ಹಿಂದುತ್ವದ ಹೆಸರಿನಲ್ಲಿ ದುರ್ಬಲ ವರ್ಗಗಳ ದುರ್ಬಳಕೆ : ಮಟ್ಟು

ನಮ್ಮ ಪ್ರತಿನಿಧಿ ವರದಿ

ಪುತ್ತೂರು : “ದೇಶದಲ್ಲಿ ಹಿಂದುತ್ವದ ಹೆಸರಿನಲ್ಲಿ ಸಮಾಜದ ಹಿಂದುಳಿದ ವರ್ಗಗಳನ್ನು ದುರ್ಬಳಕೆ ಮಾಡುತ್ತಿದ್ದು ತಮಗೆ ಗೊತ್ತಿಲ್ಲದಂತೆ ಅವರು ಅದರೊಳಗೆ ಸೇರಿಕೊಂಡು ತಮ್ಮ ಬದುಕನ್ನು ನಾಶ ಮಾಡುತ್ತಿದ್ದಾರೆ. ಹಿಂದುತ್ವ ಎಂದರೆ ಅದು ಬಿಜೆಪಿಯವರ ಹಿಂದುತ್ವ ಎಂಬಂತೆ ಬಿಂಬಿಸಿ ಬಡ ದುರ್ಬಲ ವರ್ಗದವನ್ನು ದಾರಿತಪ್ಪಿಸುವ ಮೂಲಕ ಅವರನ್ನು ಕೋಮುವಾದಿಗಳನ್ನಾಗಿ ಮಾಡುವಲ್ಲಿ ಸಂಘ ಪರಿವಾರ ಮತ್ತು ಬಿಜೆಪಿ ಯಶಸ್ವಿಯಗುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ” ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದರು.

ಅವರು ಪುತ್ತೂರಿನಲ್ಲಿ ನಡೆ ಕಾಂಗ್ರೆಸ್ ನಡಿಗೆ ಸುರಾಜ್ಯದ ಕಡೆಗೆ ಕಾರ್ಯಾಗಾರದಲ್ಲಿ ಮಾತನಾಡಿದರು.

“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುತ್ವದ ಹೆಸರಿನಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ ನಾರಾಯಣ ಗುರುಗಳ ಸಮುದಾಯ ಇಂದು ಹೆಚ್ಚಾಗಿ ಕೇಸರಿಪಡೆಯಲ್ಲಿ ಗುರುತಿಸಿಕೊಂಡು ತಮ್ಮನ್ನು ತಾವೇ ನಾಶ ಮಾಡಿಸಿಕೊಳ್ಳುತ್ತಿದ್ದಾರೆ, ಈ ಕಾರಣಕ್ಕೆ ಜಿಲ್ಲೆಯಲ್ಲಿ ಬಿಲ್ಲವ ಸಮುದಾಯ ಅತ್ಯಂತ ಹಿಂದುಳಿದಿದೆ. ನಾರಾಯಣ ಗುರುಗಳು ಯಾವ ತತ್ವ ಸಿದ್ದಾಂತದಲ್ಲಿ ಈ ದೇಶವನ್ನು ಕಟ್ಟಬೇಕು ಎಂದು ಹೇಳಿದ್ದಾರೋ ಅವರ ಮಾತನ್ನು ಅವರ ಸಮುದಾಯದ ಮಂದಿಯೇ ಪಾಲಿಸದ ಸ್ಥಿತಿ ನಿರ್ಮಾಣವಾಗಿದೆ, ಕೇರಳದ ಜನರು ನಾರಾಯಣ ಗುರುಗಳ ತತ್ವವನ್ನು ಅಳವಡಿಸಿಕೊಂಡ ಕಾರಣ ಅಲ್ಲಿ ಶೇ 100 ಸಾಕ್ಷರತೆಯನ್ನು ಕಾಣುವಂತಾಯಿತು, ಅಲ್ಲಿ ಇಂದಿಗೂ ಕೋಮುವಾದಿಗಳನ್ನು ನೆಲೆಯೂರಲು ನಾರಾಯಣ ಗುರು ಅನುಯಾಯಿಗಳು ಬಿಡಲಿಲ್ಲ” ಎಂದರು.

congress-5

“ಇಂದಿರಾಗಾಂದಿ ಪ್ರಧಾನ ಮಂತ್ರಿಯಾಗಿದ್ದ ವೇಳೆ ದೇಶದ ಜನರ ಮನೆ ಬಾಗಿಲಿಗೆ ಬ್ಯಾಂಕ್ ವ್ಯವಸ್ಥೆ ಬಂದಿತ್ತು.  ಆದರೆ ಇಂದು ಜನ ಬ್ಯಾಂಕ್ ಬಾಗಿಲಿನಲ್ಲಿ ಕ್ಯೂ ನಿಂತುಕೊಳ್ಳುವ ದರಿದ್ರ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ” ಎಂದು ಮೋದಿ ಮತ್ತು ಇಂದಿರಾ ಆಡಳಿತಕ್ಕೆ ಹೋಲಿಕೆ ಮಾಡಿದರು.

“ಜಾತ್ಯತೀತ ಸಿದ್ದಾಂತಕ್ಕೆ ದೊಡ್ಡದಾದ ಇತಿಹಾಸವಿದೆ, ಅನೇಕ ಮಹಾನ್ ಸಂತರು ಇದರ ಹಿಂದೆ ಕೆಲಸ ಮಾಡಿದ್ದಾರೆ. ಆದರೆ ದೇಶದಲ್ಲಿ ಅರಾಜಕತೆ ಸೃಷ್ಟಿಸಿದವರ ಸಾಲಿನಲ್ಲಿ ಸಂಘಪರಿವಾರದ ನಾಯಕರನ್ನು ಮಾತ್ರ ಕಾಣಲು ಸಾದ್ಯ. ಕೋಮುವಾದಿಗಳ ಅಟ್ಟಹಾಸಕ್ಕೆ ಜಾತ್ಯತೀತ ಮಹಾನ್ ನಾಯಕರು ಮಾತನಾಡದ ಸ್ಥಿತಿ ನಿರ್ಮಾಣವಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

“ದೇಶದಲ್ಲಿ ಭೂ ಸುಧಾರಣೆ ಕಾನೂನನ್ನು ಜಾರಿ ಮಾಡಿದಾಗ ಒಂದು ದೊಡ್ಡ ಸಮುದಾಯ ಭೂಮಿಯನ್ನು ಕಳೆದುಕೊಂಡಿತ್ತು.  ಆದರೆ ಅದೇ ವೇಳೆ ಆ ಸಮುದಾಯಕ್ಕೆ ತಕ್ಕ ನಾಯಕತ್ವ ಸಿಕ್ಕಿದ ಕಾರಣ ಅವರು ಇಂದಿಗೂ ಸಮಾಜದ ಮೇಲ್ಪಂಕ್ತಿಯಲ್ಲಿದ್ದಾರೆ. ಆದರೆ ಭೂಮಿ ಪಡೆದುಕೊಂಡ ದುರ್ಬಲ ಸಮುದಾಯಕ್ಕೆ ಸೂಕ್ತ ನಾಯಕತ್ವ ಇಲ್ಲದ ಕಾರಣ ಇಂದಿಗೂ ಇನ್ನೊಬ್ಬರ ಬಳಕೆಯ ವಸ್ತುವಾಗಿ ಪರಿಣಮಿಸಿದೆ. ನಮ್ಮ ಸಮುದಾಯ ಯಾಕೆ ಇಂದಿಗೂ ಅಭಿವೃದ್ದಿಯಾಗಿಲ್ಲ ಎಂಬುದರ ಕುರಿತು ನಾವು ಚಿಂತನೆ ಮಾಡಬೇಕು. ನಾವು ಯಾರ ಕೈಯೊಳಗೆ ಸಿಲುಕಿ ಇಂದು ನಲುಗುತ್ತಿದ್ದೇವೆ ಆ ಸ್ಥಿತಿ ನಮ್ಮ ಮಕ್ಕಳಿಗೆ ಬಾರದಿರಲಿ ಎಂದು ನಾವು ಪ್ರತಿಜ್ಞೆ ಮಾಡಬೇಕಿದೆ, ಕೋಮುವಾದಿಗಳಿಗೆ ನಾವು ಬಳಕೆ ವಸ್ತುವಾಗಲು ಅವಕಾಶ ನೀಡುವುದಿಲ್ಲ ಎಂಬುದನ್ನು ನಾವು ಇಂದೇ ಖಾತ್ರಿಪಡಿಸಿಕೊಳ್ಳಬೇಕು. ಆಗ ಮಾತ್ರ ನಾವು ಬಲಿಯಾಗುವುದನ್ನು ತಪ್ಪಿಸಿ ಸಮಾಜದಲ್ಲಿ ಬೆಲೆಯುಳ್ಳ ಸಮುದಾಯವಾಗಿ ಅಭಿವೃದ್ದಿ ಹೊಂದಲು ಸಾಧ್ಯ” ಎಂದು ಹೇಳಿದರು.

“ಇಂದು ಮಾಧ್ಯಮ ಕ್ಷೇತ್ರ ಉದ್ಯಮವಾಗಿ ಪರಿವರ್ತನೆಯಾಗಿದೆ, ಮಾಧ್ಯಮಗಳಿಗೆ ಇಂದು ಓದುಗರು ಬೇಡ. ಕೇವಲ ಗ್ರಾಹಕರು ಮಾತ್ರ ಇದ್ದರೆ ಸಾಕು ಎಂಬ1 ನಿಲುವು ಬೃಹತ್ ಮಾಧ್ಯಮ ಸಂಸ್ಥೆಗಳದ್ದಾಗಿದೆ.  ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬಹುಪಾಲು ಮಾಧ್ಯಮಗಳು ಇಂದು ಸಂಘಪರಿವಾರದ ಕಪಿಮುಷ್ಠಿಯಲ್ಲಿದೆ. ಈ ಕಾರಣಕ್ಕೆ ಸಂಘಪರಿವಾರ ಅಥವಾ ಬಿಜೆಪಿ ನಾಯಕರು ಮಾಡುವ ಯಾವುದೇ ಕಾರ್ಯಕ್ರಮ ಇಂದು ವೈಬವೀಕೃತವಾಗುತ್ತಿದೆ. ಜಾತ್ಯತೀತ ಶಕ್ತಿಗಳು ದೇಶದಲ್ಲಿ ಅಧಿಕಾರ ಮಾಡಿದ್ದರೂ ಇಂದಿಗೂ ಒಂದು ಮಾಧ್ಯಮವನ್ನು ತಯಾರು ಮಾಡಲು ಸಾಧ್ಯವಾಗಿಲ್ಲ ಎಂಬುದು ದುರಂತ, ಮಾಧ್ಯಮವನ್ನು ನಂಬಿ ನೀವು ಯಾವುದೇ ಹೋರಾಟಕ್ಕೆ ಇಳಿಯುವುದು ಬೇಡ, ಮಾಧ್ಯಮವನ್ನು ಅತಿಯಾಗಿ ನಂಬುವುದು ಬೇಡ” ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.