ನಾಗರಿಕ ಹಕ್ಕು ಕಾರ್ಯಕರ್ತರಿಗೆ ಮಾರಕವಾದ ಅಮಾನ್ಯೀಕರಣ

ಸ್ವೀಡನ್ನಿನಲ್ಲಿ ಸರ್ಕಾರದ ವಿಶ್ವಾಸಾರ್ಹತೆ ಹೆಚ್ಚಾಗಿರುವುದರಿಂದ  ಅಲ್ಲಿ ನಗದು ವಹಿವಾಟು ಕೇವಲ ಶೇ 2ರಷ್ಟಿದೆ. ಆದರೆ  ಈ ವಿಶ್ವಾಸಾರ್ಹತೆಯ ಕೊರತೆಯಿಂದಲೇ ಜರ್ಮನಿಯಲ್ಲಿ ಶೇ 80ರಷ್ಟು ವಹಿವಾಟು ನಗದು ರೂಪದಲ್ಲಿ ನಡೆಯುತ್ತದೆ

  • ಸಲಿಲ್ ತ್ರಿಪಾಠಿ

ನೋಟು ಅಮಾನ್ಯೀಕರಣ ಘೋಷಿಸಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಕ್ರಮವನ್ನು ಕಪ್ಪುಹಣದ ವಿರುದ್ಧ ಸಾರಿರುವ ಸಮರ ಎಂದು ಹೇಳಿದ್ದರು.  ಹಳೆಯ ನೋಟುಗಳನ್ನು ರದ್ದುಪಡಿಸಿ ಹೊಸ ನೋಟುಗಳನ್ನು ಚಾಲ್ತಿಗೆ ತರುವ ಮೂಲಕ ಪಾಕಿಸ್ತಾನದಲ್ಲಿ ಮುದ್ರಣವಾಗುತ್ತಿರುವ ಕೋಟ್ಯಂತರ ರೂ ಖೋಟಾ ನೋಟುಗಳಿಗೆ ಕಡಿವಾಣ ಬೀಳುತ್ತದೆ, ಭಯೋತ್ಪಾದನೆಗೆ ಸರಬರಾಜಾಗುವ ಹಣ ಸ್ಥಗಿತವಾಗುತ್ತದೆ ಎಂದು ಹೇಳಿದ್ದರು. ಆದರೆ ದಿನ ಕಳೆದಂತೆ ಸರ್ಕಾರದ ನಿಯಮಗಳೂ ಬದಲಾಗುತ್ತಿವೆ. ಜನಸಾಮಾನ್ಯರ ಸಂಕಷ್ಟಗಳೂ ಹೆಚ್ಚಾಗುತ್ತಿವೆ. ದೇಶದ ಕರೆನ್ಸಿಯ ವಿಶ್ವಾಸಾರ್ಹತೆಯೇ ಕುಸಿಯುತ್ತಿರುವಂತಿದೆ.

ಇಂದು ಯಾವುದೇ ವ್ಯಕ್ತಿ ತನ್ನ ಬಳಿ ಇರುವ ನೋಟನ್ನು ಬ್ಯಾಂಕಿನಲ್ಲಿ ಬದಲಿಸಲು ಸಾಧ್ಯವಿಲ್ಲ. ಬ್ಯಾಂಕಿನ ಶಾಖೆಗಳಲ್ಲಿ ಹಣವೇ ಇಲ್ಲ. ಏತನ್ಮಧ್ಯೆ ಅಧಿಕಾರಸ್ಥರು ಹಲವಾರು ನಿಯಮಗಳನ್ನು ರೂಪಿಸುತ್ತಾರೆ. ರೂಪಾಯಿಯನ್ನು ಕೆಲವು ಸಂದರ್ಭಗಳಲ್ಲಿ, ಕೆಲವು ಸ್ಥಳಗಳಲ್ಲಿ, ಕೆಲವು ಮೊತ್ತಗಳಿಗೆ ಸೀಮಿತವಾಗಿ, ಕೆಲವು ಸನ್ನಿವೇಶಗಳಲ್ಲಿ, ಕೆಲವು ಸಾಕ್ಷಿ ಪುರಾವೆ ನೀಡುವ ಮೂಲಕ ಖರ್ಚು ಮಾಡಬಹುದು. ಸಕ್ರಮವಾಗಿ ಸಂಪಾದಿಸಿದ ಹಣಕ್ಕೂ ತೆರಿಗೆ ಬೀಳುತ್ತದೆ. ಇವೇ ಮುಂತಾದ ನಿಯಮಗಳು ಹಲವಾರು ಬದಲಾವಣೆಗಳೊಂದಿಗೆ ಪ್ರಕಟವಾಗುತ್ತಿರುವುದನ್ನು ನೋಡಿದರೆ ಸರ್ಕಾರ ತನ್ನ ಯೋಜನೆಯನ್ನು ಜಾರಿಗೊಳಿಸಲು ಪೂರ್ವಸಿದ್ಧತೆ ಮಾಡಿಕೊಂಡಿಲ್ಲ ಎಂದೇ ಅರಿವಾಗುತ್ತದೆ.

ಈಗ ಸರ್ಕಾರ ಸ್ಪಷ್ಟ ಪರಿಹಾರ ನೀಡುತ್ತಿದೆ. ಹಣವಿಲ್ಲದೆ ವಹಿವಾಟು ನಡೆಸಿ ಎಂದು ಆದೇಶಿಸುತ್ತಿದೆ. ಭವಿಷ್ಯದ ದಿನಗಳು ಡಿಜಿಟಲ್ ಆಗುತ್ತದೆ. ಅಂದರೆ ನಿಮ್ಮ ನಗದು ವಹಿವಾಟುಗಳನ್ನು ರಹಸ್ಯವಾಗಿ ಗಮನಿಸಲಾಗುತ್ತದೆ.  ನಗದುರಹಿತ ವಹಿವಾಟು ಯಶಸ್ವಿಯಾಗಬೇಕಾದರೆ ತಂತ್ರಜ್ಞಾನ ಸುರಕ್ಷಿತವಾಗಿರಬೇಕು, ದೂರಸಂಪರ್ಕ ಸಾಧನಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು, ಸ್ಮಾರ್ಟ್ ಫೋನ್ ಅಗ್ಗದ ದರದಲ್ಲಿ ದೊರೆಯುವಂತಾಗಬೇಕು, ವಹಿವಾಟಿನ ವೆಚ್ಚ ಕಡಿಮೆಯಾಗಬೇಕು, ಗ್ರಾಹಕರು ಸ್ವಇಚ್ಚೆಯಿಂದ ವಹಿವಾಟು ನಡೆಸಬೇಕು, ತಮ್ಮ ಪಾಸ್ ವರ್ಡ್‍ಗಳನ್ನು ಬದಲಿಸುತ್ತಿರಬೇಕು ಮತ್ತು ನೆನಪಿನಲ್ಲಿಟ್ಟುಕೊಂಡಿರಬೇಕು. ಇದೆಲ್ಲವನ್ನೂ ಸಾಧಿಸಲು ಕಾರ್ಯಕ್ಷೇತ್ರದ ಸಾಕ್ಷರತೆ ಅತ್ಯಗತ್ಯ ಮತ್ತು ತಂತ್ರಜ್ಞಾನ ಪ್ರೇರಿತ ವ್ಯವಸ್ಥೆಯಲ್ಲಿ ವಿಶ್ವಾಸ ಇರುವುದು ಮುಖ್ಯ. ಇಲ್ಲಿ ವರ್ಗ ತಾರತಮ್ಯ ಎದ್ದು ಕಾಣುತ್ತದೆ. ಭಾರತದ ಪ್ರಸ್ತುತ ಸಂದರ್ಭದಲ್ಲಿ ಈ ನಿಟ್ಟಿನಲ್ಲಿ ಕೊರತೆ ಎದುರಿಸುತ್ತಿರುವುದೂ ನಿಜ.

ನಗದುರಹಿತ ವಹಿವಾಟು ಗ್ರಾಹಕರಿಗೆ ಒಳಿತಾದುದೇ. ಆದರೆ ಎಲ್ಲ ವಹಿವಾಟುಗಳೂ ಬ್ಯಾಂಕ್ ಮೂಲಕವೇ ನಡೆದಾಗ ಸರ್ಕಾರಕ್ಕೆ ಅಪಾರ ಪ್ರಮಾಣದ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ಸರ್ಕಾರದ ನಿಗ್ರಹ ಹೆಚ್ಚಾಗುತ್ತದೆ. ಸರ್ಕಾರದ ಗಮನಕ್ಕೆ ಬಾರದೆ ಯಾವುದೇ ವ್ಯವಹಾರ ಮಾಡುವಂತಿಲ್ಲ ಎಂದು ಹೇಳುವ ಮೂಲಕ ಜನಸಾಮಾನ್ಯರು ಕಳುಹಿಸುವ ಪ್ರತಿಯೊಂದು ಮೇಲ್, ಡೌನ್ಲೋಡ್ ಮಾಡುವ ಪ್ರತಿಯೊಂದ ಕಡತ, ಮೊಬೈಲಿನಲ್ಲಿ ಮಾತನಾಡುವ ಪ್ರತಿಯೊಂದು ವಾಕ್ಯವನ್ನೂ ಸರ್ಕಾರ ತಿಳಿದುಕೊಳ್ಳುವ ಹಕ್ಕು ಹೊಂದಿರುತ್ತದೆ. ಸರ್ಕಾರ ಪ್ರತಿಯೊಬ್ಬ ಪ್ರಜೆಯನ್ನೂ ಅಪರಾಧಿ ಸ್ಥಾನದಲ್ಲೇ ನೋಡುತ್ತದೆ. ತಾನು ನಿರಪರಾಧಿ ಎಂದು ನಿರೂಪಿಸುವುದು ಜನರ ಕರ್ತವ್ಯವಾಗುತ್ತದೆ. ಇದು ಸಂವಿಧಾನ ಮಾನ್ಯ ಮಾಡುವ ಸಾಮಾಜಿಕ ನ್ಯಾಯಕ್ಕೆ ತದ್ವಿರುದ್ಧವಾದ ನಿಯಮ ಎನ್ನುವುದನ್ನು ಮರೆಯುವಂತಿಲ್ಲ.

ಆಧಾರ್ ಕಾರ್ಡ್ ಮತ್ತು ಸ್ಮಾರ್ಟ್ ಫೋನುಗಳನ್ನು ಬ್ಯಾಂಕಿಂಗ್ ಆಪ್ ತತ್ರಾಂಶಕ್ಕೆ ಲಿಂಕ್ ಮಾಡುವುದನ್ನು ಡಿಜಿಟಲೀಕರಣದ ಪ್ರತಿಪಾದಕರು ಸ್ವಾಗತಿಸಬಹುದು. ಆದರೆ ನಾಗರಿಕ ಹಕ್ಕುಗಳ ಕಾರ್ಯಕರ್ತರಿಗೆ ಇದು ಮಾರಕವಾಗಿ ಪರಿಣಮಿಸುತ್ತದೆ. ಯಾವುದೇ ತಂತ್ರಜ್ಞಾನದ ಬಳಕೆಗೆ ಬಳಕೆದಾರರ ಪೂರ್ವ ಸಮ್ಮತಿ ಅಗತ್ಯ ನಿಜ. ಆದರೆ ಭಾರತದ ಆಡಳಿತ ವ್ಯವಸ್ಥೆಯ ಇತಿಹಾಸವನ್ನು ನೋಡಿದರೆ ಇದು ಎಷ್ಟರಮಟ್ಟಿಗೆ ವಿಶ್ವಾಸಾರ್ಹ ಎಂಬ ಅನುಮಾನ ಮೂಡುತ್ತದೆ.

ತಮ್ಮ ಅನುಕೂಲಗಳಿಗಾಗಿ ತಮ್ಮ ಖಾಸಗಿ ವಿಷಯಗಳನ್ನು ಬಿಟ್ಟುಕೊಡಲು ಕೆಲವರು ಸಿದ್ಧರಾಗಿರಬಹುದು. ಬ್ಯಾಂಕುಗಳು ಹೆಚ್ಚು ದಕ್ಷತೆಯಿಂದ ಕಾರ್ಯ ನಿರ್ವಹಿಸಲು ನಗದುರಹಿತ ವಹಿವಾಟು ನೆರವಾಗಬಹುದು.  ಆದರೆ ಇದರಿಂದ ಪ್ರಭುತ್ವದ ನಿಯಂತ್ರಣ ಹೆಚ್ಚಾಗುವುದೇ ಅಲ್ಲದೆ ನಾಗರಿಕ ಹಕ್ಕುಗಳಿಗೆ ಸಂಚಕಾರ ಒದಗುತ್ತದೆ ಎನ್ನುವುದೂ ಅಷ್ಟೇ ಸತ್ಯ. ಇತರ ದೇಶಗಳಲ್ಲಿ ನಗದುರಹಿತ ವಹಿವಾಟು ಜಾರಿಯಾಗುವ ಮುನ್ನ ಆ ದೇಶದ ಆಡಳಿತ ವ್ಯವಸ್ಥೆ ವ್ಯಕ್ತಿಗತ ಸ್ವಾತಂತ್ರ್ಯ ಮತ್ತು ಗೋಪ್ಯತೆಗೆ ಹೆಚ್ಚು ಮಾನ್ಯತೆ ನೀಡಿ ರಕ್ಷಣಾ ಗೋಡೆಗಳನ್ನು ನಿರ್ಮಿಸಿವೆ. ಆಡಳಿತ ವ್ಯವಸ್ಥೆಯ ಬಗ್ಗೆ ಜನಸಾಮಾನ್ಯರು ವಿಶ್ವಾಸ ಹೊಂದಿರುವುದನ್ನು ಖಚಿತಪಡಿಸಲಾಗಿದೆ. ಇದು ಅತ್ಯಗತ್ಯವೂ ಹೌದು. ಸ್ವೀಡನ್ನಿನಲ್ಲಿ ಸರ್ಕಾರದ ವಿಶ್ವಾಸಾರ್ಹತೆ ಹೆಚ್ಚಾಗಿರುವುದರಿಂದ  ಅಲ್ಲಿ ನಗದು ವಹಿವಾಟು ಕೇವಲ ಶೇ 2ರಷ್ಟಿದೆ. ಆದರೆ  ಈ ವಿಶ್ವಾಸಾರ್ಹತೆಯ ಕೊರತೆಯಿಂದಲೇ ಜರ್ಮನಿಯಲ್ಲಿ ಶೇ 80ರಷ್ಟು ವಹಿವಾಟು ನಗದು ರೂಪದಲ್ಲಿ ನಡೆಯುತ್ತದೆ.  ಆದರೆ ಭಾರತದಲ್ಲಿ ಈ ಸನ್ನಿವೇಶ ಕಾಣುತ್ತಿಲ್ಲ. ಇದು ಅಪಾಯಕಾರಿ ಸಂಗತಿ ಅಲ್ಲವೇ ? ಅಧಿಕಾರದಲ್ಲಿರುವ ಪಕ್ಷ ಯಾವುದೇ ಇರಲಿ ಭಾರತದ ಆಡಳಿತ ವ್ಯವಸ್ಥೆ ಈ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆಯೇ ? ಇದು ನಮ್ಮನ್ನು ಕಾಡಬೇಕಾದ ಪ್ರಶ್ನೆ. (ಆಧಾರ :  ಲಿವ್ ಮಿಂಟ್)