ಪೊಲೀಸ್ ಶವ ಬಸ್ಸಿನಲ್ಲಿ ಸಾಗಿಸಿದ ಇಲಾಖೆ !

 ಆರಕ್ಷಕರ ಆತ್ಮಸ್ಥೈರ್ಯ ಕುಗ್ಗಿಸುವ ವಿದ್ಯಮಾನ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಅನಾರೋಗ್ಯದಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಪೇದೆಯೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಮೃತದೇಹವನ್ನು ಪೊಲೀಸ್ ಇಲಾಖೆಯು ಆತನ ಊರಿಗೆ ಸರಕಾರಿ ಅಂಬುಲೆನ್ಸಿನಲ್ಲಿ ಸಾಗಿಸದೇ ಪೊಲೀಸ್ ಬಸ್ಸಿನಲ್ಲಿ ತುರುಕಿಸಿ, ಅದರಲ್ಲೇ ಆತನ ಕುಟುಂಬಿಕರನ್ನು ಕಳುಹಿಸುವ ಮೂಲಕ ಪೊಲೀಸರ ಆತ್ಮಸ್ಥೈರ್ಯನ್ನು ಕುಗ್ಗಿಸುವ ಘಟನೆ ಶನಿವಾರ ಮಣಿಪಾಲದಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆ ಮೂಲದ ಮಂಗಳೂರಿನಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಮಾರು 37 ವರ್ಷದ ಮಹಾಂತ ಬಸಪ್ಪ ಅನಾರೋಗ್ಯದಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ರಾತ್ರಿ ಮಹಾಂತ ಬಸಪ್ಪ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಅವರ ಊರಾದ ಬಾಗಲಕೋಟೆ ಜಿಲ್ಲೆಗೆ ರಾತ್ರಿ ಹೊತ್ತು ಅಂಬುಲೆನ್ಸ್ ಸಿಗದ ಕಾರಣ ಮೃತದೇಹವನ್ನು ಮಣಿಪಾಲದ ಶವಾಗಾರದಲ್ಲಿ ಇಡಲಾಯಿತು. ಆದರೆ ಶನಿವಾರ ಮಂಗಳೂರಿನ ಪೊಲೀಸ್ ಇಲಾಖೆಯು ಸರಕಾರಿ ಅಂಬುಲೆನ್ಸ್ ವ್ಯವಸ್ಥೆ ಮಾಡದೇ ಮಂಗಳೂರು ನೊಂದಾಯಿತ ಪೊಲೀಸ್ ಬಸ್ಸಿನಲ್ಲಿ ಪೇದೆ ಮಹಾಂತ ಬಸಪ್ಪರ ಮೃತದೇಹವನ್ನು ತುರುಕಿಸಿ, ಅವರ ಕುಟುಂಬದವರನ್ನು ಅದೇ ಬಸ್ಸಿನಲ್ಲಿ ಕೂರಿಸಿ ಸಾಗಿಸಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸಾರ್ವಜನಿಕರ ಆಸ್ತಿ-ಪಾಸ್ತಿಯನ್ನು ರಕ್ಷಣೆ ಮಾಡುತ್ತಾ ಹಗಲಿರುಳು ದುಡಿಯುತ್ತಿರುವ ಸರಕಾರಿ ಉದ್ಯೋಗಿ(ಪೊಲೀಸ್ ಪೇದೆ)ಗೆ ಈ ಸ್ಥಿತಿಯಾದರೆ, ಸಾರ್ವಜನಿಕರ ಪಾಡೇನು ಎಂದು ನಾಗರಿಕರು ಪ್ರಶ್ನಿಸಿದ್ದಾರೆ.