ಜನಸಾಮಾನ್ಯರಿಗೆ ದುಬಾರಿಯಾದ ಅಮಾನ್ಯೀಕರಣ

ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂಬ ಆಕಾಂಕ್ಷೆಯನ್ನು ಹೊತ್ತ ಶ್ರೀಸಾಮಾನ್ಯನ ನಿತ್ಯದ ಬದುಕು ಮೂರಾಬಟ್ಟೆಯಾಗುತ್ತಿರುವುದು ದುರಂತ.

ವಿಶೇಷ ವರದಿ
ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂಬ ಭರವಸೆಯ ಮೇಲೆ ನರೇಂದ್ರ ಮೋದಿ ಸರ್ಕಾರ 500 ಮತ್ತು 1000 ರೂ ನೋಟುಗಳನ್ನು ರದ್ದುಪಡಿಸಿದೆ. ಆದರೆ ಈ ದಿಢೀರ್ ಘೋಷಣೆ ದೇಶದ ಜನಸಾಮಾನ್ಯರನ್ನು ಮೂರಾಬಟ್ಟೆ ಮಾಡುತ್ತಿರುವುದು ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ. ನೊಯಿಡಾದ ಕೊಳೆಗೇರಿಯಲ್ಲಿ ವಾಸಿಸುತ್ತಿರುವ 65 ವರ್ಷದ ವೃದ್ಧ ಮುನ್ನಿ ಲಾಲ್ ತನ್ನ ಪತ್ನಿಯ ಶವಸಂಸ್ಕಾರಕ್ಕಾಗಿ ಹಣ ಹೊಂದಿಸಲು ಒಂದು ದಿನವಿಡೀ ಪರದಾಡಬೇಕಾಯಿತು.
ಬ್ಯಾಂಕಿನಲ್ಲಿ 15 ಸಾವಿರ ರೂ ಇದ್ದರೂ ಒಂದು ದಿನದ ನಂತರವೇ ಹಣ ಪಡೆಯಲು ಸಾಧ್ಯವಾಗಿದೆ. ಪತ್ನಿಯ ಶವಸಂಸ್ಕಾರಕ್ಕೆ ಹಣ ನೀಡಲು ಕೋರಿದರೂ ಸಹ ಬ್ಯಾಂಕ್ ಸಿಬ್ಬಂದಿ ತಾನು ಸುಳ್ಳು ಹೇಳುತ್ತಿದ್ದೇನೆ ಎಂದು ನಿರ್ಲಕ್ಷಿಸಿದರು ಎನ್ನುತ್ತಾರೆ ಮುನ್ನಿಲಾಲ್. ಈ ಘಟನೆಯನ್ನು ಪ್ರತಿಭಟಿಸಿದ ಮುನ್ನಿಲಾಲನ ಸಂಬಂಧಿಕರು ಬ್ಯಾಂಕ್ ಎದುರು ಧರಣಿ ನಡಸಿದ ನಂತರವೇ ಮುನ್ನಿಲಾಲಗೆ ಹಣ ನೀಡಲಾಗಿದೆ.
ಪುದುಚೆರಿಯಲ್ಲಿ ಅಮಾನ್ಯೀಕರಣ ಪ್ರಭಾವದಿಂದ ಗ್ರಾಮೀಣ ಬದುಕು ಸ್ಥಗಿತವಾಗಿದೆ ಎಂದು ವರದಿಯೊಂದರಲ್ಲಿ ಹೇಳಲಾಗಿದೆ. ನೋಟು ರದ್ದತಿಯಾದ ನಂತರ ಯಾರೂ ಸಹ ಖರ್ಚು ಮಾಡಲು ಇಚ್ಚಿಸುತ್ತಿಲ.್ಲ ದಿನಕ್ಕೆ 600 ರೂ ಆದಾಯ ಗಳಿಸುತ್ತಿದ್ದ ಕಟ್ಟಡ ನಿರ್ಮಾಣ ಕಾರ್ಮಿಕ ಸಿತಾರಸು ಕೆಲಸವಿಲ್ಲದೆ ಕಾಲ ಕಳೆಯುತ್ತಿದ್ದಾನೆ. ರಿಯಲ್ ಎಸ್ಟೇಟ್ ಉದ್ಯಮ ಕೃಷಿ ಭೂಮಿಯನ್ನು ಆಕ್ರಮಿಸಿದ ನಂತರ ಉತ್ತಮ ಕೂಲಿ ಗಳಿಸುತ್ತಿದ್ದ ಕಾರ್ಮಿಕರು ಈ ಆದಾಯವನ್ನೂ ಕಳೆದುಕೊಂಡಿದ್ದಾರೆ. ಮುಂಗಾರು ವಿಳಂಬವಾಗಿರುವುದರಿಂದ ಕೃಷಿ ಭೂಮಿ ಇರುವವರೂ ಸಹ ವ್ಯವಸಾಯ ಮಾಡಲಾಗುತ್ತಿಲ್ಲ. ಅಲ್ಪಸ್ವಲ್ಪ ಕೃಷಿ ಚಟುವಟಿಕೆಯಲ್ಲಿ ತೊಡಗಿರುವವರಿಗೆ ತಮ್ಮ ಸಲಕರಣೆಗಳಿಗೆ, ಗೊಬ್ಬರ, ಬೀಜ ಖರೀದಿಗೆ ಪರದಾಡುವಂತಾಗಿದೆ. ತಮ್ಮ ಊರಿನ ಸುತ್ತ ಇರುವ 5 ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳಲ್ಲಿ ಹಣವೇ ಇಲ್ಲದ ಕಾರಣ ತಾವು ಪಡೆದ 2000 ರೂಪಾಯಿಯಿಂದ ಏನನ್ನೂ ಖರೀದಿಸಲಾಗುತ್ತಿಲ್ಲ ಎನ್ನುತ್ತಾರೆ ರೈತ ಕಾಲಿಯಮೂರ್ತಿ
ಅಮಾನ್ಯೀಕರಣ ನೀತಿಯನ್ನು ಘೋಷಿಸಿದ ನಂತರದಲ್ಲಿ ಇಂತಹ ದುರಂತಗಳು ಸಂಭವಿಸುತ್ತಲೇ ಇವೆ. ಮೊದಲ ಹತ್ತು ದಿನಗಳ ಅವಧಿಯಲ್ಲಿ 55 ಜನರು ಬ್ಯಾಂಕುಗಳಲ್ಲಿ ಕ್ಯೂ ನಿಲ್ಲಲು ಹೋಗಿ ಮತ್ತಿತರ ಕಾರಣಗಳಿಗಾಗಿ ಮೃತಪಟ್ಟಿದ್ದಾರೆ. ತನ್ನ ಬಳಿ ಇರುವ ಹಣವನ್ನು ವಿನಿಮಯ ಮಾಡಿಕೊಳ್ಳಲಾಗದೆ ದೆಹಲಿಯಲ್ಲಿ 25 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 70 ವರ್ಷದ ವೃದ್ಧನೊಬ್ಬ ಬ್ಯಾಂಕಿನಲ್ಲಿ ಕ್ಯೂ ನಿಂತಿದ್ದಾಗ ಮೃತಪಟ್ಟಿದ್ದಾನೆ. ಮಹಾರಾಷ್ಟ್ರದಲ್ಲಿ 55 ವರ್ಷದ ಬ್ಯಾಂಕ್ ಸಿಬ್ಬಂದಿ ಒತ್ತಡ ತಾಳಲಾರದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ವಿಶಾಖಪಟ್ಟಣಂನಲ್ಲಿ 18 ತಿಂಗಳ ಹಸುಳೆಗೆ ಔಷಧಿ ಒದಗಿಸಲು ಹಣ ಇಲ್ಲದೆ ಪರದಾಡಿದ ದಂಪತಿ ತಮ್ಮ ಮಗುವನ್ನು ಕಳೆದುಕೊಂಡಿದ್ದಾರೆ  ಈ ಸಾವಿನ ಪ್ರಕರಣಗಳೇ ಅಲ್ಲದೆ ಹಲವಾರು ಸಂದರ್ಭಗಳಲ್ಲಿ ಜನರು ತಮ್ಮ ಬಳಿ ಹಣ ಇದ್ದರೂ ಬಳಸಲಾರದೆ ಪರದಾಡುತ್ತಿರುವುದು ವರದಿಯಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಕೆಳ ಮಧ್ಯಮ ವರ್ಗಗಳ ಬದುಕು ದುಸ್ತರವಾಗುತ್ತಿರುವುದು ವರದಿಯಾಗುತ್ತಿದೆ  ವಿವಿಧ ಕ್ಷೇತ್ರಗಳಲ್ಲಿ ಉತ್ಪಾದನೆ ಮತ್ತು ಮಾರಾಟದ ಪ್ರಮಾಣ ಕುಸಿದಿದ್ದು ದಿನಗೂಲಿ ನೌಕರರು ತಮ್ಮ ಕೂಲಿಯನ್ನೂ ಪಡೆಯದ ಸ್ಥಿತಿ ತಲುಪಿದ್ದಾರೆ
ರದ್ದಾದ ನೋಟುಗಳಲ್ಲಿ ಕೂಲಿ ಪಡೆಯುತ್ತಿರುವ ಕಾರ್ಮಿಕರು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಬ್ಯಾಂಕ್ ಖಾತೆ ಇಲ್ಲದ ಜನಸಾಮಾನ್ಯರು ತಮ್ಮ ಬಳಿ ಇರುವ ಹಣವನ್ನು ವಿನಿಮಯ ಮಾಡಿಕೊಳ್ಳಲು ದಲ್ಲಾಳಿಗಳ ದುರಾಸೆಗೆ ಬಲಿಯಾಗುತ್ತಿದ್ದಾರೆ. ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂಬ ಆಕಾಂಕ್ಷೆಯನ್ನು ಹೊತ್ತ ಶ್ರೀಸಾಮಾನ್ಯನ ನಿತ್ಯದ ಬದುಕು ಮೂರಾಬಟ್ಟೆಯಾಗುತ್ತಿರುವುದು ದುರಂತ