ನೋಟು ನಿಷೇಧದಿಂದ ಸಣ್ಣ ಉದ್ಯಮಕ್ಕೆ ಮುಳುಗು ನೀರು

ಆರೆಸ್ಸೆಸ್ ಸಮೀಕ್ಷೆ

ನವದೆಹಲಿ : ನೋಟು ನಿಷೇಧದಿಂದ ದೇಶದ ಮಧ್ಯಮ ಮತ್ತು ಲಘು ಉದ್ಯಮ ಕ್ಷೇತ್ರಕ್ಕೆ ಶೇ 70ರಷ್ಟು ತೊಂದರೆ ಉಂಟಾಗಿದೆ ಎಂದು ಆರೆಸ್ಸೆಸ್ಸಿಗೆ ಸೇರಿದ ಸಂಸ್ಥೆಯೊಂದು ನಡೆಸಿದೆ ಸಮೀಕ್ಷೆ ಹೇಳಿದೆ.
ತಾನು ನಡೆಸಿದ ಸಮೀಕ್ಷೆಯ ಬಗ್ಗೆ ಲಘು ಉದ್ಯೋಗ ಭಾರತಿ (ಎಲ್‍ಯುಬಿ) ಮೊನ್ನೆ ಸರ್ಕಾರದೊಂದಿಗೆ ಚರ್ಚಿಸಿತು. ನೋಟು ನಿಷೇಧದ ಬಳಿಕ ತಮ್ಮ ಉತ್ಪನ್ನಗಳಿಗೆ ಬೇಡಿಕೆ ಕುಸಿದಿದೆ ಎಂದು ಶೇ 69.9 ಸಣ್ಣ ಉದ್ಯಮಿಗಳು ಪ್ರತಿಕ್ರಿಯಿಸಿದ್ದಾರೆ. ಶೇ 60ರಷ್ಟು ಉದ್ಯಮಿಗಳು ತಾವು ಒದಗಿಸಿದ ಸರಕುಗಳಿಗೆ ಬಿಲ್ ಪಾವತಿ ನಿಧಾನವಾಗಿದೆ ಎಂದು ದೂರಿಕೊಂಡಿದ್ದಾರೆಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.
ಸರ್ಕಾರದ ನೋಟು ರದ್ದತಿ ನೀತಿಗೆ ಸಾರ್ವಜನಿಕರಿಂದ ಬೆಂಬಲ ಸಿಕ್ಕಿದೆ ಎಂಬ ಸರಕಾರದ ಹೇಳಿಕೆಯನ್ನು ಅಲ್ಲಗಳೆಯುವ ರೀತಿಯಲ್ಲಿ ಸಮೀಕ್ಷೆ ಅಂಶಗಳು ಹೊರಬಿದ್ದಿವೆ. ಒಂದೊಮ್ಮೆ ನಗದು ಬಿಕ್ಕಟ್ಟು ಇದೇ ರೀತಿ ಮುಂದುವರಿದರೆ ಉದ್ಯಮ ಕ್ಷೇತ್ರ ತೀವ್ರ ಕುಸಿತ ಕಾಣಬೇಕಾಗುತ್ತದೆ ಎಂದು ಸಮೀಕ್ಷೆ ಎಚ್ಚರಿಸಿದೆ.
ನೋಟು ರದ್ದತಿಯಿಂದ ಸಣ್ಣ ಉದ್ಯಮಗಳು ಅನುಭವಿಸಿರುವ ನಷ್ಟ ಭರ್ತಿಗೊಳಿಸಲು ಕನಿಷ್ಟ ಆರು ತಿಂಗಳು ಬೇಕಾಗಬಹುದು ಎಂದು ದೇಶದ 400 ಜಿಲ್ಲೆಗಳಲ್ಲಿ ನಡೆಸಲಾದ ಸಮೀಕ್ಷೆ ವೇಳೆ (ವಿಶೇಷತಃ ಲಘು ಉದ್ಯಮಿಗಳು) ಉದ್ಯಮಿಗಳು ಹೇಳಿಕೊಂಡಿದ್ದಾರೆ.
ನಗದು ರಹಿತ ವ್ಯವಹಾರದಿಂದ ಮತ್ತೊಂದು ಹೊಡೆತ ಬೀಲಳಿದೆ. ನಗದುಸಹಿತ ವ್ಯವಹಾರವನ್ನು ತಕ್ಷಣ ನಗದುರಹಿತ ವ್ಯವಹಾರವಾಗಿ ಬದಲಿಸಲು ಅಸಾಧ್ಯವೆಂದು ಶೇ 49.5 ಉದ್ಯಮಿಗಳು ಹಾಗೂ ಇದಕ್ಕೆ ಆರು ತಿಂಗಳ ಕಾಲಾವಕಾಶ ತಗುಲಬಹುದೆಂದು ಶೇ 33.6 ಮಂದಿ ಅಭಿಪ್ರಾಯಪಟ್ಟಿದ್ದಾರೆ.