ನೋಟು ಅಮಾನ್ಯ ದೇಶದ ದೊಡ್ಡ ಹಗರಣ : ಚಾಕೋ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪ್ರಧಾನಿ ನರೇಂದ್ರ ಮೋದಿಯವರ ನೋಟು ಅಮಾನ್ಯ ನಿರ್ಧಾರ ದೇಶದ ಮೊದಲ ಅತ್ಯಂತ ಬೃಹತ್ ಹಗರಣವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪಿ ಸಿ ಚಾಕೋ ಹೇಳಿದ್ದಾರೆ.

ಮಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರು “ನೋಟು ಅಮಾನ್ಯ ಮಾಡಿರುವ ಹಿಂದೆ ದುರುದ್ದೇಶವಿದೆ. ಮೋದಿಯ ಈ ನಿರ್ಧಾರ ನಿರ್ಧಾರ ದೇಶದ ಆರ್ಥಿಕ ಸುಧಾರಣೆಯ ನಿರ್ಧಾರವಲ್ಲ. ಈ ನಿರ್ಧಾರವನ್ನು ನಾಲ್ಕು ತಿಂಗಳ ಹಿಂದೆಯೇ ಪ್ರಧಾನಿ ತಳೆದಿದ್ದರು. ನೋಟು ಅಮಾನ್ಯ ನಿರ್ಧಾರ ಘೋಷಿಸುವ ಮೊದಲ ಒಂದು ತಿಂಗಳಲ್ಲಿ ಬಿಜೆಪಿ ಖಾತೆಯಲ್ಲಿ 5.65 ಲಕ್ಷ ಕೋಟಿ ರೂ ಜಮೆ ಆಗಿದೆ. ಈ ಹಣದಲ್ಲಿ ಪಕ್ಷಕ್ಕೆ ಭಾರೀ ಪ್ರಮಾಣದ ಭೂ ಖರೀದಿ ಮಾಡಲಾಗಿದೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೆಸರಿನಲ್ಲಿ ಭೂಮಿಯನ್ನು ಖರೀದಿ ಮಾಡಲಾಗಿದ್ದು, ಈ ಹಗರಣ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆದಲ್ಲಿ ಎಲ್ಲವೂ ಬಹಿರಂಗವಾಗಲಿದೆ” ಎಂದರು.

“ಕಪ್ಪು ಹಣವನ್ನು ಕೂಡಿಟ್ಟಿದ್ದಾರೆ ಎಂದು ಹೇಳಲಾದ ಉಗ್ರರ ಕೈಯಲ್ಲಿ 2000 ರೂ  ಹೊಸ ನೋಟು ಇದೆ. ಉಗ್ರರು ವಿದೇಶಿ ಕರೆನ್ಸಿ ಬಳಸಿ ಶಸ್ತ್ರಾಸ್ತ್ರ, ಮೊಬೈಲ್ ಪೋನ್ ಖರೀದಿಸುತ್ತಿದ್ದಾರೆ. ನೋಟು ಅಮಾನ್ಯ ಮಾಡಿದ ಬಳಿಕ ಉಗ್ರವಾದ ಮಟ್ಟಹಾಕಿದ್ದೇವೆ ಎಂದು ಮೋದಿ ಹೇಳುವುದು ಸಂಪೂರ್ಣ ಸುಳ್ಳು” ಎಂದರು.

“ಹೊಸ ನೋಟುಗಳ ಮುದ್ರಣಕ್ಕೆ 14 ಸಾವಿರ ಕೋಟಿ ರೂ ಖರ್ಚು ಮಾಡಲಾಗಿದೆ ಎಂದು ಮೋದಿ ಹೇಳುತ್ತಿದ್ದಾರೆ. ಮೋದಿ ಹೇಳುತ್ತಿರುವುದು ಎಲ್ಲವೂ ಶುದ್ಧ ಸುಳ್ಳು” ಎಂದರು.