ಉಡುಪಿಯಲ್ಲಿ ಉಲ್ಭಣಿಸಿದ ಡೆಂಗ್ಯೂ, 50ಕ್ಕೂ ಅಧಿಕ ಹೊಸ ಪ್ರಕರಣ ಪತ್ತೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಉಡುಪಿ ನಗರದಾದ್ಯಂತ ಡೆಂಗ್ಯೂ ಪ್ರಕರಣಗಳು ಉಲ್ಭಣಗೊಂಡಿದ್ದು, ಇತ್ತೀಚೆಗೆ ಸುಮಾರು 50ಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗಿವೆ.

40 ಪ್ರಕರಣಗಳು ನಗರದ ಕೊಡಂಕೂರು ಗ್ರಾಮವೊಂದರಲ್ಲಿಯೇ ಕಾಣಿಸಿಕೊಂಡಿದೆ. ದುರಂತವೆಂದರೆ ಒಂದೇ ಕುಟುಂಬದ ಆರು ಮಂದಿಗೆ ಡೆಂಗ್ಯೂ ಬಾಧಿಸಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಾರ್ಡಿನ ನ್ಯೂ ಕಾಲೊನಿಯಲ್ಲಿ 150 ಮನೆಗಳು, ಎಸ್ ಇ ಕಾಲೊನಿಯಲ್ಲಿ 45 ಮನೆಗಳು ಮತ್ತು ರಾಜಾಜಿನಗರದಲ್ಲಿ ಸುಮಾರು 75 ಮನೆಗಳಿವೆ. ಈ ಸ್ಲಮ್ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಜನರು ಸರ್ಕಾರ ನೀಡಿದ 3 ಅಥವಾ 5 ಸೆಂಟ್ಸ್ ಭೂಮಿಯಲ್ಲಿ ವಾಸವಾಗಿದ್ದಾರೆ. ಅವರಿಗೆ ಮೂಲಭೂತ ಸೌಲಭ್ಯಗಳಾದ ಇಂಟರಲಾಕ್ ರಸ್ತೆ, ಡ್ರೈನೇಜ್ ಸೌಲಭ್ಯ, ಶೌಚಾಲಯ ಮೊದಲಾದ ಸೌಲಭ್ಯಗಳನ್ನು ಒದಗಿಸಲಾಗಿದೆ. ಅವರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನೀಡಲಾಗಿದ್ದರೂ ಜನತೆ ಅದನ್ನು ನಿರ್ಲಕ್ಷ್ಯಿಸಿದ್ದಾರೆ ಎಂದು ಉಡುಪಿ ನಗರಸಭೆ ಮಾಜಿ ಸದಸ್ಯ ಗಣಪತಿ ಶೆಟ್ಟಿಗಾರ್ ಹೇಳಿದ್ದಾರೆ.

ಡೆಂಗ್ಯೂ ನಿಯಂತ್ರಣಕ್ಕೆ ನಗರಸಭೆ ಮತ್ತು ಆರೋಗ್ಯ ಇಲಾಖೆ ತನ್ನ ಸಹಾಯವನ್ನು ಗರಿಷ್ಟ ಮಟ್ಟಕ್ಕೆ ವಿಸ್ತರಿಸಿದೆ. ಇಲ್ಲಿನ ಜನರು ನಗರಸಭೆ ಪೂರೈಸುವ ನೀರನ್ನೇ ಅವಲಂಬಿಸಿದ್ದಾರೆ. ಆದರೆ ಇಲ್ಲಿನ ಜನತೆಗೆ ನಿರಂತರ ನೀರು ಲಭ್ಯವಾಗುತ್ತಿಲ್ಲ. ಈ ಕಾಲೊನಿಗೆ ನೀರು ತಲುಪಲು ನೀರಿನ ಒತ್ತಡ ಸಾಕಾಗುತ್ತಿಲ್ಲ. ಹಾಗಾಗಿ ಹೆಚ್ಚಿನವರು ನೀರನ್ನು ಮೂರರಿಂದ ನಾಲ್ಕು ದಿನಗಳವರೆಗೆ ಸಂಗ್ರಹಿಸಿಟ್ಟು ಬಳಸುತ್ತಿದ್ದಾರೆ. ಇದು ಕೂಡ ಡೆಂಗ್ಯೂವನ್ನು ಆಹ್ವಾನಿಸುತ್ತದೆ.

ಕೊಡಂಕೂರು ಪ್ರದೇಶದಲ್ಲಿ ಮೊದಲ ಡೆಂಗ್ಯೂ ಪ್ರಕರಣ ನವೆಂಬರ್ ಮೊದಲ ವಾರದಲ್ಲಿ ವರದಿಯಾಗಿದೆ. ತಕ್ಷಣ ಸ್ವಚ್ಛತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಆ ಪ್ರದೇಶದ ಜನರಿಗೆ ಔಷಧಿಯುಕ್ತ ನೆಟ್ ವಿತರಿಸಲಾಗಿದೆ.

“ಈ ಬಾರಿ ಜಿಲ್ಲೆಯಲ್ಲಿ ಕಡಿಮೆ ಮಳೆ ಸುರಿದಿದ್ದು, ಹಾಗಾಗಿ ಬೇಸಿಗೆ ಕಾಲದ ಬರಗಾಲದ ಭೀತಿಯಿಂದ ಜನತೆ ನೀರನ್ನು ಸಂಗ್ರಹಿಸಿಟ್ಟು ಬಳಕೆ ಮಾಡುತ್ತಿದ್ದಾರೆ. ಸಂಗ್ರಹಿಸಿಟ್ಟ ನೀರನ್ನು ಗಟ್ಟಿಯಾಗಿ ಮುಚ್ಚಿಡಿ ಎಂದು ಜನರಲ್ಲಿ ಮನವಿ ಮಾಡಲಾಗಿದೆ. ವಾರಕ್ಕೊಮ್ಮೆಯಾದರೂ ನೀರಿನ ಟ್ಯಾಂಕನ್ನು ಸ್ವಚ್ಛ ನೀರಿನಿಂದ ತೊಳೆದು ಒಂದು ದಿನ ಪೂರ್ತಿ ಬಿಸಿಲಿಗೆ ಒಣಗಿಸುವಂತೆ ಜನರಿಗೆ ತಿಳಿಹೇಳಲಾಗುತ್ತಿದೆ” ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದ್ದಾರೆ.