`ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ನೋಟು ಅಮಾನ್ಯ ಪರಿಣಾಮ ಬೀರದು’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನೋಟು ಅಮಾನ್ಯದಿಂದಾಗಿ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಹೊಡೆತ ಬೀಳಬಹುದು ಎಂದು ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ರಿಯಲ್ ಎಸ್ಟೇಟ್ ಡೆವಲಪ್ಪರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಹೇಳಿದೆ.

ಜನರಲ್ಲಿನ ಹಣ ಚಲಾವಣೆಯಲ್ಲಿ ಸಮಸ್ಯೆ, ಕಪ್ಪು ಹಣದ ಮೇಲಿನ ಹಿಡಿತದಿಂದಾಗಿ ರಿಯಲ್ ಎಸ್ಟೇಟ್ ಉದ್ಯಮ ನೆಲಕಚ್ಚಲಿದೆ ಎಂದೇ ಜನ ಅಭಿಪ್ರಾಯಪಟ್ಟಿದ್ದಾರೆ.

“ಆರ್ಥಿಕ ತಜ್ಞರು ಮತ್ತು ಮಾಧ್ಯಮಗಳು ಸಮೀಕ್ಷೆ ನಡೆಸಿರುವಂತೆ ಮೂಲಭೂತ ಸೌಕರ್ಯ ಜನತೆಗೆ ಅತೀ ಅಗತ್ಯವಾಗಿ ಬೇಕಾಗಿದ್ದು, ನೋಟು ಅಮಾನ್ಯತೆ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಪ್ರತೀಕೂಲ ಪರಿಣಾಮ ಬೀರುವ ಸಾಧ್ಯತೆಯೇ ಇಲ್ಲ. ಅದು ಬೀರಿದರೂ ತಾತ್ಕಾಲಿಕವಷ್ಟೇ” ಎಂದು ಕ್ರೆಡೈ ಸಂಸ್ಥೆಯ ಮಂಗಳೂರು ಅಧ್ಯಕ್ಷ ಡಿ ಬಿ ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ.

“ನೋಟು ಅಮಾನ್ಯದಿಂದ ಮನೆ ಹಾಗೂ ಅಪಾರ್ಟಮೆಂಟುಗಳ ಬೆಲೆ ಶೇ 30ರಷ್ಟು ಇಳಿಯುತ್ತದೆ ಮತ್ತು ಜಿಡಿಪಿ ದರ ಇಳಿಮುಖಗೊಂಡು ನಿರುದ್ಯೋಗ ಸೃಷ್ಟಿಯಾಗಲಿದೆ. ಜಮೀನು ಬೆಲೆ ಶೇ 50ರಷ್ಟು ಕುಸಿಯಲಿದೆ ಎನ್ನುವುದು” ಸುಳ್ಳು ಎಂದರು.

“ನೋಟು ಅಮಾನ್ಯ ತಾತ್ಕಾಲಿಕ ಪರಿಣಾಮ ಬೀರಬಹುದೇ ಹೊರತು ಶಾಶ್ವತವಾಗಿ ನಿಲ್ಲುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಕೆಲವರು ಇದನ್ನೇ ಮುಂದಿಟ್ಟುಕೊಂಡು ಜಮೀನು ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ಸುಳ್ಳು ಸುದ್ದಿ ಹಬ್ಬುತ್ತಿದ್ದಾರೆ. ಇದು ನಂಬುವ ಮಾತಲ್ಲ” ಎಂದರು.

“ಕಟ್ಟಡ ನಿರ್ಮಾಣ ಪರಿಕರಗಳಿಗೆ ಬೆಲೆ ಕಡಿಮೆಯಾಗಿಲ್ಲ. ಅದರ ಬೆಲೆ ಕಡಿಮೆಯಾಗದ ಹೊರತು ನಿವೇಶನದ ಬೆಲೆ ಇಳಿಕೆಯಾಗದು. ಮರಳಿನ ಅಭಾವದಿಂದಾಗಿ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದೆ. ಈ ವಾಸ್ತವವನ್ನು ಮರೆಮಾಚಲಾಗುತ್ತಿದೆ. ಗೃಹ ನಿರ್ಮಾಣ ಸಾಲಗಳಿಗೆ ಮುಂದಿನ ದಿನಗಳಲ್ಲಿ ಬಡ್ಡಿ ದರ ಕಡಿಮೆಯಾಗಬಹುದೇ ವಿನಾ ಜಮೀನಿನ ಬೆಲೆ ಕುಸಿಯದು” ಎಂದರು.