ನೋಟು ಅಮಾನ್ಯದಿಂದ ಬಡವರು ಕಷ್ಟಪಟ್ಟರೇ ಹೊರತು ಕಾಳಧನಿಕರಲ್ಲ

ಒಂದು ಸಾವಿರ ರೂಪಾಯಿ ಮತ್ತು ಐದು ನೂರು ರೂಪಾಯಿ ಮುಖಬೆಲೆ ನೋಟುಗಳನ್ನು ಕೇಂದ್ರ ಸರಕಾರ ರದ್ದು ಮಾಡಿದ ನಂತರ ದೇಶದಲ್ಲಿ ಒಂದು ರೀತಿಯ ಕೋಲಾಹಲವೇ ಉಂಟಾಗಿದೆ. ಪೂರ್ವ ತಯಾರಿ ಇಲ್ಲದ ಈ ಕ್ರಮವನ್ನು ವಿರೋಧ ಪಕ್ಷಗಳು ಪ್ರಬಲವಾಗಿ ವಿರೋಧಿಸುತ್ತಿದೆ. ಆಕ್ರೋಶ್ ದಿವಸವನ್ನು ಆಚರಿಸಿ ನೋಟು ಅಮಾನ್ಯ ವಿರುದ್ಧ ಕಿಡಿಕಾರಿವೆ.

ಹೆಚ್ಚು ಮುಖಬೆಲೆ ನೋಟುಗಳನ್ನು ರದ್ದು ಮಾಡಿದ ಕ್ರಮವನ್ನು ಕೇಳಿದಾಗ ನನ್ನಲ್ಲಿ ಯಾವ ಪ್ರತಿಕ್ರಿಯೆಯೂ ಇರಲಿಲ್ಲ. ಏಕೆಂದರೆ ನನ್ನ ಬಳಿ ಕಪ್ಪು/ಬಿಳಿ ಅಂತ ಯಾವ ಹಣವೂ ಇರಲಿಲ್ಲ ಆದರೆ, ದೇಶದ ಭವಿಷ್ಯದ ದೃಷ್ಟಿಯಿಂದ ಜನಪರವಾದ ಕ್ರಮಗಳನ್ನು ಕೈಗೊಳ್ಳಬೇಕಾದದ್ದು ಸರಕಾರದ ಕರ್ತವ್ಯವೆಂದು ನನ್ನ ಸಾಮಾನ್ಯ ತಿಳುವಳಿಕೆಯಿಂದ ಎಣಿಸಿ ಸುಮ್ಮನಾಗಿದ್ದೆ.

ಕೆಲಸದ ಒತ್ತಡದ ನಡುವೆಯೂ ಆರು ತಿಂಗಳಿಗೊಮ್ಮೆಯೂ ಬ್ಯಾಂಕಿಗೆ ಹೋಗದ ನಾನು ಆಕ್ರೋಶ್ ದಿವಸವೇ ನನ್ನ ಖಾತೆಯಲ್ಲಿದ್ದ ಹಣವನ್ನು ಪಡೆಯಲು ಬ್ಯಾಂಕಿಗೆ ತೆರಳಿದೆ. ನನಗಿಂತ ಮುಂಚಿತವಾಗಿ ಹತ್ತಾರು ಮಂದಿ ಸಾಲಿನಲ್ಲಿ ನಿಂತಿದ್ದರು. ಆ ಸಾಲಿನಲ್ಲಿ ಬೆಳಗಿನ ಬಿಸಿಲಿನಲ್ಲಿಯೇ ವೃದ್ಧಾಪ್ಯ ವೇತನ ಪಡೆಯಲು ಹಿರಿಯರು, ಅಂಗವಿಕಲರ ವೇತನ ಪಡೆಯಲು ವಿಶೇಷÀ ಚೇತನರು ನಿಂತಿದ್ದು ಮರುಕ ತರಿಸಿತು.

ಅಲ್ಲಿ ನಮ್ಮೂರಿನ ಯಾವ ಜನಪ್ರತಿನಿಧಿಯಾಗಲಿ, ಹತ್ತಾರು ಎಕರೆ ಜಮೀನು ಹೊಂದಿರುವವರಾಗಲಿ ಕಾಣಸಿಗಲಿಲ್ಲ. ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯ ಕ್ರಮದಿಂದ ಬಡವರಿಗೆ ಕಷ್ಟವಾಗಲಿದೆಯಾದರೂ ಸ್ವಲ್ಪ ದಿನಗಳು ಸಹಿಸಿಕೊಳ್ಳುವಂತೆ ಹೇಳಿದ್ದಾರೆ. ಅದನ್ನು ಬಡ ಜನರು ಸಹಿಸಿಕೊಳ್ಳುತ್ತಾರೆ. ನಂತರ ಸರಕಾರ ನೀಡುವ ಹೊಸ ನೋಟುಗಳನ್ನು ಪಡೆದು ಜೀವನ ನಡೆಸುತ್ತಾರೆ. ಆದರೆ, ಈ ಕ್ರಮದಿಂದ ಯಾವ ಕೋಟ್ಯಧೀಶರಿಗೂ, ಕಾಳಧನಿಕರಿಗೂ ತೊಂದರೆಯಾಗುತ್ತದೆ ಅನ್ನಿಸುವುದಿಲ್ಲ.

  • ಗಣೇಶ್ ಪ್ರಸಾದ್, ಬನ್ನಂಜೆ ರಸ್ತೆ-ಉಡುಪಿ