ನೇತ್ರಾವತಿ ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣಿಕನಿಂದ 18 ಲಕ್ಷ ರೂ ಅಮಾನ್ಯಗೊಂಡ ನೋಟು ವಶ

ಆರೋಪಿ ಬಂಧನ

ನಮ್ಮ ಪ್ರತಿನಿಧಿ ವರದಿ

ಭಟ್ಕಳ : ಗೋವಾದಿಂದ ಕೇರಳದ ಕಾಸರಗೋಡಿಗೆ ಹೋಗುವ ನೇತ್ರಾವತಿ ಎಕ್ಸಪ್ರೆಸ್ ರೈಲಿನಲ್ಲಿ ಶನಿವಾರ ಬೆಳಿಗ್ಗೆ ಕೇರಳದ ಕಾಸರಗೋಡ ಮಂಜೇಶ್ವರ ಮೂಲದ ವ್ಯಕ್ತಿಯೊಬ್ಬನಿಂದ ಸರ್ಕಾರದ ಅಮಾನ್ಯಗೊಂಡ 500, 1,000 ಮುಖಬೆಲೆಯ 18 ಲಕ್ಷ ಹಣವನ್ನು ರೈಲ್ವೇ ಪೊಲೀಸರು ವಶಪಡಿಸಿಕೊಂಡು ಆರೋಪಿತನನ್ನು ಇಲ್ಲಿನ ನಗರ ಠಾಣೆಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಕೇರಳದ ಕಾಸರಗೋಡು ಮಂಜೇಶ್ವರದ ಕುಂಜತ್ತೂರಿನ ಸೇಲ್ಸಮೆನ್ ಮೊಹಿದ್ದೀನ್ ಅಬ್ದುಲ್ ಕುಂಞÂ (40) ಬಂಧಿತ ವ್ಯಕ್ತಿಯಾಗಿದ್ದಾನೆ. ಈತ ಶನಿವಾರ ಬೆಳಿಗಿನ ಜಾವ 2.30 ಗಂಟೆ ಸುಮಾರಿಗೆ ಗೋವಾದಿಂದ ಕೇರಳಕ್ಕೆ ತೆರಳುತ್ತಿದ್ದ ನೇತ್ರಾವತಿ ಎಕ್ಸಪ್ರೆಸ್ ರೈಲಿನಲ್ಲಿ ಸರ್ಕಾರದಿಂದ ಅಮಾನ್ಯಗೊಂಡ 1,000 ಮುಖಬೆಲೆಯ 13 ಕಟ್ಟುಗಳಲ್ಲಿ 13 ಲಕ್ಷ ರೂ ಹಾಗೂ 500 ಮುಖಬೆಲೆ 5

ಕಟ್ಟುಗಳಲ್ಲಿ 5 ಲಕ್ಷ ರೂ ಸೇರಿದಂತೆ ಒಟ್ಟೂ 18 ಕಟ್ಟುಗಳಲ್ಲಿ 18 ಲಕ್ಷ ರೂಪಾಯಿಗಳನ್ನು ಪ್ಲಾಸ್ಟಿಕ್ ಬ್ಯಾಗಿನಲ್ಲಿ ಇಟ್ಟುಕೊಂಡು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ರೈಲ್ವೇ ಪೊಲೀಸರಿಗೆ ಸಂಶಯ ಬಂದು ರೆಡ್ ಹ್ಯಾಂಡ್ ಆಗಿ ಹಣ ಸಮೇತ ಆತನನ್ನು ಹಿಡಿದಿದ್ದಾರೆ.

ಈ ಹಿಂದೆಯೂ ಕೂಡ ಭಟ್ಕಳದ ಸಾಗರ ರಸ್ತೆಯಲ್ಲಿ ವಾಹನವೊಂದರಲ್ಲಿ ಅಮಾನ್ಯಗೊಂಡ 500 ಮತ್ತು 1,000 ರೂ ಮುಖಬೆಲೆಯ ನೋಟುಗಳನ್ನು ಸಾಗಾಟ ಮಾಡುತ್ತಿದ್ದ ತೀರ್ಥಳ್ಳಿಯ ಆರೋಪಿತರನ್ನು ಬಂಧಿಸಲಾಗಿತ್ತು. ಶನಿವಾರ ರೈಲ್ವೇಯಲ್ಲಿ ಅಮಾನ್ಯಗೊಂಡ ನೋಟಿನ ಜೊತೆ ಸಿಕ್ಕ ಆರೋಪಿ ಆ ಹಣವನ್ನು ಎಲ್ಲಿಗೆ ಒಯ್ಯುತ್ತಿದ್ದ, ಅದು ಯಾರದ್ದಾಗಿತ್ತು ಎನ್ನುವುದು ತನಿಖೆಯಿಂದಲೇ ಗೊತ್ತಾಗಬೇಕಿದೆ.