ನೋಟು ಅಮಾನ್ಯದಿಂದ ಗ್ರಾಮಾಂತರ ಸಹಕಾರ ಸಂಘ ಕಾರ್ಯಾಚರಣೆಗೆ ಆತಂಕ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಇತ್ತೀಚೆಗೆ ಕರೆನ್ಸಿ ನೋಟು ನಿಷೇಧಿಸಲ್ಪಟ್ಟದ್ದರಿಂದ ಗ್ರಾಮೀಣ ಜನರು ಕರೆನ್ಸಿ ಬದಲಿಸಲು ಸಹಕಾರ ಸಂಘಗಳಿಗೆ ಬರುತ್ತಿದ್ದಾರೆ. ಸಂಘಗಳು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿದ್ದರೂ ಆರ್‍ಬಿಐನಲ್ಲಿ ನೋಂದಾಯಿಸಿಕೊಳ್ಳದ್ದರಿಂದ ಬ್ಯಾಂಕಿಂಗ್ ವ್ಯವಹಾರ ಅಸಾಧ್ಯವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಹಲವು ಸಮಸ್ಯೆ ಉದ್ಭವಿಸಿವೆ ಎಂದು ಉಭಯ ಜಿಲ್ಲೆಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಸಭೆ ಹೇಳಿದೆ.

ದ ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಬ್ಯಾಂಕಿನ ಕಚೇರಿಯಲ್ಲಿ ಉಭಯ ಜಿಲ್ಲೆಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಸಭೆ ನಡೆದಿದ್ದು, ಸಭೆಯಲ್ಲಿ ಪ್ರಸಕ್ತ ಅಗತ್ಯಗಳಿಗೆ ತಕ್ಕಂತೆ ಕೆಲವು ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.

ಈ ಸಹಕಾರ ಸಂಘಗಳು ರೈತ ಸದಸ್ಯರಿಗೆ ರಾಜ್ಯ ಸರ್ಕಾರದ ರಿಯಾಯತಿ ಬಡ್ಡಿಯ ಸಾಲ ವಿತರಣೆ, ಅನ್ನಭಾಗ್ಯ ಪಡಿತರ ವಿತರಣಾ ಕಾರ್ಯ ಮಾಡುತ್ತಿದ್ದು, ಯೋಜನೆಗಳ ಅನುಷ್ಠಾನಗಳಲ್ಲಿ ಹಲವು ರೀತಿಯಲ್ಲಿ ಆರ್ಥಿಕ ನಷ್ಟವಾಗುತ್ತಿದ್ದರೂ ಎಲ್ಲ ನಷ್ಟ ಸರಿದೂಗಿಸಿ ಸೇವಾ ಮನೋಭಾವದಿಂದ ಕಾರ್ಯಾಚರಿಸುತ್ತಿವೆ. ರೈತ ಸದಸ್ಯರ ಕೃಷಿ ಸಾಲ ಮರುಪಾವತಿ ವಾಯ್ದೆಯ ದಿನಗಳಲ್ಲಿ ಸಾಲ ಮರುಪಾವತಿಸಲು ಕಷ್ಟವಾಗಿದ್ದು, ರಿಯಾಯತಿ ಬಡ್ಡಿ ದರದ ಪ್ರಯೋಜನ ಸಿಗುತ್ತಿಲ್ಲ. ಸಹಕಾರ ಸಂಘಗಳಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಮಾಡಿ ಸಾಲದ ಖಾತೆಗೆ ಹಣ ಜಮಾವಣೆ ಅಸಾಧ್ಯವಾಗಿದೆ ಎಂದು ಸಭೆ ನಿರ್ಣಯವೊಂದರಲ್ಲಿ ಹೇಳಿದೆ.

“ಸಹಕಾರ ಸಂಘಗಳ ಗಂಭೀರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ, ಕೇಂದ್ರ ಮತ್ತು ಆರ್‍ಬಿಐಯೊಂದಿಗೆ ವ್ಯವಹರಿಸಿ ಗ್ರಾಮೀಣ ಭಾಗದ ರೈತರ ಆರ್ಥಿಕ ಚಟುವಟಿಕೆ ಮತ್ತೆ ಸಹಜ ರೀತಿಯಲ್ಲಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ನೀಡುತ್ತಿರುವ ಬಡ್ಡಿ ಸಹಾಯಧನ ಪ್ರತಿ ತ್ರೈಮಾಸಿಕದ ಬಡ್ಡಿ ಬಿಲ್ ಸಲ್ಲಿಕೆಯಾದ ತಕ್ಷಣ ಬಿಡುಗಡೆ ಮಾಡಿದಲ್ಲಿ ಸಂಘಗಳ ನಷ್ಟ ಕಡಿಮೆಗೊಳಿಸಲು ಸಾಧ್ಯವಿದೆ. ಅಂತೆಯೇ ಪಡಿತರ ಅಂಗಡಿಗಳಲ್ಲಿನ ನಷ್ಟ ಸರಿದೂಗಿಸಲು ಸರ್ಕಾರ ಮುಂದಾಗಬೇಕು” ಎಂದು ಸಭೆಯಲ್ಲಿ ವಿನಂತಿಸಲಾಯಿತು.