕೆ ಇಳಿಯುವುದರಿಂದ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ತಿಳುವಳಿಕೆ ನೀಡಿ ನದಿ ಹಾಗೂ ಸಮುದ್ರ ತೀರಕ್ಕೆ ತೆgಳಿ ಆಟವಾಡದಂತೆ ಅರಿವು ಮೂಡಿಸಬೇಕು. ಒಂದು ವೇಳೆ ನೀರಿಗಿಳಿದು ಪ್ರಾಣಕ್ಕೆ ಅಪಾಯ ತಂದುಕೊಂಡಲ್ಲಿ ಸಂಬಂಧಪಟ್ಟ ಶಾಲಾ ಮುಖ್ಯಸ್ಥರನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಈ ಬಗ್ಗೆ ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ ಇವರು ತಮ್ಮ ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜುಗಳಿಗೆ ಸೂಕ್ತ ನಿರ್ದೇಶನ ನೀಡಲು ತಿಳಿಸಲಾಗಿದೆ.

ಆಯಾ ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿನ ನದಿ ತೀರದ ಗ್ರಾಮಗಳಲ್ಲಿ ಅರಿವು ಮೂಡಿಸಲು ಕ್ರಮವಹಿಸಬೇಕು. ಹೆಚ್ಚಾಗಿ ಈ ರೀತಿಯ ಪ್ರಕರಣಗಳು ಸಂಭವಿಸುವ ಸ್ಥಳಗಳಲ್ಲಿ ಪ್ರಧಾನವಾಗಿ ಗೋಚರಿಸುವ ರೀತಿಯಲ್ಲಿ ಎಚ್ಚರಿಕೆ ಫಲಕಗಳನ್ನು ಪ್ರಾಕೃತಿಕ ವಿಕೋಪ ನಿಧಿಯಡಿಯಲ್ಲಿ ಅಳವಡಿಸಿ 15 ದಿನದೊಳಗೆ ವರದಿ ನೀಡಲು ಜಿಲ್ಲಾಧಿಕಾರಿ ಜಗದೀಶ್ ಸೂಚಿಸಿದ್ದಾರೆ.