ಅತ್ಯಾಚಾರ ಆರೋಪಿಯ ಡಿ ಸಿ ಮನ್ನಾ ಜಮೀನು ಮಂಜೂರಾತಿ ಸಮಿತಿಯಿಂದ ಉಚ್ಛಾಟಿಸಲು ಆಗ್ರಹ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಡಿ ಸಿ ಮನ್ನಾ ಜಮೀನು ಮಂಜೂರಾತಿ ಸಮಿತಿಯಲ್ಲಿ ಸದಸ್ಯನಾಗಿರುವ ಅತ್ಯಾಚಾರ ಆರೋಪಿಯನ್ನು ತಕ್ಷಣವೇ ಉಚ್ಚಾಟಿಸಬೇಕೆಂದು ಜಿಲ್ಲಾ ದಲಿತ ಸೇವಾ ಸಮಿತಿಯು ಜಿಲ್ಲಾಧಿಕಾರಿ ಮತ್ತು ಉಸ್ತುವಾರಿ ಸಚಿವರನ್ನು ಒತ್ತಾಯಿಸಿದೆ.

ದ ಸೇ ಸಮಿತಿಯ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಸುದ್ದಿಗಾರರಿಗೆ ಈ ವಿಚಾರ ತಿಳಿಸಿದರು. ಗೋಳ್ತಮಜಲು ಗ್ರಾಮದ ಮಾಣಿಮಜಲು ನಿವಾಸಿ ರುಕ್ಮಯ ಎಂಬಾತ ಕಳೆದ ಮೂರು ವರ್ಷಗಳಿಂದ ಬರಿಮಾರು ಗ್ರಾಮದ ಸ್ವಜಾತಿ ಯುವತಿಯೊಂದಿಗೆ ಪ್ರೀತಿಯ ನಾಟಕವಾಡಿದ್ದ. ಮದುವೆಯ ಭರವಸೆ ನೀಡಿದ್ದ ರುಕ್ಮಯ ಬಲಾತ್ಕಾರವಾಗಿ ದೈಹಿಕ ಸಂಬಂಧ ನಡೆಸಿದ ಪರಿಣಾಮ ಯುವತಿ ಗರ್ಭವತಿಯಾಗಿದ್ದಳು. ಯುವತಿ ಮದುವೆಯಾಗಲು ಒತ್ತಾಯ ಮಾಡುತ್ತಿದ್ದಂತೆ ಭರವಸೆ ನೀಡಿದ್ದ ರುಕ್ಮಯ ಪರಾರಿಯಾಗಿದ್ದ ಕಾರಣ ಆಕೆ ಸ್ಥಳೀಯ ಆಶಾ ಕಾರ್ಯಕರ್ತೆ ಹಾಗೂ ದಾದಿಯರೊಂದಿಗೆ ತನ್ನ ನೋವು ಹಂಚಿಕೊಂಡಿದ್ದಳು. ಈ ಬಗ್ಗೆ ಸ್ಪಂದಿಸಿದ ಆಶಾ ಕಾರ್ಯಕರ್ತೆ ಮತ್ತು ದಾದಿಯರು ಯುವತಿಯನ್ನು ಮಾಣಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಿದ್ದಲ್ಲದೇ ಅಲ್ಲಿನ ವೈದ್ಯರ ಸಲಹೆಯಂತೆ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಆರೋಪಿ ರುಕ್ಮಯನ ಅಣ್ಣ ಮೋನಪ್ಪ ಮತ್ತು ರಾಘವೇಂದ್ರ ಸುರುಳಿಮೂಲೆ ಎಂಬಿಬ್ಬರು ಯುವತಿ ಹಾಗೂ ತಾಯಿಯನ್ನು ಭೇಟಿಯಾಗಿ ಗರ್ಭಪಾತ ಮಾಡಿಸುವಂತೆ ಒತ್ತಾಯಿಸಿದ್ದಾರೆಂದು ಸಂತ್ರಸ್ತೆ ತಿಳಿಸಿದ್ದಾಳೆ. ಗರ್ಭಪಾತ ಮಾಡಿಸದಿದ್ದರೆ ನಿಮ್ಮನ್ನು ಬದುಕಲು ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿದ್ದ ಕಾರಣ ಮೂವರು ಆರೋಪಿಗಳ ವಿರುದ್ಧ 15-10-2017ರಂದು ಬಂಟ್ವಾಳ ಗ್ರಾಮಾಂತರ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಾಳೆ.

ಅತ್ಯಾಚಾರ ಪ್ರಕರಣ ಸಂತ್ರಸ್ತೆ ನೀಡಿರುವ ದೂರಿನ ಬಗ್ಗೆ ತನಿಖೆ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಆರೋಪಿಗಳಾದ ರುಕ್ಮಯ, ಮೋನಪ್ಪ ಮತ್ತು ರಾಘವೇಂದ್ರ ಸುರುಳಿಮೂಲೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಐಪಿಸಿ 1860 ಕಲಂ ಅನ್ವಯ 376, 506 ಮತ್ತು 34 ಸೆಕ್ಷನ್ ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಬಡ ಯುವತಿ ದೂರು

ನೀಡಿ ತಿಂಗಳು ಕಳೆದರೂ ಬಂಟ್ವಾಳ ಪೊಲೀಸರು ಅದ್ಯಾಕೋ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಂಧಿಸಿಲ್ಲವಾಗಿದೆ. ಈ ಮಧ್ಯೆ ಅತ್ಯಾಚಾರ ಪ್ರಕರಣದ ಆರೋಪಿಗಳ ಪೈಕಿ ರಾಘವೇಂದ್ರ ಸುರುಳಿಮೂಲೆ ಎಂಬಾತ ಉಸ್ತುವಾರಿ ಸಚಿವರ ಶಿಫಾರಸು ಪಡೆದು ಬಂಟ್ವಾಳ ತಾಲೂಕು ಡಿ ಸಿ ಮನ್ನಾ ಜಮೀನು ಮಂಜೂರಾತಿ ಸಮಿತಿಯ ಸದಸ್ಯನಾಗಿದ್ದಾನೆ.

ಈ ಬಗ್ಗೆ ಮಾತನಾಡಿದ ದ ಸೇ ಸಮಿತಿಯ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಅತ್ಯಾಚಾರ ಆರೋಪಿಯೊಬ್ಬ ಸಮಿತಿಯಲ್ಲಿರುವುದು ಶೋಭೆಯಲ್ಲ. ತಕ್ಷಣವೇ ಆತನನ್ನು ಸಮಿತಿಯಿಂದ ಉಚ್ಚಾಟಿಸಬೇಕು ಹಾಗೂ ಬಂಟ್ವಾಳ ಪೊಲೀಸರು ಯಾವುದೇ ಒತ್ತಡಕ್ಕೆ ತಲೆಬಾಗದೇ ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕೆಂದು ದಾಖಲೆಗಳ ಸಹಿತ ಒತ್ತಾಯಿಸಿದ್ದಾರೆ.