ನಾದುರಸ್ತಿಯಲ್ಲಿರುವ ವಾಣೀನಗರ- ಕಿನ್ನಿಂಗಾರು ರಸ್ತೆ ರಿಪೇರಿಗೆ ಆಗ್ರಹ

ಸಂಚಾರ ಅಯೋಗ್ಯವಾಗಿರುವ ರಸ್ತೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಸೂರಂಬೈಲು-ವಾಣೀನಗರ-ಕಿನ್ನಿಂಗಾರು ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಈ ರಸ್ತೆಯ ವಾಹನ ಸಂಚಾರ ದುಸ್ತರವೆನಿಸಿದೆ.

ಎಂಡೋಸಲ್ಫಾನ್ ಪೀಡಿತ ಪ್ರದೇಶವಾದ ವಾಣೀನಗರ ಜಿಲ್ಲೆಯಲ್ಲೇ ತೀರಾ ಹಿಂದುಳಿದ ಪ್ರದೇಶವಾಗಿದ್ದು, ಗಡಿ ಪ್ರದೇಶವಾಗಿಯೂ ಸರಕಾರದ ಅಭಿವೃದ್ಧಿ ಯೋಜನೆಗಳು ಇನ್ನೂ ಇಲ್ಲಿಯವರೆಗೆ ಕಾಲಿರಿಸಿಲ್ಲ. ಕೆಲ ವರ್ಷಗಳ ಹಿಂದೆ ಐದಾರು ಬಸ್ಸುಗಳು ದಿನವೊಂದಕ್ಕೆ ತಲಾ ಮೂರು ಬಾರಿ ಈ ರಸ್ತೆಯ ಮೂಲಕ ಸೇವೆ ಒದಗಿಸುತ್ತಿತ್ತು. ಆದರೆ ಈಗ ಅದು ಮೂರಕ್ಕಿಳಿದಿದೆ. ಏಕೈಕ ಸರಕಾರಿ ಬಸ್ ನಷ್ಟದ ನೆಪವೊಡ್ಡಿ ಸೇವೆ ಮೊಟಕುಗೊಳಿಸಿ ವರುಷಗಳೇ ಕಳೆದಿದೆ. ರಸ್ತೆಯ ದುಸ್ಥಿತಿಯ ಕಾರಣ ಬಿಡಿ ಭಾಗಗಳು ದುರಸ್ತಿಗೆ ಬರುತ್ತಿದ್ದು, ಪದೇಪದೇ ಸೇವೆ ಮೊಟಕುಗೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಹಾಗೂ ಬಸ್ ಸಹಿತ ಈ ರಸ್ತೆ ಮೂಲಕ ಸಂಚರಿಸುತ್ತಿರುವ ಆಟೋ ಹಾಗೂ ಟ್ಯಾಕ್ಸಿ ವಾಹನಗಳು ನಷ್ಟದ ಹಾದಿಯಲ್ಲೇ ಸಂಚರಿಸುತ್ತಿವೆ.

ವಾಣೀನಗರದಲ್ಲಿದ್ದ ಕೇರಳ ಗ್ರಾಮೀಣ ಬ್ಯಾಂಕ್ ಶಾಖೆಯು ವ್ಯವಹಾರ ಕೊರತೆಯಿಂದ ವರುಷಗಳ ಹಿಂದೆ ಸ್ವರ್ಗಕ್ಕೆ ಸ್ಥಳಾಂತರಗೊಂಡಿದ್ದು, ಇತರ ಮೂಲಭೂತ ಸೌಕರ್ಯಗಳಾದ ಪಡ್ರೆ ಹೈಯರ್ ಸೆಕೆಂಡರಿ-ಪ್ರಾಥಮಿಕ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಆಸ್ಪತ್ರೆ, ಅಂಚೆ ಕಚೇರಿ, ದೂರವಾಣಿ ಕೇಂದ್ರ, ಹಿಂದುಳಿದ ವರ್ಗದ ಮಕ್ಕಳ ವಸತಿ ಕೇಂದ್ರ, ಪಡಿತರ ವಿತರಣಾ ಕೇಂದ್ರಗಳಿಗೆ ತೆರಳುವ ನೂರಾರು ಜನರು ಕಷ್ಟ ಅನುಭವಿಸುತ್ತಿದ್ದಾರೆ.

5.280 ಕಿ ಮೀ ಉದ್ದದ ಈ ರಸ್ತೆಯ ಬಹುಭಾಗ ರಕ್ಷಿತಾರಣ್ಯದ ಮೂಲಕ ಹಾದು ಹೋಗುತ್ತಿದ್ದು, ಬೃಹತ್ ಗಾತ್ರದ ಸಾಲುಮರಗಳು ರಸ್ತೆಯ ಮೇಲೆ ಬೀಳುವಂತೆ ವಾಲಿಕೊಂಡಿದ್ದು ಅಪಾಯದ ಭೀತಿ ಸೃಷ್ಟಿಸುತ್ತಿದೆ. ವರ್ಷಂಪ್ರತಿ ಗಾಳಿ ಮಳೆಗೆ  ಮರಗಳು ರಸ್ತೆಗುರುಳುತ್ತಿದ್ದು, ಮಳೆಗಾಲದಲ್ಲಂತೂ ರಸ್ತೆ ತಡೆ ಮಾಮೂಲಿಯಾಗಿದೆ. ದಿನವಹಿ ಹಲವು ಶಾಲಾ ವಾಹನಗಳು, ಇತರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಬಸ್ ಸಂಚಾರ ಮೊಟಕುಗೊಳ್ಳುವ ಸಂದರ್ಭಗಳಲ್ಲಿ ಪಡ್ರೆ, ವಾಣೀನಗರ, ಬೆಟ್ಟಂಪಾಡಿ, ಮುಳ್ಳೇರಿಯಾ, ಬದಿಯಡ್ಕ, ಅಡ್ಯನಡ್ಕ, ಪುತ್ತೂರು ಹಾಗೂ ಇತರ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯರು ಈ ಹಾದಿಯಲ್ಲಿ ನಡೆದಾಡುತ್ತಿದ್ದು, ಭೀತಿ ಸೃಷ್ಟಿಸುತ್ತಿರುವ ಸಾಲು ಮರಗಳನ್ನು ತೆರವುಗೊಳಿಸಬೇಕೆಂಬುದಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.