ತಿಂಗಳು ಕಳೆದರೂ ಮುಗಿಯದ ನೋಟು ಅಮಾನ್ಯ ಗೋಳು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ನೋಟು ಅಮಾನ್ಯಗೊಂಡು ಒಂದೂವರೆ ತಿಂಗಳು ಕಳೆದರೂ ಬ್ಯಾಂಕುಗಳು ಇನ್ನೂ ಸಂಪೂರ್ಣವಾಗಿ ಸಾರ್ವಜನಿಕ ಸೇವೆಗೆ ಒಗ್ಗಿಕೊಂಡಿಲ್ಲ. ಪ್ರತಿ ದಿನ ಒಂದಿಲ್ಲೊಂದು ಸಮಸ್ಯೆ ಬ್ಯಾಂಕಿನಲ್ಲಿ ಇದ್ದೇ ಇದ್ದು, ಸಾರ್ವಜನಿಕರ ಪರದಾಟ ಮುಂದುವರಿದಿದೆ. ನೋಟು ಸರಬರಾಜು ಇಲ್ಲ, ಯಂತ್ರಗಳು ಕೈಕೊಡುವುದು, ಎಟಿಎಂ ಮಷಿನ್ ಕೈಕೊಡುವುದು ಮೊದಲಾದ ತಾಂತ್ರಿಕ ಸಮಸ್ಯೆಗಳು ಬ್ಯಾಂಕಿನಲ್ಲಿ ನಿತ್ಯ ಕಂಡು ಬರುತ್ತಿದ್ದು, ಜನ ತೀವ್ರ ಕಂಗಾಲಾಗುವಂತೆ ಮಾಡಿದೆ.

ಮಂಗಳವಾರ ಬಿ ಸಿ ರೋಡಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಮುಂದೆ ಈ ದಿನ ಬ್ಯಾಂಕ್ ವ್ಯವಹಾರ 4 ಗಂಟೆವರೆಗೆ ಮಾತ್ರ ಎಂದು ನಾಮ ಫಲಕ ನೇತಾಡಿಸಿದ್ದರೆ, ಎಟಿಎಂ ಮುಂದೆ ತಾಂತ್ರಿಕ ದೋಷದಿಂದ ಎಟಿಎಂ ಸ್ಥಗಿತಗೊಂಡಿದೆ ಎಂಬ ನಾಮಫಲಕ ಅಂಟಿಸಲಾಗಿತ್ತು. ಇದರಿಂದ ಜನ ತೀವ್ರ ತೊಂದರೆ ಅನುಭವಿಸಿದ್ದಲ್ಲದೆ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಹಿಂತಿರುಗಿ ಹೋಗುತ್ತಿದ್ದ ದೃಶ್ಯ ಕಂಡುಬಂತು.

ಸಂಜೆ ಬಳಿಕ ಎಟಿಎಂ ಯಂತ್ರ ಮತ್ತೆ ಕಾರ್ಯನಿರ್ವಹಿಸಲು ಆರಂಭಿಸಿದರೂ ಅದರಲ್ಲಿ 2000 ನೋಟು ಮಾತ್ರ ತುಂಬಿಸಿದ ಪರಿಣಾಮ ಜನ ಇಲ್ಲೂ ತೊಂದರೆ ಅನುಭವಿಸುವಂತಾಯಿತು. ಇದು ಒಂದು ಬ್ಯಾಂಕಿನ ಸಮಸ್ಯೆಯಾದರೆ, ಇನ್ನುಳಿದಂತೆ ಇತರ ಬ್ಯಾಂಕುಗಳಲ್ಲೂ ಇದೇ ತೆರನಾದ ಸಮಸ್ಯೆ ನಿತ್ಯವೂ ಕಂಡು ಬರುತ್ತಿದೆ.