ನೊಟು ಅಮಾನ್ಯೀಕರಣದ ದುರಂತ

ನೋಟಿನ ಅಮಾನ್ಯೀಕರಣದ ನಂತರದ ಬೆಳವಣಿಗೆಯಲ್ಲಿ ಪ್ರಗತಿ ಪಥದಲ್ಲಿ ದಾಪುಗಾಲು ಹಾಕುತ್ತಿದ್ದ ಭಾರತದ ಆರ್ಥಿಕತೆ ಇಂದು ಸ್ಥಗಿತಗೊಂಡಿದೆ. ಮಾರಾಟದ ಪ್ರಮಾಣ, ವ್ಯಾಪಾರಿಗಳ ಆದಾಯ, ಉತ್ಪಾದನೆ ಮತ್ತು ಉದ್ಯೋಗ ಎಲ್ಲವೂ ಸಹ ಕುಸಿದಿವೆ.

  • ಶಶಿ ತರೂರು

ನವಂಬರ್ 8ರ ರಾತ್ರಿ ಭಾರತದ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಚಾಲ್ತಿಯಲ್ಲಿದ್ದ 500 ಮತ್ತು 1000 ರೂ ಮುಖಬೆಲೆಯ 14 ಲಕ್ಷ ಕೋಟಿ ರೂಗಳನ್ನು ನಿಷೇಧಿಸುವ ಮೂಲಕ ದೇಶದ ಆರ್ಥಿಕ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿದ್ದ ಶೇ 86ರಷ್ಟು ನಗದನ್ನು ರದ್ದುಪಡಿಸಿದ್ದರು. ಅಂದಿನಿಂದಲೇ ಭಾರತದ ಅರ್ಥವ್ಯವಸ್ಥೆ ಗೊಂದಲದ ಗೂಡಾಗಿದೆ. ತಮ್ಮ ಚುನಾವಣಾ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕಪ್ಪು ಹಣದ ವಿರುದ್ಧ ಸಮರ ಸಾರುವ ಮೋದಿಯ ಉದ್ದೇಶ ನಗದು ರೂಪದಲ್ಲಿರುವ, ತೆರಿಗೆ ವಂಚನೆ ಅಪರಾಧ ಮತ್ತು ಲಂಚಗುಳಿತನದ ರೂಪದಲ್ಲಿರುವ ಕಾಳಧನವನ್ನು ನಿರ್ವೀರ್ಯಗೊಳಿಸುವುದೇ ಆಗಿತ್ತು. ಭಾರತದ ವಿರುದ್ಧ ಭಯೋತ್ಪಾದನೆಯನ್ನು ಪ್ರಚೋದಿಸಲು ಪಾಕಿಸ್ತಾನ ಬಳಸುತ್ತಿದ್ದ ನಕಲಿ ನೋಟ್ ದಂಧೆಯನ್ನು ಮಟ್ಟ ಹಾಕುವುದೂ ಮೋದಿಯ ಉದ್ದೇಶವಾಗಿತ್ತು. ಆದರೆ ಅಮಾನ್ಯೀಕರಣದ ಒಂದು ತಿಂಗಳ ನಂತರ ದೇಶದಲ್ಲಿ ಅರ್ಥವ್ಯವಸ್ಥೆ ಪ್ರಕ್ಷುಬ್ಧವಾಗಿರುವುದನ್ನು ಹೊರತುಪಡಿಸಿದರೆ ಮತ್ತಾವ ಸಾಧನೆಯೂ ಕಂಡುಬಂದಿಲ್ಲ.

ಮೋದಿ ಸರ್ಕಾರ ಅಮಾನ್ಯೀಕರಣ ಘೋಷಿಸಿದ ಕೂಡಲೇ ಅಪ್ರಯೋಜಕ ನೋಟುಗಳನ್ನು ಜಮಾ ಮಾಡಲು ಬ್ಯಾಂಕು ಮತ್ತು ಅಂಚೆ ಕಚೇರಿಗಳಲ್ಲಿ ಜನ ಸಾಲುಗಟ್ಟಿ ನಿಲ್ಲಲಾರಂಭಿಸಿದರು. ನಿಷೇಧಿತ ನೋಟುಗಳನ್ನು ಜಮಾ ಮಾಡಲು ಡಿಸೆಂಬರ್ 30ರವರೆಗೂ ಸಮಯಾವಕಾಶ ಇದ್ದರೂ ಜನರು ತೆರಿಗೆಯ ಭೀತಿಯಿಂದ  ಖರೀದಿಯ ಭರಾಟೆಯಲ್ಲಿ ತೊಡಗಿದರು. ಇನ್ನುಳಿದವರು ಸಾಲ ತೀರಿಸಲಾರಂಭಿಸಿದರು. ನೋಟು ವಿನಿಮಯ ಮತ್ತು ಜಮಾ ಮಾಡಲು ಬ್ಯಾಂಕುಗಳ ಮುಂದೆ ಸರ್ಪದಂತಹ ಸಾಲುಗಳು ಕಂಡುಬಂದವು. ತಮ್ಮ ಬಳಿ ಇದ್ದ ಹಣವನ್ನು ಬ್ಯಾಂಕಿಗೆ ಜಮಾ ಮಾಡಿ ಮರಳಿ ಹಣ ಪಡೆಯುಲು ಜನರು ಪರದಾಡಬೇಕಾಯಿತು. ನಿಷೇಧಿತ ನೋಟುಗಳ ಪ್ರಮಾಣಕ್ಕೆ ಅನುಗುಣವಾಗಿ  ಹೊಸ ನೋಟುಗಳ ಮುದ್ರಣ ಮಾಡದ ಕಾರಣ ಜನಸಾಮಾನ್ಯರಿಗೆ ಬ್ಯಾಂಕುಗಳಿಂದ ಹಣ ಪಡೆಯಲು ನಿಗದಿತ ಮೊತ್ತ ಸೂಚಿಸಲಾಯಿತು. ಅಷ್ಟೇ ಅಲ್ಲದೆ ಹೊಸ 2000 ರೂ ನೋಟುಗಳನ್ನು ಅಳವಡಿಸಲು ಎಟಿಎಂಗಳಿಗೆ ಇನ್ನೂ ಸಂಪೂರ್ಣ ಸಾಧ್ಯವಾಗಿಲ್ಲ. ಸಣ್ಣ ಮುಖಬೆಲೆಯ ನೋಟುಗಳ ಸರಬರಾಜು ಕುಂಠಿತವಾದದ್ದರಿಂದ  ಅರ್ಥವ್ಯವಸ್ಥೆಯಲ್ಲಿ ಚಿಲ್ಲರೆ ಅಭಾವ ತಲೆದೋರಿತು.

ನೋಟಿನ ಅಮಾನ್ಯೀಕರಣದ ನಂತರದ ಬೆಳವಣಿಗೆಯಲ್ಲಿ ಪ್ರಗತಿ ಪಥದಲ್ಲಿ ದಾಪುಗಾಲು ಹಾಕುತ್ತಿದ್ದ ಭಾರತದ ಆರ್ಥಿಕತೆ ಇಂದು ಸ್ಥಗಿತಗೊಂಡಿದೆ. ಮಾರಾಟದ ಪ್ರಮಾಣ, ವ್ಯಾಪಾರಿಗಳ ಆದಾಯ, ಉತ್ಪಾದನೆ ಮತ್ತು ಉದ್ಯೋಗ ಎಲ್ಲವೂ ಸಹ ಕುಸಿದಿವೆ.  ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದಂತೆ ಭಾರತದ ಜಿಡಿಪಿ ಶೇ 2ರಷ್ಟು ಕುಸಿಯಲಿದೆ. ಆದರೆ ಈ ಆರ್ಥಿಕ ದುಷ್ಪರಿಣಾಮ ಎಲ್ಲರನ್ನೂ ಒಂದೇ ರೀತಿಯಲ್ಲಿ ಭಾಧಿಸಿಲ್ಲ. ನಗದು ವಹಿವಾಟನ್ನು ನಡೆಸದ ಭಾರತದ ಶ್ರೀಮಂತ ವರ್ಗ ಯಾವುದೇ ರೀತಿಯಲ್ಲೂ ಭಾಧಿತರಾಗಿಲ್ಲ. ಬಡ ಜನತೆ ಮತ್ತು ಕೆಳ ಮಧ್ಯಮ ವರ್ಗಗಳ ಜನತೆ ತಮ್ಮ ನಿತ್ಯ ಜೀವನ ನಿರ್ವಹಣೆಗಾಗಿ ಹಣ ಇಲ್ಲದೆ ಪರದಾಡುವಂತಾಗಿದೆ. ಬಡ ಜನತೆಯನ್ನು ರಕ್ಷಿಸುವ ಮೋದಿಯ ಅಮಾನ್ಯೀಕರಣ ನೀತಿಯಿಂದ ಬಡಜನತೆಯೇ ಪರದಾಡುವಂತಾಗಿದೆ.

ತಮ್ಮ ವ್ಯಾಪಾರ ವಹಿವಾಟು ನಡೆಸಲು ಅಗತ್ಯವಾದ ಬಂಡವಾಳ ಮತ್ತು ಹಣ ಇಲ್ಲದೆ ಸಣ್ಣ ಪ್ರಮಾಣದ ಉತ್ಪಾದಕರು ತಮ್ಮ ಘಟಕಗಳಿಗೆ ಬೀಗ ಜಡಿಯುತ್ತಿದ್ದಾರೆ. ಸ್ಥಳೀಯ ಕೈಗಾರಿಕೆಗಳು ಹಣ ಇಲ್ಲದ ಕಾರಣ ಬಾಗಿಲು ಮುಚ್ಚಿವೆ. ಭಾರತದ ಆರ್ಥಿಕತೆಯ ಶೇ 40ರಷ್ಟು ವಹಿವಾಟು ಹೊಂದಿರುವ ಅನೌಪಚಾರಿಕ ಕ್ಷೇತ್ರ ಬಹುತೇಕ ಸ್ಥಗಿತಗೊಂಡಿದೆ. ಮೀನುಗಾರಿಕೆ ಕ್ಷೇತ್ರದಲ್ಲಿ ನಿತ್ಯ ಹಣದ ವಹಿವಾಟು ಇರುವುದಿರಿಂದ ಇಡೀ ಉದ್ಯಮವೇ ಸಂಕಷ್ಟಕ್ಕೊಳಗಾಗಿದೆ. ವ್ಯಾಪಾರಿಗಳು ತಮ್ಮ ದಾಸ್ತಾನುಗಳನ್ನು ಸಂರಕ್ಷಿಸಲು ಹೆಣಗಾಡುವಂತಾಗಿದೆ. ರೈತರು ತಮ್ಮ ಉತ್ಪನ್ನಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಬೀಜ ಖರೀದಿಸಲು ಹಣ ಇಲ್ಲದ ಕಾರಣ ಚಳಿಗಾಲದ ಬಿತ್ತನೆ ಕಾರ್ಯವೂ ಸಹ ವಿಳಂಬವಾಗಲಿದೆ.

ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಭಾರತದ ಪ್ರಜೆಗಳು ಸಹನೆಯಿಂದಿದ್ದಾರೆ. ಹಣದ ವಹಿವಾಟು ಸಹಜ ಸ್ಥಿತಿಗೆ ಬರಲು ಕನಿಷ್ಠ ಎಂಟು ತಿಂಗಳಾದರೂ ಬೇಕಾಗುತ್ತದೆ ಎಂದು ಅರ್ಥಿಕ ತಜ್ಞರು ಹೇಳುತ್ತಿದ್ದಾರೆ.

ಯೋಧರು ಗಡಿಯಲ್ಲಿ ತಮ್ಮ ಜೀವ ಪಣ ಇಟ್ಟು ಹೋರಾಡುತ್ತಿರುವಾಗ ದೇಶದ ರಕ್ಷಣೆಗಾಗಿ ಕೊಂಚ ಕಾಲ ಕ್ಯೂ ನಿಲ್ಲುವುದು ಕಷ್ಟವೇನಲ್ಲ ಎಂಬ ಬಾಲಿಶ ಅಭಿಪ್ರಾಯಕ್ಕೆ ಬಹುಶಃ ಜನತೆ ಬಲಿಯಾಗಿದ್ದಾರೆ. ಆದರೆ ಜನಸಾಮಾನ್ಯರು ಮಾಡಬೇಕಾದ ಈ ಸಣ್ಣ ತ್ಯಾಗ ಮಿತಿ ಮೀರುತ್ತಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗದೆ ಅನೇಕ ಜನ ಸಾವನ್ನಪ್ಪಿದ್ದಾರೆ. ಮಧ್ಯಮವರ್ಗದ ದುಡಿಯುವ ವರ್ಗಗಳು ತಮ್ಮ ನಿತ್ಯ ಜೀವನ ನಡೆಸಲು ಪರದಾಡಬೇಕಿದೆ. ಬ್ಯಾಂಕುಗಳಲ್ಲಿ ಹಣ ಪಡೆಯಲು ಕ್ಯೂ ನಿಂತ 82 ಮಂದಿ ಮೃತಪಟ್ಟಿದ್ದಾರೆ. ಆದರೆ ಈ ಎಲ್ಲ ತ್ಯಾಗ ಬಲಿದಾನಗಳು ಫಲಕಾರಿಯಾಗುವುದಿಲ್ಲ. ಏಕೆಂದರೆ ಸರ್ಕಾರ ಭಾವಿಸಿದಂತೆ ಕಪ್ಪುಹಣದ ವಾರಸುದಾರರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ಮೂಲತಃ ಅಮಾನ್ಯೀಕರಣ ನೀತಿಯ ರೂಪುರೇಷೆಗಳಲ್ಲೇ ದೋóಷ ಇರುವುದು ಸ್ಪಷ್ಟವಾಗುತ್ತಿದೆ. ಇದರಿಂದಾಗುವ ಪರಿಣಾಮವನ್ನು ಸಮರ್ಥವಾಗಿ ಗ್ರಹಿಸದೆ ಇರುವುದರಿಂದಲೇ ಸರ್ಕಾರ ಪ್ರಸ್ತುತ ಸನ್ನಿವೇಶವನ್ನು ನಿಭಾಯಿಸಲು ಹರಸಾಹಸ ಮಾಡುತ್ತಿದೆ. ಶೇ 90ರಷ್ಟು ನಗದು ವಹಿವಾಟು ನಡೆಯುವ ದೇಶವನ್ನು ನಗದುರಹಿತ ಆರ್ಥಿಕತೆಯನ್ನಾಗಿ ಮಾಡಲು ಹೊರಟಿರುವ ಮೋದಿಯ ನಿರ್ಧಾರ ದುರಂತವಲ್ಲದೆ ಮತ್ತೇನು ?