ಬಂಟ್ವಾಳ ಎಸೈ ರಕ್ಷಿತ್ ಅಮಾನತಿಗೆ ಆಗ್ರಹ

ಜೆಡಿಎಸ್ ಅಲ್ಪಸಂತ್ಯಾತ ಘಟಕ ಸೀಎಂಗೆ ಮನವಿ

ಮಂಗಳೂರು : ಬಂಟ್ವಾಳ ನಗರ ಠಾಣಾಧಿಕಾರಿ ರಕ್ಷಿತ್ ಎ ಕೆ ಅವರು ಕಳೆದ ಎರಡು ತಿಂಗಳಿನಿಂದ ಅಲ್ಪಸಂಖ್ಯಾತ ಸಮುದಾಯವನ್ನು ಮಾತ್ರ ಗುರಿಯಾಗಿಸಿ ಕಾನೂನು ಅಸ್ತ್ರ ಪ್ರಯೋಗದಲ್ಲಿ ನಿರತರಾಗಿದಾರೆಂದು ಆರೋಪಿಸಿ ಅವರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸುವಂತೆ ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕ ರಾಜ್ಯ ಮುಖ್ಯಮಂತ್ರಿಗೆ ಲಿಖಿತ ಮನವಿ ಸಲ್ಲಿಸಿದೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲಿಖಿತ ಮನವಿ ಸಲ್ಲಿಸಿರುವ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ದ ಕ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಹಾರೂನ್ ರಶೀದ್ ಬಂಟ್ವಾಳ ಅವರು ಕಳೆದ ಮೇ ತಿಂಗಳಲ್ಲಿ ಕಲ್ಲಡ್ಕದಲ್ಲಿ ಪ್ರಾರಂಭಗೊಂಡ ಕೋಮು ಸಂಘರ್ಷದ ಬಳಿಕ ಬಂಟ್ವಾಳ ನಗರ ಠಾಣಾಧಿಕಾರಿ ರಕ್ಷಿತ್ ಅವರು ಏಕಪಕ್ಷೀಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಸ್ಲಿಂ ಸಮುದಾಯದ ಯುವಕರ ಮೇಲೆ ವಿನಾಕಾರಣ ಕಠಿಣ ಐಪಿಸಿ ಕಲಂಗಳನ್ನು ಜಡಿಯುವ ಮೂಲಕ ಮುಸ್ಲಿಂ ಸಮುದಾಯದ ವಿರುದ್ಧ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಇತ್ತೀಚೆಗೆ ಪೊಲೀಸರು ನಡೆಸಿದ ದಾಳಿ ಸಂದರ್ಭ ಮನೆಯೊಳಗಿನ ಮುಸ್ಲಿಂ ಗ್ರಂಥಗಳನ್ನು ಎಸೆದು ಅವಮಾನ ಮಾಡಿರುವ ಬಗ್ಗೆ ವರದಿ ಪ್ರಕಟಿಸಿದ ವಾರ್ತಾಭಾರತಿ ಪತ್ರಿಕೆಯ ಬಂಟ್ವಾಳ ವರದಿಗಾರ ಇಂತಿಯಾಝ್ ಅವರನ್ನು ಏಕಾಏಕಿ ಯಾವುದೇ ನೋಟೀಸು ನೀಡದೆ ಬಂಧಿಸಿದ್ದಲ್ಲದೆ, ಬಳಿಕ ಕೊಲೆ ಆರೋಪಿ ತರ ಠಾಣೆಯಲ್ಲಿ ನಡೆಸಿಕೊಂಡಿರುತ್ತಾರೆ ಎಂದು ಆರೋಪಿಸಿರುವ ಹಾರೂನ್ ರಶೀದ್ ಈ ಎಲ್ಲ ಪ್ರಕರಣಗಳ ಬಗ್ಗೆ ಮುಖ್ಯಮಂತ್ರಿ ತನಿಖೆಗೆ ಆದೇಶಿಸಬೇಕು ಹಾಗೂ ಎಸೈ ರಕ್ಷಿತ್ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.