ನೋಟು ಅಮಾನ್ಯೀಕರಣ ಅನೈತಿಕ ಕ್ರಮ

ಆದರೆ ಭಾರತ ಸರ್ಕಾರ ತನ್ನ ಪ್ರಜಾತಾಂತ್ರಿಕ ಮೌಲ್ಯಗಳೆಲ್ಲವನ್ನೂ ಗಾಳಿಗೆ ತೂರಿ ಜನಸಾಮಾನ್ಯರ ಖಾಸಗಿ ಆಸ್ತಿಯನ್ನು ಲೂಟಿ ಮಾಡಿರುವುದೇ ಅಲ್ಲದೆ ಯಾವುದೇ ನಿರ್ದಿಷ್ಟ ನಿಯಮಗಳನ್ನು ಪಾಲಿಸದೆ ವಂಚನೆ ಮಾಡಿದೆ.

  • ಸ್ಟೀವ್ ಫೋಬ್ರ್ಸ್

ನವಂಬರ್ 8ರಂದು ಭಾರತ ಸರ್ಕಾರ 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಹಠಾತ್ತನೆ ರದ್ದುಪಡಿಸುವ ಮೂಲಕ ದೇಶದ ಆರ್ಥಿಕತೆಗೆ ಸಂಚಕಾರ ತಂದಿದ್ದು ಈಗಾಗಲೇ ಬಡತನದ ಬೇಗೆಯಿಂದ ಬಳಲುತ್ತಿರುವ ಲಕ್ಷಾಂತರ ಅಮಾಯಕ ಜನತೆಯನ್ನು ವಿನಾಶದ ಅಂಚಿಗೆ ತಳ್ಳಿದೆ.  ಭಾರತ ಸರ್ಕಾರದ ಈ ಕ್ರಮ ಕೇವಲ ಜಿಗುಪ್ಸೆ ಮೂಡಿಸುವುದೇ ಅಲ್ಲದೆ ಅನೈತಿಕ ಕ್ರಮವೂ ಆಗಿದೆ.

ದೇಶದಲ್ಲಿ ಚಾಲ್ತಿಯಲ್ಲಿದ್ದ ಶೇ 85ರಷ್ಟು ನಗದು ಹಣವನ್ನು ಏಕಾಏಕಿ ರದ್ದುಪಡಿಸುವ ಮೂಲಕ ಜನಸಾಮಾನ್ಯರಿಗೆ ಆಘಾತ ನೀಡಿದೆ. ನೋಟು ಅಮಾನ್ಯೀಕರಣ ಮಾಡುವ ಸರ್ಕಾರದ ನಿರ್ಧಾರ ಸೋರಿಕೆಯಾಗುವುದನ್ನು ತಪ್ಪಿಸಲು ಸರ್ಕಾರ ರದ್ದು ಮಾಡಿದ ನೋಟುಗಳಿಗೆ ಪರ್ಯಾಯವಾಗಿ ಹೊಸ ನೋಟುಗಳನ್ನೂ ಮುದ್ರಿಸಿರಲಿಲ್ಲ. ಹೊಸ ನೋಟುಗಳು ಹಳೆಯ ನೋಟುಗಳಿಗಿಂತ ವಿಭಿನ್ನ ಗಾತ್ರ ಹೊಂದಿದ್ದು ಎಟಿಎಂಗಳಲ್ಲಿ ಹಣ ತುಂಬುವುದೂ ಕಷ್ಟವಾಗಿದೆ.

ಭಾರತ ಎಷ್ಟೇ ತಂತ್ರಜ್ಞಾನದ ಅಭಿವೃದ್ಧಿ ಹೊಂದಿದ್ದರೂ ಇಲ್ಲಿ ಬಡತನ ಮತ್ತು ದಾರಿದ್ರ್ಯ ತಾಂಡವಾಡುತ್ತಿದೆ.  ನಗರ ಪ್ರದೇಶಗಳಲ್ಲಿ ಅನೇಕ ವಾಣಿಜ್ಯ ವಹಿವಾಟುಗಳು ಸ್ಥಗಿತಗೊಂಡಿರುವುದರಿಂದ ಕಾರ್ಮಿಕರು ಪುನಃ ತಮ್ಮ ಗ್ರಾಮಗಳಿಗೆ ವಲಸೆ ಹೋಗುತ್ತಿದ್ದಾರೆ. ಸಾವಿರಾರು ಕಂಪನಿಗಳು ತಮ್ಮ ನೌಕರರಿಗೆ ವೇತನ ಪಾವತಿ ಮಾಡಲು ಹರಸಾಸಹಪಡುತ್ತಿವೆ. ರಿಯಲ್ ಎಸ್ಟೇಟ್ ಮಾರುಕಟ್ಟೆ ಸಂಪೂರ್ಣ ಕುಸಿದಿದೆ.

ಭಾರತದ ಆರ್ಥಿಕತೆ ಹೆಚ್ಚಾಗಿ ನಗದು ಹಣವನ್ನೇ ಆಶ್ರಯಿಸಿದೆ.  ಆದರೆ ಅತಿ ಹೆಚ್ಚಿನ ತೆರಿಗೆ ಮತ್ತು ಕಠಿಣ ನಿಯಮಗಳ ಪರಿಣಾಮವಾಗಿ ಅನೌಪಚಾರಿಕವಾಗಿ ನಗದು ವ್ಯವಸ್ಥೆ ಚಾಲ್ತಿಯಲ್ಲಿರುತ್ತದೆ.  ಸರ್ಕಾರದ ಅಧಿಕಾರಶಾಹಿ ವರ್ಗ ಭ್ರಷ್ಟಾಚಾರ ಲಂಚಗುಳಿತನದಲ್ಲಿ ಮುಳುಗಿಹೋಗಿದೆ. ವಿಶ್ವ ಬ್ಯಾಂಕಿನ ಆರ್ಥಿಕ ಸಮೀಕ್ಷೆಯೊಂದರಲ್ಲಿ 190 ದೇಶಗಳಲ್ಲಿ ವ್ಯಾಪಾರ ವಹಿವಾಟು ಆರಂಭಿಸುವುದು ಎಷ್ಟು ಕಷ್ಟಕರ ಮತ್ತು ನಿರ್ವಹಣೆ ಎಷ್ಟು ಕಠಿಣ ಎಂದು ವಿವರಿಸಲಾಗಿದ್ದು ಈ ದೇಶಗಳ ಪೈಕಿ ಭಾರತ ಕಟ್ಟಕಡೆಯ ಸ್ಥಾನದಲ್ಲಿದೆ.

1970ರ ದಶಕದಲ್ಲಿ ಜನಸಂಖ್ಯಾ ಹೆಚ್ಚಳ ನಿಯಂತ್ರಿಸಲು ಬಲವಂತದ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಸರ್ಕಾರ ಮುಂದಾಗಿತ್ತು. ಆ ನಂತರ ಈ ರೀತಿಯ ಮತ್ತೊಂದು ಅನೈತಿಕ ಕ್ರಮ ಮೋದಿ ಸರ್ಕಾರದ ನೋಟು ರದ್ದತಿಯಲ್ಲಿ ಕಾಣಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. ಇಂದು ಕಾಲ ಶೀಘ್ರವಾಗಿ ಬದಲಾಗುತ್ತಿದ್ದು ಕರೆನ್ಸಿ ರದ್ದತಿಯ ಕ್ರಮದಿಂದ ಭಯೋತ್ಪಾದಕರು ತಮ್ಮ ಮಾರ್ಗ ಸುಲಭವಾಗಿ ಬದಲಿಸುವುದಿಲ್ಲ ಎಂದು ಫೋಬ್ರ್ಸ್ ವರದಿಯಲ್ಲಿ ಹೇಳಲಾಗಿದೆ. ನೋಟು ರದ್ದು ಮಾಡುವ ಭಾರತ ಸರ್ಕಾರದ ನೀತಿಯನ್ನು ಇನ್ನೂ ಹಲವು ರಾಷ್ಟ್ರಗಳು ಅನುಸರಿಸಬಹುದು. ಆದರೆ ಇದರಿಂದ ಪ್ರಜೆಗಳ ಖಾಸಗಿ ಜೀವನದ ಗೋಪ್ಯತೆಗೆ ಭಂಗ ಉಂಟಾಗುವುದೇ ಅಲ್ಲದೆ ಜನರ ಖಾಸಗಿ ಜೀವನದ ಮೇಲೆ ಸರ್ಕಾರದ ನಿಯಂತ್ರಣ ಹೆಚ್ಚಾಗುತ್ತದೆ.

ಭಾರತದ ಸರ್ಕಾರದ ಅಮಾನ್ಯೀಕರಣ ಯೋಜನೆಯಲ್ಲಿ ಮತ್ತೊಂದು ಅನೈತಿಕ ಅಂಶವನ್ನೂ ಕಾಣಬಹುದು. ನಗದು ಎನ್ನುವುದು ಉತ್ಪಾದನೆಯಲ್ಲಿ ತೊಡಗಿರುವ ಸಾಮಾನ್ಯ ಜನರನ್ನು ಪ್ರತಿನಿಧಿಸುತ್ತದೆ. ತಾವು ಉತ್ಪಾದಿಸುವ ವಸ್ತುಗಳು ವiತ್ತು ತಾವು ಒದಗಿಸುವ ಸೇವೆಗಳಿಗೆ ಜನಸಾಮಾನ್ಯರು ನಗದು ಹಣವನ್ನು ಟಿಕೆಟ್ಟಿನಂತೆ ಬಳಸುತ್ತಾರೆ. ರೈಲ್ವೆ ನಿಲ್ದಾಣಗಳಲ್ಲಿ ನಮ್ಮ ವಸ್ತುಗಳನ್ನು ಕ್ಲೋಕ್ ಕೋಣೆಯಲ್ಲಿರಿಸಿದಾಗ ನಮ್ಮ ವಸ್ತುಗಳನ್ನು ಗುರುತಿಸಲು ನೀಡುವ ಗುರುತಿನ ಚೀಟಿಯಂತೆ ನಗದು ಸಹ ನೆರವಾಗುತ್ತದೆ.

ಸಂಪನ್ಮೂಲಗಳನ್ನು ಸೃಷ್ಟಿಸುವುದು ಮತ್ತು ಉತ್ಪಾದಿಸುವುದು ಜನಸಾಮಾನ್ಯರೇ ಹೊರತು ಸರ್ಕಾರಗಳಲ್ಲ. ಆದರೆ ಭಾರತ ಸರ್ಕಾರ ತನ್ನ ಪ್ರಜಾತಾಂತ್ರಿಕ ಮೌಲ್ಯಗಳೆಲ್ಲವನ್ನೂ ಗಾಳಿಗೆ ತೂರಿ ಜನಸಾಮಾನ್ಯರ ಖಾಸಗಿ ಆಸ್ತಿಯನ್ನು ಲೂಟಿ ಮಾಡಿರುವುದೇ ಅಲ್ಲದೆ ಯಾವುದೇ ನಿರ್ದಿಷ್ಟ ನಿಯಮಗಳನ್ನು ಪಾಲಿಸದೆ ವಂಚನೆ ಮಾಡಿದೆ. ಇಂತಹ ಕ್ರಮಗಳನ್ನು ವೆನೆಜುವೆಲಾದಂತಹ ದೇಶಗಳಲ್ಲಿ ನಿರೀಕ್ಷಿಸಬಹುದು ವಿಶ್ವದ ಅತಿ ದೊಡ್ಡ ಪ್ರಜಾತಂತ್ರ ರಾಷ್ಟ್ರವಾದ ಭಾರತದಲ್ಲಿ ಅಲ್ಲ.

ಜನಸಾಮಾನ್ಯರ ಆಸ್ತಿಯನ್ನು ಅಪಹರಿಸುವ ಮೂಲಕ, ಅವಕಾಶವಂಚಿತ ಬಡ ಜನತೆಯ ಜೀವನವನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡುವ ಮೂಲಕ, ದೇಶದ ಸಾಮಾಜಿಕ ವಿಶ್ವಾಸಕ್ಕೆ ಭಂಗ ತರುವ ಮೂಲಕ ಮೋದಿ ಸರ್ಕಾರ ದೇಶದ ರಾಜಕಾರಣವನ್ನೇ ವಿಷಪೂರಿತವನ್ನಾಗಿ ಮಾಡಿದ್ದು ಭವಿಷ್ಯದಲ್ಲಿ ಬಂಡವಾಳ ಹೂಡಿಕೆಗೆ ಸಂಚಕಾರ ತಂದಿದೆ. ಅನೈತಿಕವಾಗಿ ದೇಶದ ಜನತೆಯನ್ನು ಸಂಕಷ್ಟಕ್ಕೆ ಗುರಿಮಾಡಿದ್ದು ವಿಶ್ವದ ಇತರ ದೇಶಗಳಿಗೆ ಅನಿಷ್ಟ ಉದಾಹರಣೆಯನ್ನು ನೀಡಿದೆ.

ಭಾರತ ವಿಶ್ವದಲ್ಲಿ ಒಂದು ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಆದಾಯ ತೆರಿಗೆ ಮತ್ತು ವಾಣಿಜ್ಯ ತೆರಿಗೆ ದರಗಳನ್ನು ತಗ್ಗಿಸಬೇಕು. ಇಡೀ ತೆರಿಗೆ ರಚನೆಯನ್ನು ಸರಳಗೊಳಿಸಬೇಕು. ಸ್ವಿಸ್ ಫ್ರಾಂಕಿನಂತೆ ರೂಪಾಯಿಯನ್ನು ಶಕ್ತಿಯುತವನ್ನಾಗಿ ಮಾಡಬೇಕು. ನಿಯಮಗಳನ್ನು ಸಡಿಲಿಸುವ ಮೂಲಕ ಯಾವುದೇ ವಾಣಿಜ್ಯ ಉದ್ಯಮವನ್ನು ಸ್ಥಾಪಿಸುವ ಮಾರ್ಗವನ್ನು ಸುಗಮಗೊಳಿಸಬೇಕು. ಆಗ ಭಾರತ ಒಂದು ಬಲಿಷ್ಠ ರಾಷ್ಟ್ರವಾಗಬಹುದೇ ಹೊರತು ನೋಟು ಅಮಾನ್ಯೀಕರಣದಂತಹ ಅಸಹ್ಯಕರ, ಅನೈತಿಕ ಕ್ರಮದಿಂದಲ್ಲ. ತನ್ನ ಈ ಕ್ರಮದಿಂದ ಭಾರತ ಸರ್ಕಾರ ದೇಶದ ಬಡಜನತೆಯ ಜೀವನನ್ನು ಮತ್ತಷ್ಟು ಕಠಿಣಗೊಳಿಸಿದೆ.