ಸಿದ್ದು ಸರಕಾರದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲ: ಸಂತೋಷ ಹೆಗ್ಡೆ

ಹಾಸನ : ಲೋಕಾಯುಕ್ತ ಸಂಸ್ಥೆಯ ಅಧಿಕಾರ ಮೊಟಕುಗೊಳಿಸುವುದರೊಂದಿಗೆ ರಾಜ್ಯ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ದುರ್ಬಲಗೊಳಿಸುತ್ತಿದೆ ಎಂದು ಮಾಜಿ ಲೋಕಾಯುಕ್ತ, ಜಸ್ಟಿಸ್ ಸಂತೋಷ್ ಹೆಗ್ಡೆ ಟೀಕಿಸಿದರು.

ಆದಿಚುಂಚನಗಿರಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ನ್ಯಾ ಹೆಗ್ಡೆ, “ನಾನು ಈವರೆಗೆ ಭೇಟಿ ನೀಡಿರುವ 800ಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಭ್ರಷ್ಟಾಚಾರದ ವಿರುದ್ಧ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದೇನೆ;; ಎಂದರು.

“ಸುಮಾರು 2.12 ಲಕ್ಷ ಕೋಟಿ ರೂ ಮೌಲ್ಯದ ಕಲ್ಲಿದ್ದಲು ಹಗರಣ ಬೆಳಕಿಗೆ ಬಂದಿದೆ. ಸರ್ಕಾರಿ ಸಿಬ್ಬಂದಿಯ ನಾಲ್ಕು ವರ್ಷಗಳವರೆಗಿನ ಸಂಬಳವನ್ನು ಈ ಹಣದಿಂದ ಪಾವತಿಸಬಹುದು. ಆದರೆ ವಶಪಡಿಸಿಕೊಳ್ಳಲಾಗಿರುವ ಇಷ್ಟೊಂದು ದೊಡ್ಡ ಮೊತ್ತದ ಹಣ ಕೆಲವೇ ಕೆಲವು ಜನರ ಪಾಲಾಗಿದೆ. ಇದು ದುರಂತ” ಎಂದವರು ವಿಷಾದಿಸಿದರು.

“2010ರಲ್ಲಿ ಬೆಳಕಿಗೆ ಬಂದಿದ್ದ ಕಾಮನ್ವೆಲ್ತ್ ಹಗರಣದಲ್ಲಿ 70,000 ಕೋಟಿ ರೂ ಮತ್ತು 2ಜಿ ಹಗರಣದಲ್ಲಿ 1.76 ಲಕ್ಷ ಕೋಟಿ ರೂ ಕೆಲವರ ಕೈ ಸೇರಿತ್ತು. ಈ ದೇಶದಲ್ಲಿ ಅಕ್ಷರಸ್ಥರ ಸಂಖ್ಯೆ ಕಡಿಮೆ ಇದ್ದ 1940 ಹೊತ್ತಿಗೆ ಭ್ರಷ್ಟಾಚಾರವಿರಲಿಲ್ಲ. ಈಗ ಸಾಕ್ಷರತೆ ಹೆಚ್ಚಾದಂತೆ ಭ್ರಷ್ಟಾಚಾರ ಪ್ರಮಾಣವೂ ಹೆಚ್ಚಾಗಿದೆ” ಎಂದು ಹೆಗ್ಡೆ ಹೇಳಿದರು.

ವಿಪಕ್ಷಗಳು ವಾಕ್ ಸ್ವಾತಂತ್ರ್ಯದ ಹೆಸರಲ್ಲಿ `ಅಸಂಬದ್ಧ’ ವಿಷಯಗಳ ಬಗ್ಗೆ ಧ್ವನಿ ಎತ್ತುತ್ತಿವೆ. ಹಾಗಾಗಿ ಇಲ್ಲಿನ ಜಟಿಲ ಮತ್ತು ನೈಜ ಸಂಗತಿ ಗೌಣವಾಗಿದೆ ಎಂದವರು ವಿಪಕ್ಷ ವಿರುದ್ಧ ಟೀಕಿಸಿದರು.

ಒಟ್ಟು 542 ಸಂಸದರಲ್ಲಿ, ಸದನದ ಕಲಾಪದ ವೇಳೆ ಬರೀ 174 ಸದಸ್ಯರು ಮಾತನಾಡುತ್ತಾರೆ. ಪ್ರತಿಯೊಂದು ಕ್ಷೇತ್ರವೂ ಜಾತಿ ಮತ್ತು ಹಣದಿಂದ ನಿಯಂತ್ರಿಸಲ್ಪಟ್ಟಿದೆ ಎಂದರು.